ಹೊಸದಿಲ್ಲಿ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಪ್ರಮುಖವಾದ ಅಧ್ಯಕ್ಷ ಸ್ಥಾನದ ಗೊಂದಲ ಇನ್ನೂ ಬಗೆಹರಿದಿಲ್ಲ. ಇತರ ಪಕ್ಷಗಳು 2024ರ ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿದ್ದರೆ ಕಾಂಗ್ರೆಸ್ ನಲ್ಲಿ ಪಕ್ಷದ ಅಧ್ಯಕ್ಷ ಯಾರೆಂಬುದೇ ಇನ್ನೂ ಖಚಿತವಾಗಿಲ್ಲ. ಹೀಗಿರುವಾಗ ಕಾಂಗ್ರೆಸ್ ನಲ್ಲಿ ಮತ್ತೆ ಗಾಂಧಿಯೇತರ ಅಧ್ಯಕ್ಷರ ಬಗ್ಗೆ ಚರ್ಚೆಯಾಗುತ್ತಿದೆ.
ಆಗಸ್ಟ್ 21ರಿಂದ ಸೆಪ್ಟೆಂಬರ್ 20ರ ಒಳಗೆ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಕಾಂಗ್ರೆಸ್ ಕಳೆದ ವರ್ಷವೇ ಪ್ರಕಟಿಸಿತ್ತು. ಈ ಗಡುವಿಗೆ ಕೆಲವೇ ದಿನಗಳು ಬಾಕಿ ಇರುವಂತೆ ಹಲವು ಪ್ರಕ್ರಿಯೆಗಳು ಆರಂಭವಾಗಿದೆ.
2019ರ ಲೋಕಸಭೆ ಚುನಾವಣೆ ಸೋಲಿಗೆ ಹೊಣೆ ಹೊತ್ತು ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬಳಿಕ ಸೋನಿಯಾ ಗಾಂಧಿ ಅವರೇ ಮಧ್ಯಂತರ ಅಧ್ಯಕ್ಷೆಯಾಗಿ ಮುಂದುವರಿದಿದ್ದಾರೆ. ಮರಳಿ ಅಧ್ಯಕ್ಷ ಸ್ಥಾನಕ್ಕೇರುವಂತೆ ರಾಹುಲ್ ಗಾಂಧಿಗೆ ನಾಯಕರು ಹಲವು ಬಾರಿ ಒತ್ತಾಯ ಮಾಡಿದರೂ ಅದ್ಯಾವುವು ಫಲಪ್ರದವಾಗಿಲ್ಲ. ಈಗಲೂ ರಾಹುಲ್ ಅಧ್ಯಕ್ಷ ಸ್ಥಾನದಿಂದ ದೂರವೇ ಉಳಿದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ತಪ್ಪಿದ ಗುರಿ: ಉಕ್ರೇನ್ ಯುದ್ಧದ ಮಾಸ್ಟರ್ ಮೈಂಡ್ ನ ಮಗಳು ಕಾರು ಸ್ಪೋಟದಲ್ಲಿ ಸಾವು!
ಇತ್ತ ಸೋನಿಯಾ ಗಾಂಧಿ ಕೂಡಾ ಆರೋಗ್ಯ ಸಮಸ್ಯೆಯ ಕಾರಣದಿಂದ ಪೂರ್ಣ ಪ್ರಮಾಣದ ಅಧ್ಯಕ್ಷೆಯಾಗಲು ಮನಸ್ಸು ಮಾಡುತ್ತಿಲ್ಲ ಎಂದು ವರದಿಯಾಗಿದೆ. ಇನ್ನು ಗಾಂಧಿ ಕುಟಂಬದ ಮತ್ತೋರ್ವ ಪ್ರಿಯಾಂಕಾ ಗಾಂಧಿ ಅವರ ಹೆಸರು ಕೇಳಿ ಬರುತ್ತಿದೆ, ಆದರೆ ಪ್ರಿಯಾಂಕಾ ಉಸ್ತುವಾರಿ ಹೊಂದಿದ್ದ ಉತ್ತರ ಪ್ರದೇಶ ವಿಧಾನಸಭೆ ಚನಾವಣೆಯ ಹೀನಾಯ ಸೋಲಿನ ಬಳಿಕ ಪ್ರಿಯಾಂಕಾ ನಾಯಕತ್ವದ ಮೇಲೆ ಕಾಂಗ್ರೆಸ್ ನಾಯಕರಿಗೆ ಉಮೇದಿಲ್ಲ ಎನ್ನಲಾಗಿದೆ.
ಗಾಂಧಿ ಹೊರತಾದ ಅಧ್ಯಕ್ಷ?:
ಅಧ್ಯಕ್ಷ ಸ್ಥಾನಕ್ಕೇರಲು ರಾಹುಲ್ ಗಾಂಧಿ ಒಪ್ಪದೇ ಇದ್ದಲ್ಲಿ ಗಾಂಧಿ ಕುಟುಂಬದ ಹೊರತಾದ ಅಧ್ಯಕ್ಷನನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾದಲ್ಲಿ 1998ರ ಬಳಿಕ ಮೊದಲ ಬಾರಿ ಸೋನಿಯಾ- ರಾಹುಲ್ ಹೊರತುಪಡಿಸಿ ಉಳಿದವರೊಬ್ಬರು ಕಾಂಗ್ರೆಸ್ ಪಕ್ಷದ ಗದ್ದುಗೆಗೆ ಏರಲಿದ್ದಾರೆ.
ರಾಜಸ್ಥಾನದ ಮುಖ್ಯಮಂತ್ರಿ 71 ವರ್ಷದ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಪಕ್ಷದ ಮುಖ್ಯಸ್ಥನಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದೆ. ಯಾರೇ ಅಧ್ಯಕ್ಷ ಸ್ಥಾನಕ್ಕೇರಿದರೂ ಗಾಂಧಿ ಕುಟುಂಬಕ್ಕೆ ಹತ್ತಿರ ಇರುವವರೇ ಆಗಿರುತ್ತಾರೆ ಎನ್ನುತ್ತವೆ ಮೂಲಗಳು.