Advertisement

ಮೊದಲ ದಿನ, ಮೊದಲ ಲಸಿಕೆ ಯಾರಿಗೆ ಪ್ರಶ್ನೆಗೆ ಸಿಕ್ಕಿತು ಉತ್ತರ: ಮೊದಲ ದಿನ 100 ಮಂದಿಗೆ ಲಸಿಕೆ

08:28 AM Jan 15, 2021 | Team Udayavani |

ಬೆಂಗಳೂರು: ಲಸಿಕೆ ಬರುವ ಮುಂಚೆ ಸ್ಪಚ್ಛತೆಯೇ ಕೋವಿಡ್ ಸೋಂಕಿಗೆ ಮೊದಲ ಮದ್ದಾಗಿತ್ತು. ಸದ್ಯ ಲಸಿಕೆ ಬಂದಿದ್ದು, ಸೋಂಕಿನ ಸಂದರ್ಭದಲ್ಲಿ ಸದಾ ಆಸ್ಪತ್ರೆಗಳನ್ನು ಸ್ವಚ್ಛಗೊಳಿಸುತ್ತಿದ್ದ `ಸ್ವಚ್ಛತಾ ಸಿಬ್ಬಂದಿಯೇ’ ಲಸಿಕೆ ಮೊದಲ ಫಲಾನುಭವಿಯಾಗಿದ್ದಾರೆ.

Advertisement

ಈ ಮೂಲಕ ಕೆಳಹಂತದಲ್ಲಿ ಇದ್ದುಕೊಂಡು ನಿರಂತರವಾಗಿ ಸೋಂಕಿನ ಹತೋಟಿಯಲ್ಲಿ ಶ್ರಮಿಸಿದವರಿಗೆ ಗೌರವ ಸಲ್ಲಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಇದರೊಂದಿಗೆ ಲಸಿಕೆ ವಿತರಣೆಯ ಮೊದಲ ದಿನ, ಮೊದಲ ಲಸಿಕೆಯನ್ನು ಯಾರಿಗೆ ನೀಡಲಾಗುತ್ತದೆ? ಎಂಬ ಪ್ರಶ್ನೆಗೆ ಉತ್ತರ ದೊರೆತಂತಾಗಿದೆ.

ಕಳೆದ 10 ತಿಂಗಳು ರಾಜ್ಯವನ್ನು ಕಾಡಿದ್ದ ಕೊರೊನಾಗೆ ಸಿದ್ಧಗೊಂಡಿರುವ ಲಸಿಕೆ ಆರೋಗ್ಯ ಕೇಂದ್ರಗಳನ್ನು ತಲುಪಿದೆ. ಶನಿವಾರ ದೇಶದೆಲ್ಲೆಡೆ ಲಸಿಕೆ ವಿತರಣೆ ಕಾರ್ಯವೂ ಆರಂಭವಾಗುತ್ತಿದೆ. ಅಂತೆಯೇ ರಾಜ್ಯದ 237 ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಈ ಕೇಂದ್ರಗಳಲ್ಲಿ ಲಸಿಕೆ ಪಡೆಯುವ ಮೊದಲ ವ್ಯಕ್ತಿ ಆ ಆರೋಗ್ಯ ಕೇಂದ್ರದ ಅಥವಾ ಯಾವುದೇ ಆಸ್ಪತ್ರೆಯ `ಸ್ವಚ್ಛತಾ ಸಿಬ್ಬಂದಿ ಅಥವಾ ಡಿ ಗ್ರೂಪ್ ನೌಕರ’ ಆಗಿರಬೇಕು. ಆ ನಂತರ ಇತರೆ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಬೇಕು ಎಂದು ಕೇಂದ್ರ ಸರ್ಕಾರದ ಕೊರೊನಾ ಲಸಿಕೆ ವಿತರಣಾ ತಜ್ಞರ ಸಮಿತಿಯು ಸೂಚನೆ ನೀಡಿದೆ. ಈ ಹಿನ್ನೆಲೆ ಸ್ವಚ್ಛತಾ ಸಿಬ್ಬಂದಿ ಒಳಗೊಂಡಂತೆ ಮೊದಲ ದಿನ ಲಸಿಕೆ ಪಡೆಯುವವರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.

ಮೊದಲ ದಿನ 100 ಮಂದಿಗೆ ಮಾತ್ರ ಲಸಿಕೆ

ಲಸಿಕೆ ಉದ್ಘಾಟನಾ ದಿನ ಪ್ರತಿ ಲಸಿಕಾ ವಿತರಣಾ ಕೇಂದ್ರದಲ್ಲಿ ಗರಿಷ್ಠ 100 ಮಂದಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ. ಈ ನೂರು ಮಂದಿಯಲ್ಲಿ ಎಲ್ಲಾ ವಿಧದ ಆರೋಗ್ಯ ಕಾರ್ಯಕರ್ತರು ಒಳಗೊಂಡಿದ್ದಾರೆ. ಪ್ರಮುಖವಾಗಿ ವೈದ್ಯರು, ನರ್ಸ್, ಆರೋಗ್ಯ ಇಲಾಖೆ ಅಧಿಕಾರಿಗಳು, ಆರೋಗ್ಯ ಸಹಾಯಕಿರು, ಆಶಾ ಕಾರ್ಯಕರ್ತರು, ಪ್ರಯೋಗಾಲಯ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ವೈದ್ಯಕೀಯ ವಿದ್ಯಾರ್ಥಿಗಳು ಇರಲಿದ್ದಾರೆ. ಇವರೆಲ್ಲರೂ 20 ವರ್ಷ ಮೇಲ್ಪಟ್ಟವರು, ಆರೋಗ್ಯವಂತರಾಗಿರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Advertisement

ಇದನ್ನೂ ಓದಿ:ಎಚ್‌1ಬಿ ವೀಸಾ ಉದ್ಯೋಗಿಗಳಿಗೆ ಟ್ರಂಪ್‌ ಆಘಾತ!

ಮೊದಲ ದಿನ (ಶನಿವಾರ) ಲಸಿಕೆ ಪಡೆಯುವ ಆಯ್ದ ಫಲಾನುಭವಿಗಳ ಪಟ್ಟಿಯನ್ನು ವಿತರಣಾ ಕೇಂದ್ರಗಳು ಸಿದ್ಧಪಡಿಸಿ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಅಧಿಕಾರಿಗೆ ನೀಡಲು ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದರು.

ಲಸಿಕೆ ಸೀಸೆ ಕಾಲಾವಧಿ ನಾಲ್ಕು ಗಂಟೆ ಮಾತ್ರ

ಕೊವಿಶೀಲ್ಡ್ ಲಸಿಕೆಯ ಸೀಸೆಯಲ್ಲಿ (ವಯಲ್) 5 ಎಂಎಲ್ (10 ಡೋಸ್), ಕೊವಾಕ್ಸಿನ್ ಲಸಿಕೆಯ ಒಂದು ಸೀಸೆಯಲ್ಲಿ 10 ಎಂಎಲ್ (20 ಡೋಸ್) ಲಸಿಕೆ ಇರುತ್ತದೆ. ಲಸಿಕೆಯ ಸೀಸೆಯನ್ನು ಒಮ್ಮೆ ತೆರೆದರೆ ಆದಷ್ಟು ಶೀಘ್ರವಾಗಿ ಫಲಾನುಭವಿಗಳಿಗೆ ನೀಡಿ ಪೂರ್ತಿಯಾಗಿ ಖಾಲಿ ಮಾಡಬೇಕು. ಸೀಸೆ ತೆರೆದ ಕೂಡಲೇ ಸಮಯ ಬರೆಯಬೇಕು. ಗರಿಷ್ಠ ನಾಲ್ಕು ಗಂಟೆಯ ನಂತರವೂ ಸೀಸೆಯಲ್ಲಿ ಲಸಿಕೆ ಮಿಕ್ಕಿದರೆ ಅದನ್ನು ಬಳಸುವಂತಿಲ್ಲ, ತ್ಯಾಜ್ಯ ಸಂಗ್ರಹಪೆಟ್ಟಿಗೆಗೆ ಹಾಕಬೇಕು. ಪ್ರತಿಯೊಬ್ಬರಿಗೂ 0.5 ಎಂಎಲ್ (ಒಂದು ಡೋಸ್) ಮಾತ್ರ ಲಸಿಕೆಯನ್ನು ಚುಚ್ಚುಮದ್ದಿನ ಮೂಲಕ ಕೈ ರಟ್ಟೆ ಭಾಗಕ್ಕೆ ನೀಡಬೇಕು ಎಂದು ಕೊರೊನಾ ಲಸಿಕೆ ಬಳಸುವ ಮಾರ್ಗಸೂಚಿಯಲ್ಲಿ ಲಸಿಕಾ ಸಿಬ್ಬಂದಿಗೆ ತಿಳಿಸಲಾಗಿದೆ.

ಲಸಿಕಾ ವಿತರಣಾ ತಂಡ ಹೀಗಿದೆ

ಅಧಿಕಾರಿ-1 ಫಲಾನುಭವಿ ನೋಂದಣಿ, ಗುರುತಿನ ಚೀಟಿ ಪರಿಶೀಲನೆ (ಪೊಲೀಸ್/ಹೋಗಾರ್ಡ್ಸ್/ ಎನ್‌ಸಿಸಿ/ ಎನ್‌ಎಸ್‌ಎಸ್ )

ಅಧಿಕಾರಿ -2 ಕೋವಿನ್ ತಂತ್ರಾAಶದಲ್ಲಿ ದಾಖಲೆಗಳ ಪರಿಶೀಲನೆ. (ಆರೋಗ್ಯ ಅಥವಾ ಇತರೆ ಇಲಾಖೆಗಳ ಕಚೇರಿ ಸಿಬ್ಬಂದಿ)

ಅಧಿಕಾರಿ -3 ಮತ್ತು 4- ಜನದಟ್ಟಣೆ ನಿರ್ವಹಣೆ, ನಿಗಾ ಮತ್ತು ನಿರೀಕ್ಷಣಾ ಕೊಠಡಿ ನಿರ್ವಹಣೆ. (ಆರೋಗ್ಯ ಅಥವಾ ಇತರೆ ಇಲಾಖೆಗಳ ಕಚೇರಿ ಸಿಬ್ಬಂದಿ)

ಅಧಿಕಾರಿ -5 – ಲಸಿಕೆ ನೀಡುವುದು, ಫಲಾನುಭವಿಗೆ ಲಸಿಕೆ ಮಾಹಿತಿ ನೀಡುವುದು. (ವೈದ್ಯಕೀಯ, ದಂತ ವೈದ್ಯಕೀಯ ಪದವೀಧರರು ಅಥವಾ ಇಂಟರ್ನಿಗಳು, ಶುಶ್ರೂಶಕರು)

ಕೊರೊನಾ ಹೋರಾಟದಲ್ಲಿ ಆಸ್ಪತ್ರೆಗಳ ಸ್ವಚ್ಛತಾ ಸಿಬ್ಬಂದಿಯು (ಡಿ ಗ್ರೂಪ್) ಕೆಳಹಂತಲ್ಲಿ ಕಾರ್ಯನಿರ್ವಹಿಸುತ್ತಿರುವ ವಾರಿಯರ್ಸ್. ಸೋಂಕು ಹೆಚ್ಚಿದ್ದ ಸಂದರ್ಭದಲ್ಲಿ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಅವರನ್ನು ಗುರುತಿಸಿ, ಗೌರವಿಸುವ ನಿಟ್ಟಿನಲ್ಲಿ ಲಸಿಕೆ ವಿತರಣಾ ಕೇಂದ್ರಗಳಲ್ಲಿ ಮೊದಲ ಲಸಿಕೆಯನ್ನುನ ನೀಡಲಾಗುತ್ತಿದೆ. ಬಳಿಕ ಇತರೆ ಆರೋಗ್ಯ ಸಿಬ್ಬಂದಿ ಕಾರ್ಯಕರ್ತರು ಪಡೆಯುತ್ತಾರೆ.

– ಜಾವೇದ್ ಅಖ್ತರ್, ಅಪರ ಮುಖ್ಯಕಾರ್ಯದರ್ಶಿ, ಆರೋಗ್ಯ ಇಲಾಖೆ

 

ಮೊದಲ ದಿನ ನಿಮ್ಮ ಜಿಲ್ಲೆಯಲ್ಲಿ ಎಷ್ಟು ಕಡೆ ಲಸಿಕೆ ವಿತರಣೆ?

ಜಿಲ್ಲೆ ಲಸಿಕೆ ವಿತರಣಾ ಕೇಂದ್ರಗಳು

ಬಾಗಲಕೋಟೆ -9

ಬೆಳಗಾವಿ – 12

ಧಾರವಾಡ -7

ಗದಗ – 4

ಹಾವೇರಿ – 9

ಕೊಪ್ಪಳ – 4

ಉತ್ತರ ಕನ್ನಡ -11

ವಿಜಯಪುರ -8

ಬೆಂಗಳೂರು ಗ್ರಾಮೀಣ – 6

ಬೆಂಗಳೂರು ನಗರ – 4

ಬಿಬಿಎಂಪಿ – 7

ಬಳ್ಳಾರಿ – 11

ಬೀದರ್ – 6

ಚಾಮರಾಜನಗರ -6

ಚಿಕ್ಕಮಗಳೂರು -8

ಚಿಕ್ಕಬಳ್ಳಾಪುರ – 9

ಚಿತ್ರದುರ್ಗ – 8

ದಕ್ಷಿಣ ಕನ್ನಡ – 6

ದಾವಣಗೆರೆ – 7

ಕಲಬುರಗಿ – 8

ಹಾಸನ – 10

ಕೊಡಗು – 5

ಕೋಲಾರ -6

ಮಂಡ್ಯ – 8

ಮೈಸೂರು – 9

ರಾಯಚೂರು -6

ರಾಮನಗರ – 6

ಶಿವಮೊಗ್ಗ – 9

ತುಮಕೂರು – 14

ಉಡುಪಿ – 6

ಯಾದಗಿರಿ – 5

ಒಟ್ಟು237

 

ಜಯಪ್ರಕಾಶ್ ಬಿರಾದಾರ್

Advertisement

Udayavani is now on Telegram. Click here to join our channel and stay updated with the latest news.

Next