Advertisement
ಇದೀಗ ರಾಜ್ಯದಲ್ಲಿರುವ 34 ಮಂತ್ರಿಗಳಲ್ಲಿ ಯಾರು ಕೋಲಾರ ಜಿಲ್ಲೆಯ ಉಸ್ತುವಾರಿ ಹೊಣೆಗಾರಿಕೆ ಸಿಗುತ್ತದೆ ಎನ್ನುವುದು ಲೆಕ್ಕಾಚಾರ ಆರಂಭವಾಗಿದೆ.
Related Articles
Advertisement
ಉಸ್ತುವಾರಿ ಹೊಣೆ ಯಾರಿಗೆ?: ಮಂತ್ರಿ ಮಂಡಲದಲ್ಲಂತು ಸ್ಥಾನ ಸಿಗಲಿಲ್ಲ. ಇದೀಗ ಕೋಲಾರ ಜಿಲ್ಲೆಯ ಉಸ್ತುವಾರಿ ಹೊಣೆಗಾರಿಕೆಯನ್ನು ಯಾರು ಹೊತ್ತುಕೊಳ್ಳುತ್ತಾರೆ ಎನ್ನುವುದು ಸದ್ಯದ ಕುತೂಹಲಕ್ಕೆ ಕಾರಣವಾಗಿದೆ. ಕೋಲಾರ ಮೂಲದ ಕೆ.ಎಚ್.ಮುನಿಯಪ್ಪ ಹಾಗೂ ಕೃಷ್ಣಬೈರೇಗೌಡ ಉಸ್ತುವಾರಿ ಹೊಣೆ ಹೊತ್ತುಕೊಳ್ಳುವ ನೆಚ್ಚಿನ ಮಂತ್ರಿಗಳಾಗಿದ್ದಾರೆ. ಆದರೆ,ಕೆ.ಎಚ್.ಮುನಿಯಪ್ಪರ ಆಯ್ಕೆಗೆ ರಮೇಶ್ ಕುಮಾರ್ ಬಣ ಒಪ್ಪಿಗೆ ನೀಡುವುದು ಅನುಮಾನವೇ. ಆದರೂ, ಕೆ.ಎಚ್.ಮುನಿಯಪ್ಪ ಬೆಂಬಲಿಗರು ಈಗಾಗಲೇ ಕೋಲಾರದ ಉಸ್ತುವಾರಿ ಹೊಣೆಗಾರಿಕೆಯನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಾಗೆಯೇ ಕೋಲಾರದವರಾದರೂ ಕೋಲಾರ ಗುಂಪುಗಾರಿಕೆ ರಾಜಕೀಯದಿಂದ ದೂರವೇ ಉಳಿದಿರುವ ಕೃಷ್ಣಬೈರೇಗೌಡ ಕೋಲಾರದ ಉಸ್ತುವಾರಿ ಹೊತ್ತುಕೊಳ್ಳುತ್ತಾರೆ ಎಂದು ಖಚಿತವಾಗಿ ನಿರೀಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ಹಿಂದೊಮ್ಮೆ ಇಂತದ್ದೇ ಅವಕಾಶ ಬಂದಾಗ ಕೃಷ್ಣಬೈರೇಗೌಡರು ನಿರಾಕರಿಸಿ ಬೆಂಗಳೂರಿಗೆ ಸೀಮಿತರಾಗಿದ್ದರು.
ಇಬ್ಬರಲ್ಲಿ ಒಬ್ಬರಿಗೆಅಥವಾ ಮೂರನೇ ಮಂತ್ರಿಗೆ : ಕೋಲಾರ ಜಿಲ್ಲೆಯ ಉಸ್ತುವಾರಿ ಹೊಣೆಗಾರಿಕೆಯು ಗುಂಪುಗಾರಿಕೆ ರಾಜಕೀಯದ ನಡುವೆಯೂ ಸಿಗುಂತಾದರೆ ಕೆ.ಎಚ್.ಮುನಿಯಪ್ಪ ಅಥವಾ ಕೃಷ್ಣಬೈರೇಗೌಡ ಇಬ್ಬರಲ್ಲಿ ಒಬ್ಬರಿಗೆ ಸಿಗಬೇಕಾಗುತ್ತದೆ. ಆದರೆ, ಗುಂಪುಗಾರಿಕೆಯ ಒತ್ತಡ ಹೆಚ್ಚಾದಾಗ ಮಂತ್ರಿ ಭಾಗ್ಯ ಇಲ್ಲದಂತೆ ಮಾಡಿದ ಕಾಂಗ್ರೆಸ್ ಹಿರಿಯ ಮುಖಂಡರು ಕೋಲಾರ ಮೂಲದ ಈ ಇಬ್ಬರನ್ನು ಕೈಬಿಟ್ಟು ಹೊಸಬರನ್ನು ಆಯ್ಕೆ ಮಾಡುವ ಅವಕಾಶ ಇದ್ದೇ ಇರುತ್ತದೆ. ಈ ಹಿಂದೆಯೂ ಹೀಗೆಯೇ ಯು.ಟಿ.ಖಾದರ್, ರಾಮಲಿಂಗಾರೆಡ್ಡಿ, ಅರವಿಂದ ಲಿಂಬಾವಳಿ, ಮುನಿರತ್ನ ಕೋಲಾರದ ಉಸ್ತುವಾರಿ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದರು.
ಒಮ್ಮತದಿಂದ ಪ್ರಯತ್ನಿಸಿದರೆ ಫಲ: ಕೋಲಾರ ಜಿಲ್ಲೆಯ ಶಾಸಕರಾಗಿದ್ದರೂ ಕಾಂಗ್ರೆಸ್ ಗುಂಪುಗಾರಿ ಕೆಯ ಕಾರಣದಿಂದಾಗಿ ಎಸ್.ಎನ್.ನಾರಾಯಣ ಸ್ವಾಮಿ, ರೂಪಕಲಾ, ಕೆ.ವೈ.ನಂಜೇಗೌಡ ಮತ್ತು ಕೊತ್ತೂರು ಮಂಜುನಾಥ್ ಮಂತ್ರಿಯಾಗುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಕೋಲಾರ ಮೂಲಕ ಕೆ.ಎಚ್.ಮುನಿಯಪ್ಪ ಅಥವಾ ಕೃಷ್ಣಬೈರೇಗೌಡರಲ್ಲಿ ಒಬ್ಬರು ಕೋಲಾರದ ಉಸ್ತುವಾರಿ ಹೊಣೆಗಾರಿಕೆ ಹೊತ್ತುಕೊಳ್ಳುವಂತೆಮಾಡಲು ಕಾಂಗ್ರೆಸ್ ಮುಖಂಡರು ಗುಂಪುಗಾರಿಕೆಯನ್ನು ಬಿಟ್ಟು ಒಮ್ಮತದಿಂದ ಪ್ರಯತ್ನಿಸಿದರೆ ಫಲ ಸಿಗುತ್ತದೆ. ಇಲ್ಲವಾದರೆ ಕೋಲಾರ ಜಿಲ್ಲೆಗೆ ಸಂಬಂಧ ಪಡದ ಮಂತ್ರಿ ಉಸ್ತುವಾರಿ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುವುದು ನಿಶ್ಚಿತವಾಗುತ್ತದೆ. ರಾಜಕೀಯವಾಗಿ ಪ್ರಭಾವಿ ಮುಖಂಡರನ್ನು ಹೊಂದಿರುವ ಕೋಲಾರ ಜಿಲ್ಲೆಗೆ ಇಂತ ದುಸ್ಥಿತಿ ಬಂದಿದ್ದೇಕೆ ಎಂಬುದರ ಅವಲೋಕನ ಆಗದಿದ್ದರೆ ಈ ರೀತಿಯ ಅನ್ಯಾಯ ನಿರಂತರಎನ್ನುವ ಭಾವನೆ ಸಾರ್ವಜನಿಕರಲ್ಲಿದೆ.
ಕೋಲಾರದ ಮಂತ್ರಿಗಳು: ಸದ್ಯದ ಸಿದ್ದರಾಮಯ್ಯಸಂಪುಟದಲ್ಲಿ ಕೋಲಾರ ಜಿಲ್ಲೆಯ ಯಾವುದೇ ಶಾಸಕರು ಮಂತ್ರಿಯಾಗಿಲ್ಲವಾದರೂ, ಕೋಲಾರ ಮೂಲದ ಇಬ್ಬರು ಶಾಸಕರಾಗಿದ್ದಾರೆ. 28 ವರ್ಷ ಕೋಲಾರ ಲೋಕ ಸಭಾ ಕ್ಷೇತ್ರದ ಪ್ರತಿನಿಧಿಯಾಗಿದ್ದ ಹಿರಿಯ ಕೆ.ಎಚ್.ಮುನಿಯಪ್ಪ ಹಾಗೂ ಕೋಲಾರ ಕ್ಷೇತ್ರದವರೇ ಆದ ಕೃಷ್ಣಬೈರೇಗೌಡ ಮಂತ್ರಿ ಮಂಡಲದಲ್ಲಿ ಸ್ಥಾನಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೋಲಾರದವರೇ ಆದ ಕೆ.ವಿ.ಪ್ರಭಾಕರ ಮುಖ್ಯಮಂತ್ರಿಗಳ ಮಾಧ್ಯಮ ಸಮನ್ವಯಕಾರರಾಗಿ ಸಂಪುಟ ದರ್ಜೆ ಸ್ಥಾನಮಾನ ಗಿಟ್ಟಿಸಿಕೊಂಡಿರುವುದು ಕೊಂಚ ಸಮಾಧಾನಕ ವಿಷಯವಾಗಿದೆ.
ಬೈರೇಗೌಡ, ಆಲಂಗೂರು ಶ್ರೀನಿವಾಸ್, ಕೆ.ಶ್ರೀನಿವಾಸಗೌಡ, ರಮೇಶ್‌ಕುಮಾರ್ ನಂತರ ಕೋಲಾರ ಮೂಲದ ಯಾರಿಗೂ ಮಂತ್ರಿಯಾಗುವ ಅವಕಾಶ ಸಿಕ್ಕಿಲ್ಲ. ಈ ಬಾರಿ ನಾಲ್ವರು ಶಾಸಕರಲ್ಲಿ ಯಾರಿಗಾದರೂ ಮಂತ್ರಿ ಸ್ಥಾನ ಕೊಡಲೇಬೇಕೆಂದು ಒತ್ತಾಯ ಮಾಡಿದ್ದೆವು. ಆದರೆ ಕೋಲಾರ ಜಿಲ್ಲೆಗೆ ಮಂತ್ರಿ ಸಿಗುವ ಅವಕಾಶದಲ್ಲಿ ಅನ್ಯಾಯವಾಗಿದೆ. ನಮಗೆ ಮಂತ್ರಿಯಾಗುವ ಅವಕಾಶ ಸಿಕ್ಕಿಲ್ಲ ಎಂಬ ಬೇಸರ ಇಲ್ಲದಿದ್ದರೂ, ಕೋಲಾರ ಜಿಲ್ಲೆಯ ಹಿತದೃಷ್ಟಿಯಿಂದ ಆಗಿರುವ ಅನ್ಯಾಯವನ್ನು ಖಂಡಿಸುತ್ತೇನೆ. – ಕೊತ್ತೂರು ಮಂಜುನಾಥ್, ಶಾಸಕರು, ಕೋಲಾರ.
– ಕೆ.ಎಸ್.ಗಣೇಶ್