ಬೆಂಗಳೂರು: ಕಾಂಗ್ರೆಸ್‌ನನಿಚ್ಚಳ ಗೆಲುವಿನ ಬಳಿಕ ಈಗ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಯೂ ಆರಂಭವಾಗಿದೆ. ಹಾಗೆಯೇ ಬಿಜೆಪಿಯಲ್ಲಿ ಬಹುತೇಕ ಅತಿರಥ ಮಹಾರಥರು ಸೋತಿದ್ದು, ವಿಪಕ್ಷ ನಾಯಕನ ಸ್ಥಾನ ಯಾರಿಗೆ ಎಂಬ ಚರ್ಚೆ ಕೂಡ ಪ್ರಾರಂಭವಾಗಿದೆ.
ಸದ್ಯ ಕಾಂಗ್ರೆಸ್‌ನಲ್ಲಿ ಸಿಎಂ ರೇಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇದ್ದಾರೆ. ಪಕ್ಷಕ್ಕಾಗಿ ತನು, ಮನ, ಧನ ಧಾರೆ ಎರೆದ ಡಿಕೆಶಿ ಸಹಜವಾಗಿಯೇ ಈ ರೇಸ್‌ನಲ್ಲಿ ಮುಂದಿದ್ದಾರೆ. ಆದರೆ ಕುರುಬ ಹಾಗೂ ಮುಸ್ಲಿಂ ಮತ ಗಟ್ಟಿಯಾಗಿ ಕಾಂಗ್ರೆಸ್ ಪಾಳಯಕ್ಕೆ ಒಲಿಯುವಂತೆ ನೋಡಿಕೊಳ್ಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಯೋಗದಾನ ಗೆಲುವಿನಲ್ಲಿ ಹೆಚ್ಚಿದೆ.
ಪಕ್ಷ ಅತ್ಯಂತ ಕಷ್ಟದಲ್ಲಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಸೇರಿದಂತೆ ಹಿರಿಯರೆಲ್ಲರೂ ಕಾಂಗ್ರೆಸ್ ಸಾರಥ್ಯ ವಹಿಸಲು ಹಿಂದಡಿ ಇಟ್ಟಾಗ, ಪರಿ ಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ಪಕ್ಷ ಕಟ್ಟಿದವರು ಶಿವಕುಮಾರ್. ನಿರಂತರ 2 ವರ್ಷಗಳ ಕಾಲ ಹಗಲಿರುಳು ಪಟ್ಟ ಶ್ರಮ ಅವರಿಗೆ ವರದಾನವಾಗ ಬಹುದು. ಈ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ಅಷ್ಟು ಸುಲಭವಾಗಿ ನಿರ್ಲಕ್ಷಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಮುಂದಿನ 1 ವರ್ಷದಲ್ಲಿ ಎದು ರಾಗುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಕಾಂಗ್ರೆಸ್ ವರಿಷ್ಠರು ತುಸು ಎಚ್ಚರಿಕೆಯ ಹೆಜ್ಜೆ ಇಡಬಹುದು. ಇಬ್ಬರು ನಾಯಕರ ಮಧ್ಯೆ ಅಧಿಕಾರ ಹಂಚಿಕೆ ಸೂತ್ರವನ್ನು ಮುಂದಿಟ್ಟು ಪರಿಸ್ಥಿತಿ ನಿಭಾಯಿಸುವ ಸಾಧ್ಯತೆಯೂ ಇದೆ.
ಅಂಥ ಸಂದರ್ಭ ಬಂದಾಗ ಮೊದಲ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಶಿವಕುಮಾರ್ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತರನ್ನಾಗಿಸಬಹುದು. ಆದರೆ ಒಮ್ಮೆ ಸಿದ್ದರಾಮಯ್ಯ ಕೈಗೆ ಅಧಿಕಾರ ಸಿಕ್ಕರೆ ಅದನ್ನು ತಪ್ಪಿಸುವುದು ಕಷ್ಟ ಎಂದು ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದರೆ ಆಗ ಪರಿಸ್ಥಿತಿ ಜಟಿಲವಾಗಬಹುದು. ಅಂಥ ಸಂದರ್ಭದಲ್ಲಿ ಹೈಕಮಾಂಡ್ “ಪರ್ಯಾಯ ಮುಖ’ ವನ್ನು ಮುಂದೆ ತರಬಹುದು. ಅಂಥ ಸಾಧ್ಯತೆಗಳು ಕ್ಷೀಣವಾಗಿವೆಯಾದರೂ ಉಭಯ ಬಣಕ್ಕೆ ಸಮ್ಮತವಾಗುವ ರೀತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸಹಮತದ ಅಭ್ಯರ್ಥಿಯಾಗಿ ಸಿಎಂ ರೇಸ್‌ನಲ್ಲಿ ಮುಂಚೂಣಿಗೆ ಬಂದರೂ ಆಶ್ಚರ್ಯವಿಲ್ಲ. ಖರ್ಗೆ ಪಟ್ಟಾಭಿಷೇಕಕ್ಕೆ ಶಿವಕುಮಾರ್ ಬಣದಿಂದ ತೀವ್ರ ವಿರೋಧ ಬರಲಾರದು. ಸಿಎಂ ಯಾರು ಎಂಬ ಪ್ರಶ್ನೆಗೆ 2 ದಿನಗಳಲ್ಲಿ ಉತ್ತರ ಸಿಗಲಿದೆ.
ವಿಪಕ್ಷ ನಾಯಕ ಯಾರು?
ಬಿಜೆಪಿಯಲ್ಲಿ ವಿಪಕ್ಷ ನಾಯಕ ಸ್ಥಾನ ಯಾರಿಗೆ ಒಲಿಯಬಹುದೆಂಬುದು ಈಗಿನ ಪ್ರಶ್ನೆ. ಈ ಸ್ಥಾನ ಬಸವರಾಜ ಬೊಮ್ಮಾಯಿ ಅವರಿಗೆ ಒಲಿಯಬಹುದೆಂಬುದು ಒಂದು ಲೆಕ್ಕಾಚಾರ. ಸದನದಲ್ಲಿ ಕಾಂಗ್ರೆಸನ್ನು ಎದುರಿಸಬೇಕಾದರೆ ಸಂಸದೀಯ ಪಟ್ಟುಗಳು ಕರಗತವಾಗಿರುವ ವ್ಯಕ್ತಿ ಬೇಕು. ಆಗ ಬೊಮ್ಮಾಯಿ ಆಯ್ಕೆ ಅನಿವಾರ್ಯವಾಗಬಹುದು.
ಆದರೆ ಪಕ್ಷದ ಹೀನಾಯ ಸೋಲಿಗೆ ಬೊಮ್ಮಾಯಿ ಆಡಳಿತ ವೈಖರಿಯೇ ಕಾರಣ ಎಂಬ ಟೀಕೆ ಬಲವಾಗಿರುವುದರಿಂದ ಪಕ್ಷ ನಿಷ್ಠರು ಹಾಗೂ ಮೂಲ ಬಿಜೆಪಿಯ ಮುಖಕ್ಕೆ ಮನ್ನಣೆ ಹಾಕಬೇಕಾಗಬಹುದು. ಅಂಥ ಸಂದರ್ಭ ಬಂದಾಗ ಬಸನಗೌಡ ಪಾಟೀಲ್ ಯತ್ನಾಳ್ ಅಥವಾ ಸುನಿಲ್ ಕುಮಾರ್ ವಿಪಕ್ಷ ನಾಯಕನ ಸ್ಥಾನಕ್ಕೆ ಬಿಜೆಪಿಯ ಆಯ್ಕೆಯಾಗಬೇಕಾಗುತ್ತದೆ. ಇದನ್ನು ಹೊರತುಪಡಿಸಿ ಬಿಜೆಪಿಯ ಮುಂದೆ ಸದ್ಯಕ್ಕೆ ಬೇರೆ ಆಯ್ಕೆಗಳು ಕಡಿಮೆ.