ಕೋಲ್ಕತಾ: ಪ್ರತಿಭಟನಾ ನಿರತ ಶಿಕ್ಷಕ ಉದ್ಯೋಗಾಕಾಂಕ್ಷಿಗಳ ಮೇಲೆ ಪೊಲೀಸರು ಮಧ್ಯರಾತ್ರಿ ಬಲವಂತದಿಂದ ಲಾಠಿಪ್ರಯೋಗ ನಡೆಸಿರುವ ಪಶ್ಚಿಮಬಂಗಾಳ ಪೊಲೀಸರ ಕ್ರಮದ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದು, ಪಶ್ಚಿಮಬಂಗಾಳದ ದುರಾಡಳಿತ ಮತ್ತು ಭ್ರಷ್ಟಾಚಾರವನ್ನು ಇಡೀ ದೇಶವೇ ನೋಡುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:1747.37 ಕೋಟಿ ರೂ. ಬಂಡವಾಳ ಹೂಡಿಕೆಯ 35 ಯೋಜನೆಗಳಿಗೆ ಅನುಮೋದನೆ
2014ರ ಟಿಇಟಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರನ್ನು ಅರ್ಹತಾ ಪಟ್ಟಿಯಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪಶ್ಚಿಮಬಂಗಾಳ ಪೊಲೀಸರು ಬಲವಂತದಿಂದ ಲಾಠಿಪ್ರಹಾರ ನಡೆಸಿ ಚದುರಿಸಿದ್ದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮಬಂಗಾಳ ಸರ್ಕಾರ ಶಿಕ್ಷಕರ ನೇಮಕಾತಿ ಹಗರಣದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಪ್ರತಿಭಟನಾಕಾರರನ್ನು ಹತ್ತಿಕ್ಕುತ್ತಿರುವುದು ಯಾಕೆ ಎಂದು ಇರಾನಿ ಪ್ರಶ್ನಿಸಿದ್ದು, ಹಗರಣದ ಮುಖ್ಯ ರೂವಾರಿ ಪಾರ್ಥ ಚಟರ್ಜಿ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಪಶ್ಚಿಮಬಂಗಾಳ ಸರ್ಕಾರದ ಕಿರುಕುಳ, ಭ್ರಷ್ಟಾಚಾರ ಮತ್ತು ದುರಾಡಳಿತವನ್ನು ಇಡೀ ದೇಶವೇ ನೋಡುತ್ತಿದೆ. ಸಿಂಗೂರ್ ನಲ್ಲಿ ಟಾಟಾ ಕಂಪನಿಯ ಫ್ಯಾಕ್ಟರಿಯನ್ನು ಮುಚ್ಚಿಸಿರುವ ಮಮತಾ ಬ್ಯಾನರ್ಜಿಯ ರಾಜಕೀಯದ ಬಗ್ಗೆ ಪಶ್ಚಿಮಬಂಗಾಳದ ಪ್ರತಿಯೊಬ್ಬರಿಗೂ ತಿಳಿದಿದೆ ಎಂದು ಇರಾನಿ ವಾಗ್ದಾಳಿ ನಡೆಸಿದರು.