Advertisement

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

06:13 PM Apr 25, 2024 | ಕೀರ್ತನ್ ಶೆಟ್ಟಿ ಬೋಳ |

ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಜೂನ್1ರಿಂದ ನಡೆಯಲಿರುವ ಟಿ20 ವಿಶ್ವಕಪ್ ಗೆ 15 ಜನರ ತಂಡದ ಘೋಷಣೆಯ ಗಡುವು ಸಮೀಪಿಸುತ್ತಿದೆ.  ಸದ್ಯ ಐಪಿಎಲ್ ನಡೆಯುತ್ತಿರುವ ಕಾರಣ ಒಂದೊಂದು ಸ್ಥಾನಕ್ಕೆ ಹಲವಾರು ಮಂದಿ ಸ್ಪರ್ಧೆ ನಡೆಸುತ್ತಿದ್ದು, 15 ಜನರ ತಂಡವನ್ನು ಆಯ್ಕೆ ಮಾಡುವುದೇ ಆಯ್ಕೆಗಾರರಿಗೆ ಸವಾಲಾಗಿದೆ.

Advertisement

ಋತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಅವರಂತಹ ಆಟಗಾರರು ಆರಂಭಿಕರ ಸ್ಲಾಟ್‌ ಗೆ ಸ್ಪರ್ಧೆ ನಡೆಸುತ್ತಿದ್ದಂತೆ, ಮತ್ತೊಂದೆಡೆ ವೇಗದ ಬೌಲರ್‌ಗಳನ್ನು ಆಯ್ಕೆ ಮಾಡುವುದು ಕಷ್ಟಕರವಾಗಿದೆ.

2022 ರ ಆವೃತ್ತಿಯ ಟಿ20 ವಿಶ್ವಕಪ್ ನಲ್ಲಿ, ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ಹೊಂದಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ, ಮೊಹಮ್ಮದ್ ಶಮಿ ಭಾರತದ ವೇಗದ ದಾಳಿಯ ಮುಂದಾಳತ್ವ ವಹಿಸಿದ್ದರು. ಆದರೆ ಈ ಬಾರಿ ಶಮಿ ಗಾಯದ ಸಮಸ್ಯೆಯಿಂದ ಅಲಭ್ಯರಾಗಿದ್ದು, ಬುಮ್ರಾ ದಾಳಿಯ ಮುಂಚೂಣಿಯಲಿದ್ದಾರೆ. ಆದರೆ ಬುಮ್ರಾ ಅವರೊಂದಿಗೆ ಆಡುವವರು ಯಾರು? ಉಳಿದ ವೇಗಿಗಳು ಯಾರು ಎನ್ನವುದೇ ಸದ್ಯದ ಪ್ರಶ್ನೆಯಾಗಿದೆ.

ಬುಮ್ರಾ ಜೊತೆಗಾರ ಯಾರು?

2024ರ ಐಪಿಎಲ್ ನಲ್ಲಿ ಭಾರತೀಯ ವೇಗದ ಬೌಲರ್ ಗಳ ಪ್ರದರ್ಶನ ಗಮನಿಸಿದರೆ ಅಜಿತ್ ಅಗರ್ಕರ್ ನೇತೃತ್ವದ ಸಮಿತಿಗೆ ಬೌಲರ್ ಗಳನ್ನು ಆಯ್ಕೆ ಮಾಡುವ ಸವಾಲು ಎದುರಾಗಿದೆ. ಈ ಬಾರಿ ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ ಯಾವದೇ ಭಾರತೀಯ ವೇಗಿ ಈ ಬಾರಿ ಗಮನ ಸೆಳೆದಿಲ್ಲ. ಆದರೆ ಕೆಲವು ಹೆಸರುಗಳು ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಲು ಪ್ರಯತ್ನಪಡುತ್ತಿವೆ.

Advertisement

ಕಳೆದೊಂದು ವರ್ಷದಿಂದ ಭಾರತದ ಟಿ20 ತಂಡದ ಭಾಗವಾಗಿರುವ ಎಡಗೈ ವೇಗಿ ಅರ್ಶದೀಪ್ ಸಿಂಗ್ ಮುಂದಿನ ವಿಶ್ವಕಪ್ ಗೆ ರೇಸ್ ನಲ್ಲಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಇದುವರೆಗೆ 10 ವಿಕೆಟ್ ಪಡೆದಿರುವ ಅರ್ಶದೀಪ್ ಎಡಗೈ ವೇಗಿಯ ವಿಭಾಗದಲ್ಲಿ ಅಮೆರಿಕ ವಿಮಾನವೇರಲು ಉತ್ಸುಕರಾಗಿದ್ದಾರೆ.

ಆಡುವ ಬಳಗದಲ್ಲಿ ಅರ್ಶದೀಪ್ ಸಿಂಗ್ ಅವರನ್ನು ಮೀರಿಸಬಲ್ಲ ಮತ್ತೊಬ್ಬ ಎಡಗೈ ಆಟಗಾರ ಖಲೀಲ್ ಅಹ್ಮದ್. ಇತ್ತೀಚಿನ ದಿನಗಳಲ್ಲಿ ಆಯ್ಕೆಗಾರರ ದೃಷ್ಠಿಯಿಂದ ಹೊರಗುಳಿದಿರುವಂತೆ ತೋರುತ್ತಿದ್ದ ಖಲೀಲ್ ಐಪಿಎಲ್ ನಲ್ಲಿ ತಮ್ಮ ಫ್ರಾಂಚೈಸ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದುವರೆಗೆ ಹತ್ತು ವಿಕೆಟ್‌ಗಳನ್ನು ಕಬಳಿಸಿರುವ ಖಲೀಲ್ ಅವರು ಅರ್ಶದೀಪ್ ಗಿಂತ ಉತ್ತಮ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ.

ಆದರೆ, ಅರ್ಶದೀಪ್ ಅವರು ಖಲೀಲ್‌ ಗಿಂತ ಉತ್ತಮ ಸ್ಟ್ರೈಕ್ ರೇಟ್ ಮತ್ತು ಸರಾಸರಿ ಹೊಂದಿದ್ದಾರೆ. ಅನುಭವದ ಆಧಾರದಲ್ಲಿ ಭಾರತವು ಅಂತಿಮವಾಗಿ ವೇಗದ ಬೌಲಿಂಗ್ ವಿಭಾಗದಲ್ಲಿ ಬುಮ್ರಾ ಅವರೊಂದಿಗೆ ಅರ್ಶದೀಪ್ ಗೆ ಯುಎಸ್ ಟಿಕೆಟ್ ನೀಡಬಹುದು.

ಭಾರತದ ಪರ ಕಣಕ್ಕಿಳಿದಿರುವ ಮತ್ತೊಬ್ಬ ಆಟಗಾರ ಅವೇಶ್ ಖಾನ್. ಎಂಟು ಏಕದಿನ ಮತ್ತು 20 ಟಿ20 ಪಂದ್ಯಗಳನ್ನು ಆಡಿರುವ ಅವೇಶ್ ಅವರು ಆಯ್ಕೆದಾರರ ಆಯ್ಕೆಗಳಲ್ಲಿ ಒಬ್ಬರಾಗಬಹುದು. ಈ ಬಾರಿಯ ಐಪಿಎಲ್ ನಲ್ಲಿ ಅವರು ಎಂಟು ಪಂದ್ಯಗಳಲ್ಲಿ 9.41ರ ಸರಾಸರಿಯಲ್ಲಿ ಎಂಟು ವಿಕೆಟ್‌ ಪಡೆದಿದ್ದಾರೆ.

ಒಂದು ವೇಳೆ ಹಾರ್ದಿಕ್ ಪಾಂಡ್ಯ ಅವರು ತಂಡದಲ್ಲಿ ಸ್ಥಾನ ಪಡೆದರೆ, ಅವರು ಮೂರನೇ ವೇಗಿಯಾಗಿ ಆಡುತ್ತಾರೆ. 15 ಸದಸ್ಯರ ತಂಡದಲ್ಲಿ, ಭಾರತವು ಕೇವಲ ಒಬ್ಬ ಬ್ಯಾಕಪ್ ಪೇಸರ್ ನನ್ನು ಕರೆದುಕೊಂಡು ಹೋಗುವ ಆಯ್ಕೆಯನ್ನು ಹೊಂದಿರುತ್ತದೆ. ಖಲೀಲ್ ಹೊರತಾಗಿ ಇತರ ಸ್ಪರ್ಧಿಗಳನ್ನು ನಾವು ನೋಡಿದರೆ, ಮೊಹಮ್ಮದ್ ಸಿರಾಜ್ ಅವರ ಹೆಸರು ಮೊದಲು ಕಾಣುತ್ತದೆ. ಅದೂ ಅನುಭವದ ವಿಷಯದಲ್ಲಿ.

ಆದರೆ ಹೈದರಾಬಾದ್ ಬೌಲರ್ ಸಿರಾಜ್ ಈ ಬಾರಿ ಅತ್ಯಂತ ನಿರಾಶಾದಾಯಕ ಐಪಿಎಲ್ ಹೊಂದಿದ್ದಾರೆ. ಅವರು ಆರ್ ಸಿಬಿಗಾಗಿ ಏಳು ಪಂದ್ಯಗಳಲ್ಲಿ ಕೇವಲ ಐದು ವಿಕೆಟ್ ಗಳನ್ನು ಪಡೆದಿದ್ದಾರೆ. ಅದರಲ್ಲೂ 10.34 ರ ಎಕಾನಮಿಯಲ್ಲಿ ರನ್ ಸೋರಿಕೆ ಮಾಡಿದ್ದಾರೆ.

ಪಂದ್ಯಗಳು ಕಳೆದಂತೆ ಪಂಜಾಬ್ ಕಿಂಗ್ಸ್ ಬೌಲರ್ ಹರ್ಷಲ್ ಪಟೇಲ್ ಅವರು ಲಯಕ್ಕೆ ಮರಳಿದ್ದಾರೆ. 2022ರ ಟಿ20 ತಂಡದಲ್ಲಿದ್ದ ಹರ್ಷಲ್ ಸದ್ಯ 13 ವಿಕೆಟ್ ಗಳೊಂದಿಗೆ ಪರ್ಪಲ್ ಕ್ಯಾಪ್ ರೇಸ್ ನಲ್ಲಿದ್ದಾರೆ.

ಈ ಬಾರಿಯ ಐಪಿಎಲ್ ನಿಂದ ಬೆಳಕಿಗೆ ಬಂದ ಬೌಲರ್ ಗಳ ಬಗ್ಗೆ ನೋಡುವುದಾದರೆ ಕೆಕೆಆರ್ ನ ಹರ್ಷಿತ್ ರಾಣಾ ಮತ್ತು ಲಕ್ನೋ ಬೌಲರ್ ಮಯಾಂಕ್ ಯಾದವ್ ಗಮನ ಸೆಳೆಯುತ್ತಿದ್ದಾರೆ.

ಎರಡು ಬ್ಯಾಕ್-ಟು-ಬ್ಯಾಕ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗಳೊಂದಿಗೆ ತಮ್ಮ ಎಕ್ಸ್‌ಪ್ರೆಸ್ ವೇಗದಿಂದ ದೊಡ್ಡ ಸದ್ದು ಮಾಡಿದ ಮಯಾಂಕ್ ಯಾದವ್ ಗಾಯದ ಕಾರಣದಿಂದ ಅವರನ್ನು ತುಂಬಾ ಅಪಾಯಕಾರಿ ಪ್ರತಿಪಾದನೆ ಮಾಡುತ್ತದೆ.

ಈ ಬಾರಿಯ ಐಪಿಎಲ್ ನಲ್ಲಿ ಮಿಂಚುತ್ತಿರುವ ಹರ್ಷಿತ್ ರಾಣಾ, ಹೊಸ ಚೆಂಡು ಮತ್ತು ಕೊನೆಯ ಓವರ್ ಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. 9.25ರ ಸರಾಸರಿಯಲ್ಲಿ ರಾಣಾ 9 ವಿಕೆಟ್ ಪಡೆದಿದ್ದಾರೆ. ಈ ಬಾರಿ ಟಿ20 ವಿಶ್ವಕಪ್ ಗೆ ಅಲ್ಲದಿದ್ದರೂ ಮುಂದಿನ ದಿನಗಳಲ್ಲಿ ಭಾರತೀಯ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next