ಅಹ್ಮದಾಬಾದ್ : ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಈಚೆಗೆ 19 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಅವರಿಗೆ ‘ನಿರಶನವನ್ನು ಕೊನೆಗೊಳಿಸಲು ಯಾವ ನಾಯಕ ಅವರಿಗೆ ನೀರು ಕೊಟ್ಟರು’ ಎಂಬ ಪ್ರಶ್ನೆಯನ್ನು ಗಾಂಧೀನಗರ ಪುರಸಭೆಯ ಗುಮಾಸ್ತರ ಹುದ್ದೆಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಲಾಗಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುವ ಹೊಣೆಗಾರಿಕೆಯನ್ನು ಗುಜರಾತ್ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಹೊರಗುತ್ತಿಗೆ ನೀಡಲಾಗಿತ್ತು. ಇದರಲ್ಲಿ ಯಾವುದೇ ಚುನಾಯಿತ ಪ್ರತಿನಿಧಿ ಶಾಮೀಲಾಗಿಲ್ಲ ಎಂದು ಮೇಯರ್ ಪ್ರವೀಣ್ ಭಾಯಿ ಪಟೇಲ್ ಮಾಧ್ಯಮಕ್ಕೆ ತಿಳಿಸಿದರು.
ಹಾರ್ದಿಕ್ ಪಟೇಲ್ ಉಪವಾಸ ಸತ್ಯಾಗ್ರಹ ಮುಗಿಸಲು ನೀರು ಕೊಟ್ಟ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ ನಾಲ್ಕು ಆಯ್ಕೆಗಳಿದ್ದವು. ಅವೆಂದರೆ 1. ಶರದ್ ಯಾದವ್, 2. ಶತ್ರುಘ್ನ ಸಿನ್ಹಾ, 3. ಲಾಲು ಪ್ರಸಾದ್ ಯಾದವ್, 4. ವಿಜಯ್ ರೂಪಾಣಿ. ಸರಿಯಾದ ಉತ್ತರ ಶರದ್ ಯಾದವ್ (ಮಾಜಿ ಕೇಂದ್ರ ಸಚಿವ ಮತ್ತು ಜೆಡಿಯು ಮಾಜಿ ಮುಖ್ಯಸ್ಥ) ಎಂಬುದಾಗಿತ್ತು.
25ರ ಹರೆಯದ ಹಾರ್ದಿಕ್ ಅವರು ಕಳೆದ ಆಗಸ್ಟ್ 25ರಂದು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಸೆ.6ರಿಂದ ಅವರು ನೀರು ಸೇವಿಸುವುದನ್ನು ನಿಲ್ಲಿಸಿದ್ದರು. ಸೆ.7ರಂದು (ಉಪವಾಸದ 14ನೇ ದಿನ) ಹಾರ್ದಿಕ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಸೆ.8ರಂದು ಶರದ್ ಯಾದವ್ ಅವರು ಆಸ್ಪತ್ರೆಯಲ್ಲಿ ಹಾರ್ದಿಕ್ ಗೆ ಕುಡಿಯಲು ನೀರು ಕೊಟ್ಟಿದ್ದರು. ಸೆ.9ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕವೂ ತಮ್ಮ ನಿರಶನ ಸತ್ಯಾಗ್ರಹ ಮುಂದುವರಿಸಿದ್ದ ಹಾರ್ದಿಕ್ ಸೆ.12ರಂದು ಅದನ್ನು ಕೊನೆಗೊಳಿಸಿದ್ದರು.