Advertisement

ಹೆಚ್ಚಿದ ಮತ ಪ್ರಮಾಣ ಯಾರ ಗೆಲುವಿಗೆ ಬುತ್ತಿ?

11:08 AM May 20, 2019 | pallavi |

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಉಪ ಸಮರದಲ್ಲಿ ಬಿರುಬಿಸಿಲಿಗೂ ಸವಾಲೊಡ್ಡುವ ರೀತಿಯಲ್ಲಿ ದಾಖಲೆ ಮತದಾನವಾಗಿದೆ. ಮತಪ್ರಮಾಣ ಹೆಚ್ಚಳವನ್ನು ಮೈತ್ರಿಕೂಟ ಹಾಗೂ ಬಿಜೆಪಿ ಕಡೆಯವರು ತಮ್ಮ ಅಭ್ಯರ್ಥಿ ಗೆಲುವಿಗೆ ಅನುಕೂಲವಿದು ಎಂದು ವ್ಯಾಖ್ಯಾನಿಸತೊಡಗಿದ್ದಾರೆ.

Advertisement

ಸಿ.ಎಸ್‌. ಶಿವಳ್ಳಿ ಅವರ ಅಕಾಲಿಕ ನಿಧನದಿಂದ ಎದುರಾದ ಉಪ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸಿ.ಎಸ್‌. ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡ್ರ ಸ್ಪರ್ಧಿಸಿದ್ದು, ರವಿವಾರ ಬಹುತೇಕ ಶಾಂತಿಯುತ ಮತದಾನ ನಡೆದಿದೆ. ಮತ ಪ್ರಮಾಣ ಹೆಚ್ಚಳವಾಗಬೇಕೆಂದು ಲೋಕಸಭೆ ಚುನಾವಣೆ ಹಾಗೂ ಮತಜಾಗೃತಿ ಬಗ್ಗೆ ಜಿಲ್ಲಾ ಚುನಾವಣಾ ವಿಭಾಗ ಹಾಗೂ ಸ್ವೀಪ್‌ ಕೈಗೊಂಡ ಪ್ರಚಾರ ಕಾರ್ಯಕ್ಕೆ ಉತ್ತಮ ಸ್ಪಂದನೆ ಎನ್ನುವಂತೆ ಶೇ.82.42 ದಾಖಲೆ ಮತದಾನವಾಗಿದೆ.

2018ರ ವಿಧಾನಸಭೆ ಚುನಾವಣೆ ಮತದಾನಕ್ಕೆ ಹೋಲಿಸಿದರೆ ಉಪ ಚುನಾವಣೆಯಲ್ಲಿ ಶೇ.3.75 ಮತದಾನ ಹೆಚ್ಚಳವಾಗಿದೆ. ಒಂದು ಕಡೆ ಉರಿಬಿಸಿಲು, ಮತ್ತೂಂದು ಕಡೆ ಕೆಲ ದಿನಗಳ ಹಿಂದೆಯಷ್ಟೇ ಲೋಕಸಭೆ ಚುನಾವಣೆಗೆ ಮತದಾನ ಮಾಡಲಾಗಿದ್ದು, ಉಪ ಚುನಾವಣೆಯಲ್ಲಿ ಹೆಚ್ಚಿನ ಜನ ಮತದಾನಕ್ಕೆ ಮುಂದಾಗಲಾರರು ಎಂಬ ಕೆಲವರ ನಿರೀಕ್ಷೆ ಹುಸಿಗೊಳಿಸಿ ಕುಂದಗೋಳ ಮತದಾರರು ಉತ್ತಮ ಸ್ಪಂದನೆ ತೋರಿದ್ದಾರೆ.

ಜಿದ್ದಾಜಿದ್ದಿಯ ಕಣ: ಕುಂದಗೋಳ ವಿಧಾನಸಭೆ ಉಪ ಚುನಾವಣೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಹಾಗೂ ಬಿಜೆಪಿಗೆ ಜಿದ್ದಾಜಿದ್ದಿ ವೇದಿಕೆಯಾಗಿತ್ತು. ಸ್ಥಾನ ಉಳಿಸಿಕೊಳ್ಳಲು ಮೈತ್ರಿಕೂಟ, ಸ್ಥಾನ ಕಿತ್ತುಕೊಳ್ಳಲು ಬಿಜೆಪಿ ಸಾಕಷ್ಟು ಸರ್ಕಸ್‌ಗಿಳಿದಿದ್ದವು.

ಉಪ ಚುನಾವಣೆ ಫ‌ಲಿತಾಂಶ ರಾಜ್ಯ ಸಮ್ಮಿಶ್ರ ಸರಕಾರದ ಮೇಲೆ ತನ್ನದೇ ಪರಿಣಾಮ ಬೀರಬಹುದಾಗಿದೆ ಎಂಬ ಅನಿಸಿಕೆ ಹಿನ್ನೆಲೆಯಲ್ಲಿ ಕ್ಷೇತ್ರದ ಗೆಲುವು ಎರಡು ಕಡೆಯವರಿಗೂ ತೀವ್ರತೆ ಸೃಷ್ಟಿಸಿತ್ತು. ಗೆಲುವು ತಮ್ಮದಾಗಲೇಬೇಕೆಂಬ ಜಿದ್ದಿನೊಂದಿಗೆ ಎರಡು ಕಡೆಯ ನಾಯಕರು, ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಪೈಪೋಟಿ ರೂಪದಲ್ಲಿ ಪ್ರಚಾರ, ಮತದಾರರ ಮನವೊಲಿಕೆ ಕಾರ್ಯ ಕೈಗೊಂಡಿದ್ದರು.

Advertisement

ಗೆಲುವಿನ ವ್ಯಾಖ್ಯಾನ: ಕುಂದಗೋಳ ವಿಧಾನಸಭೆ ಉಪ ಚುನಾವಣೆ ಮತ ಸಮರ ಮುಗಿದಿದೆ. ಮತದಾರರ ತೀರ್ಪು ಮತಯಂತ್ರಗಳನ್ನು ಸೇರಿಯಾಗಿದೆ. ಇನ್ನೇನಿದ್ದರೂ ಫ‌ಲಿತಾಂಶ ಏನೆಂಬುದನ್ನು ಎದುರು ನೋಡುವುದಷ್ಟೆ.

ಎರಡು ಕಡೆಯವರು ಗೆಲುವು ತಮ್ಮದೇ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್‌ನವರು ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರಿಗೆ ಅನುಕಂಪ ದೊಡ್ಡ ಮಟ್ಟದಲ್ಲಿ ಕೈ ಹಿಡಿಯಲಿದೆ. ಸಿ.ಎಸ್‌. ಶಿವಳ್ಳಿ ಅವರು ಕ್ಷೇತ್ರದ ಅಭಿವೃದ್ಧಿ ಹಾಗೂ ಎಲ್ಲ ಜಾತಿಯ ಬಡವರ ಸಮಸ್ಯೆ, ನೋವುಗಳಿಗೆ ಸ್ಪಂದಿಸಿದ್ದು, ಕುಟುಂಬ ಸದಸ್ಯನ ರೀತಿಯಲ್ಲಿ ನೆರವು ನೀಡಿದ್ದು ಸಹ ಜನರ ಮನಸ್ಸಿನಲ್ಲಿದ್ದು, ಅದು ಪಕ್ಷದ ಅಭ್ಯರ್ಥಿ ಗೆಲುವನ್ನು ಸುಲಭವಾಗಲಿದೆ ಎಂಬುದಾಗಿದೆ.

ದಾಖಲೆ ಮತದಾನವೂ ನಮಗೆ ವರವಾಗಲಿದೆ ಎಂಬುದು ಮೈತ್ರಿಕೂಟ ಮುಖಂಡರ ಅನಿಸಿಕೆ. ಶಿವಳ್ಳಿ ಅವರ ಮೇಲಿನ ಅನುಕಂಪವೇ ಹೆಚ್ಚು ಹೆಚ್ಚು ಜನರನ್ನು ಮತಕೇಂದ್ರಗಳಿಗೆ ಕರೆತಂದಿದ್ದು, ದಾಖಲೆ ಮತದಾನಕ್ಕೆ ಕಾರಣವಾಗಿದೆ. ನಮ್ಮ ಅಭ್ಯರ್ಥಿ ಗೆಲುವು ಖಚಿತ ಎಂಬುದು ಹಲವು ಮುಖಂಡರ ವಾದವಾದರೆ, ಇನ್ನು ಕೆಲವರು ಮತದಾನ ಹೆಚ್ಚಳ ಯಾರಿಗೆ ಲಾಭ ಎಂಬ ಗೊಂದಲ ಕಾಡುತ್ತಿದೆ ಎನ್ನುತ್ತಿದ್ದಾರೆ.

ಬಿಜೆಪಿಯವರು ಸಹ ನಮ್ಮ ಅಭ್ಯರ್ಥಿ ಎರಡು ಬಾರಿ ಸೋತ ಅನುಕಂಪ ನಮ್ಮ ಕೈ ಹಿಡಿಯಲಿದೆ. ಬಿಜೆಪಿ ನಾಯಕರ ಸಂಘಟಿತ ಪ್ರಯತ್ನ, ಪ್ರಚಾರ ನಮಗೆ ಲಾಭವಾಗಲಿದ್ದು, ಗೆಲುವು ತಂದು ಕೊಡುವುದು ಖಚಿತ. ವಿಶೇಷವಾಗಿ ಮತದಾನ ಪ್ರಮಾಣ ಶೇ.82 ಆಗಿರುವುದು ಸಹಜವಾಗಿಯೇ ಬಿಜೆಪಿಗೆ ಲಾಭವಾಗಲಿದೆ. ಹೆಚ್ಚು ಮತದಾನವಾದರೆ ಅದು ಬಿಜೆಪಿಗೆ ಲಾಭ ಎಂಬುದು ಹಿಂದಿನ ಬೇರೆ ಬೇರೆ ಕಡೆಯ ಅನೇಕ ಚುನಾವಣೆಗಳಲ್ಲಿ ಸಾಬೀತಾಗಿದೆ. ಕುಂದಗೋಳದಲ್ಲೂ ಅದು ಮುಂದುವರಿಯಲಿದ್ದು, ನಮ್ಮ ಅಭ್ಯರ್ಥಿ ಗೆಲುವು ಖಚಿತ. ಅನುಮಾನವೇ ಬೇಡ ಎಂಬುದು ಬಿಜೆಪಿಯವರ ಅನಿಸಿಕೆ.

ಎರಡು ಕಡೆಯವರು ಮತದಾನ ಹೆಚ್ಚಳ ತಮ್ಮ ಪರ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಮತದಾರನ ಅನಿಸಿಕೆ ಏನಾಗಿದೆ ಎಂಬುದು ಮೇ 23ರಂದು ಬಯಲುಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next