ಜೈಪುರ್: ಯುಗಾದಿ ದಿನ ನಡೆದ ಕೋಮುಗಲಭೆಯಿಂದ ಬೂದಿ ಮುಚ್ಚಿದ ಕೆಂಡದಂತಾಗಿರುವ ಕರೌಲಿಯಲ್ಲಿ ಕರ್ಫ್ಯೂ ಮುಂದುವರಿದಿದೆ.
ಏತನ್ಮಧ್ಯೆ, ಹೊತ್ತಿ ಉರಿಯುತ್ತಿರುವ ಮನೆಯ ಮಧ್ಯದಿಂದ ಪುಟಾಣಿಯನ್ನು ಎತ್ತಿಕೊಂಡು, ತಾಯಿಯನ್ನೂ ರಕ್ಷಿಸಿದ ಪೊಲೀಸ್ ಪೇದೆಯ ಸಾಹಸವೀಗ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಕರೌಲಿ ಸನಿಹದ ಫೋಟಾಕಾಟ್‌ನಲ್ಲಿ ಯುಗಾದಿ ದಿನ ಸಂಜೆ ಮನೆಯೊಂದಕ್ಕೆ ಬೆಂಕಿ ತಗುಲಿತ್ತು. ಆ ಮನೆಯೊಳಗಿಂದ ಇಬ್ಬರು ಮಹಿಳೆಯರು, ಪುಟ್ಟ ಬಾಲಕ ಜೋರಾಗಿ ಅಳುತ್ತಿರುವ ಸದ್ದು ಕೇಳಿಸಿತು. ಅಳು ಕೇಳಿಬರುತ್ತಿದ್ದ ದಿಕ್ಕಿಗೆ ಮಿಂಚಿನಂತೆ ಧಾವಿಸಿದ ಪೇದೆ ನಟ್ರೇಶ್ ಶರ್ಮಾ, ಆ ಮೂವರನ್ನೂ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಸಾಗರ ನಗರಸಭೆಯಲ್ಲಿ ಇವತ್ತಿಗೂ ಬಿಎಸ್‌ವೈಯೇ ಸಿಎಂ!
ಪುಟಾಣಿಗೆ ಬಟ್ಟೆ ಮುಚ್ಚಿ, ಸುರಕ್ಷಿತವಾಗಿ ಎತ್ತಿಕೊಂಡು ಹೊರಬಂದಿದ್ದಾರೆ. ಪೇದೆಯ ಹಿಂದೆಯೇ ಮಹಿಳೆಯೂ ಸುರಕ್ಷಿತವಾಗಿ ಓಡಿಬಂದಿದ್ದಾರೆ.
ಜೀವದ ಹಂಗು ತೊರೆದು ನಾಗರಿಕರ ಪ್ರಾಣ ರಕ್ಷಿಸಿದ ಪೇದೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಗಲಭೆಗೆ ಸಂಬಂಧಿಸಿದಂತೆ ಇದುವರೆಗೆ 46 ಆರೋಪಿಗಳನ್ನು ಬಂಧಿಸಲಾಗಿದೆ.