Advertisement
ಒಂದೇ ಮಾತಿನಲ್ಲಿ ಹೇಳಿ ಬಿಡಬೇಕೆಂದರೆ, ಮಳೆ ಬಂದಾಗ ಬೆಂಗಳೂರಿನಲ್ಲಿ ಹೆಚ್ಚಿನವರಿಗೆ ಸಂತೋಷವಾಗುವುದಿಲ್ಲ, ಬದಲಿಗೆ ಭಯ ಶುರುವಾಗುತ್ತದೆ. ದಿನಕ್ಕೊಂದು ತಲೆನೋವು ಜೊತೆಯಾದರೆ ಗತಿಯೇನು ಅನ್ನಿಸಿ ಆತಂಕ ಜೊತೆಯಾಗುತ್ತದೆ. ಮಳೆ ಶುರುವಾಯ್ತು ಅಂದ ಕ್ಷಣದಲ್ಲೇ ಕೆರೆಯಂತಾದ ರಸ್ತೆಗಳು, ಮುರಿದುಬಿದ್ದ ಮರಗಳು, ಜಲಾವೃತಗೊಂಡ ಮನೆ/ಅಪಾರ್ಟ್‌ಮೆಂಟ್‌ಗಳು, ಟ್ರಾಫಿಕ್‌ಜಾಮ್‌ನಿಂದ ನಿಂತುಹೋದ ವಾಹನಗಳು, ಕೊಳೆನೀರಿನ ಮಧ್ಯೆಯೇ ಮುಖ ಕಿವುಚಿಕೊಂಡು ನಿಂತ ನಾಗರಿಕರ ಚಿತ್ರಗಳು ಕಣ್ಮುಂದೆ ಬಂದು ನಿಲ್ಲುತ್ತವೆ.
Related Articles
ರಾಜಧಾನಿ ಮಳೆ ನೀರಿಗೆ ಮುಳುಗದಂತಾಗದಿರಲು ಭವಿಷ್ಯದ ಬೆಂಗಳೂರು ನಿರ್ಮಾಣದ ದೃಷ್ಟಿಯಿಂದ ನಾಗರಿಕರ ಹೊಣೆಗಾರಿಕೆಯೂ ಇದೆ. ನೀರಿನ ಸಂರಕ್ಷಣೆ ದೃಷ್ಟಿಯಿಂದ ಅವಕಾಶ ಇದ್ದರೆ ತಮ್ಮ ತಮ್ಮ ಮನೆಗಳಲ್ಲಿ ಸ್ವಯಂ ಪ್ರೇರಿತವಾಗಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿ, ಮಳೆ ನೀರು ಸಂಸ್ಕರಿಸಿ ಪುನರ್‌ಬಳಕೆಗೆ ಒತ್ತು ನೀಡಬೇಕು. ಮಳೆ ನೀರು ಕೊಯ್ಲು ವ್ಯವಸ್ಥೆಗೆ ಅವಕಾಶ ಇಲ್ಲವಾದರೆ ಕನಿಷ್ಠ ಇಂಗು ಗುಂಡಿ ನಿರ್ಮಿಸಿ ಮಳೆ ನೀರು ಇಂಗಿಸಿ ಅಂತರ್ಜಲ ವೃದ್ಧಿಗೆ ನೆರವಾಗಬೇಕು. ಇದರಿಂದ ಸ್ಪಲ್ಪ ಮಟ್ಟಿಗಾದರೂ ಮಳೆ ನೀರು ರಸ್ತೆಗೆ ಹರಿದು ಪ್ರವಾಹ ಉಂಟಾಗುವುದನ್ನು ತಪ್ಪಿಸಬಹುದು.
Advertisement
ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಮಳೆ ನೀರು ಸರಾಗವಾಗಿ ಹರಿಯುವಂತೆ ಮೋರಿ ಚರಂಡಿಗಳ ನಿರ್ಮಾಣ, ರಸ್ತೆಗೆ ಬಿದ್ದ ಮ ಳೆ ನೀರು ಮೋರಿ ಅಥವಾ ರಾಜಕಾಲುವೆಗೆ ನೇರವಾಗಿ ಸೇರ್ಪಡೆಯಾಗುವಂತೆ ನಿಯಮಬದ್ಧವಾಗಿ ರಸ್ತೆ ಮತ್ತು ಚರಂಡಿ ನಿರ್ಮಾಣ. ದೊಡ್ಡ ದೊಡ್ಡ ಅಟದ ಮೈದಾನ, ಪಾರ್ಕ್‌ಗಳಲ್ಲಿ ಇಂಗು ಗುಂಡಿ ನಿರ್ಮಿಸಿ ಸುತ್ತಮುತ್ತಲ ಪ್ರದೇಶದ ಮಳೆ ನೀರು ಅಲ್ಲಿಗೆ ಬಂದು ಸೇರುವಂತೆ ಮಾಡುವುದು. ಬಿಡಿಎ, ಕೆಎಚ್‌ಬಿ ಸೇರಿದಂತೆ ಗೃಹ ನಿರ್ಮಾಣ ಸಂಘಗಳು ಮುಂದಾದರೂ ತಾವು ಹಂಚಿಕೆ ಮಾಡುವ ನಿವೇಶನ, ಬಡಾವಣೆಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಕಡ್ಡಾಯಗೊಳಿಸುವುದು. ಹತ್ತು ಪ್ಲ್ರಾಟ್‌ಗಳಿಗಿಂತ ಹೆಚ್ಚಿರುವ ದೊಡ್ಡ ಅಪಾರ್ಟ್‌ಮೆಂಟ್‌ಗೆ ಮಳೆ ನೀರು ಕೊಯ್ಲು ವ್ಯವಸ್ಥೆ ಕಡ್ಡಾಯಗೊಳಿಸುವುದು. ನೀರನ್ನು ಸಂಸ್ಕರಿಸಿ ಪುನರ್ ಬಳಕೆ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುವುದು. ಮೊದಲಿಗೆ ಸರ್ಕಾರಿ, ಅರೆ ಸರ್ಕಾರಿ, ನಿಗಮ, ಮಂಡಳಿಗಳ ಕಚೇರಿಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಿ ಮಾದರಿಯಾಗುವುದು. ಇದಷ್ಟು ಗಮನದಲ್ಲಿರಲಿ
* ಮಳೆಯ ಪ್ರಮಾಣ ಹೆಚ್ಚಾದಂತೆ ರಸ್ತೆಯಲ್ಲಿ ಗುಂಡಿಗಳು ಹೆಚ್ಚುತ್ತವೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಈ ಬಗ್ಗೆ ಸದಾ ಎಚ್ಚರ ವಹಿಸಬೇಕು.
* ತಮ್ಮ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಗುಂಡಿ ಬಿದ್ದಾಗ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು.
* ಯಾವ ರಸ್ತೆಯಲ್ಲಿ ಗುಂಡಿ ಬಿದ್ದಿರುತ್ತದೆ ಎಂಬುದು ಸ್ಪಷ್ಟವಾಗಿ ಯಾರಿಗೂ ತಿಳಿದಿರುವುದಿಲ್ಲ. ಹೀಗಾಗಿ ರಾತ್ರಿ ಸಂಚಾರದ ಸಂದರ್ಭದಲ್ಲಿ ಹೆಚ್ಚಿನ ಗಮನ ಹರಿಸಬೇಕು.
* ಮಳೆನೀರು ನಿಲ್ಲುವ ರಸ್ತೆಗಳ ಬಗ್ಗೆ ಎಚ್ಚರ ವಹಿಸಬೇಕು. ಉದಾ: ಸ್ಯಾಂಕಿ ರಸ್ತೆ, ಕಿನೋ ಥಿಯೇಟರ್ ಸಮೀಪ, ಬಿನ್ನಿಮಿಲ್ ರೈಲ್ವೇ ಸೇತುವೆ ಕೆಳಗೆ ಹಲವು ಭಾಗದಲ್ಲಿ ಮಳೆಯಾದಾಗ ರಸ್ತೆ ಮೇಲೆ ನೀರು ನಿಂತಿರುತ್ತದೆ. ಈ ರಸ್ತೆಯಲ್ಲಿ ಸಂಚಾರಿಸುವ ಮುನ್ನವೇ ಜಾಗೃತರಾಗಬೇಕು. ಒಂದು ಕಾಲದಲ್ಲಿ ಹೀಗಿತ್ತು…
ಮಾಗಡಿ ಕೆಂಪೇಗೌಡರು ಯೋಜನಾಬದ್ಧವಾಗಿ ನಿರ್ಮಿಸಿದ ಊರಿದು. ಸೂಕ್ಷ್ಮವಾಗಿ ಗಮನಿಸಿ ನೋಡಿ. ಬೆಂಗಳೂರಿನಲ್ಲಿ ಎಲ್ಲ ಕೆರೆಗಳೂ ತಗ್ಗು ಪ್ರದೇಶದಲ್ಲಿವೆ (ಎಷ್ಟೋ ಕಡೆ ಕೆರೆಗಳನ್ನು ಕಬಳಿಸಿ ಅಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಲಾಗಿದೆ) ಹಿಂದೆಲ್ಲಾ ಕೆರೆಗಳಿಗೆ ಇಂಟರ್‌ಲಿಂಕ್ ಸಿಸ್ಟಂ ಇತ್ತು. ಅಂದರೆ, ಒಂದು ಕೆರೆ ತುಂಬಿದರೆ, ಅದು ಕೋಡಿ ಬಿದ್ದು, ಹೆಚ್ಚುವರಿ ಅನ್ನಿಸಿದ ನೀರು ಹರಿದು ಬಂದು ಮುಂದಿನ ಕೆರೆಯನ್ನು ಸೇರುತ್ತಿತ್ತು. ಆ ಕೆರೆಯಿಂದ ಮತ್ತೂಂದಕ್ಕೆ, ಅಲ್ಲಿಂದ ಇನ್ನೊಂದಕ್ಕೆ ನೀರು ಹರಿದು ಹೋಗುತ್ತಿತ್ತು. ಹಾಗಾಗಿ ಹಿಂದೆಲ್ಲಾ ಎಂಥ ಮಳೆ ಬಂದರೂ ಹೆದರುವ ಪರಿಸ್ಥಿತಿ ಇರಲಿಲ್ಲ. ಆದರೆ, ಈಗ ಕೆರೆಗಳು ಕಣ್ಮರೆಯಾಗಿವೆ. ಹಾಗಾಗಿ, ಮಳೆನೀರು ನೇರವಾಗಿ ರಸ್ತೆಗೆ, ಅಲ್ಲಿಂದ ಮನೆಗಳಿಗೆ ನುಗ್ಗುತ್ತಿದೆ. ಗಂಟೆಗಳ ಕಾಲ ನೀರು ನಿಲ್ಲುವುದರಿಂದ ಸಹಜವಾಗಿಯೇ ಹೆಜ್ಜೆಗೊಂದು ಗುಂಡಿ ನಿರ್ಮಾಣವಾಗುತ್ತಿದೆ. ಬೆಂಗಳೂರು “ಹೊಂಡಾ’ ಸಿಟಿ ಆಗುತ್ತಿದೆ!