Advertisement
ನಮ್ಮದೊಂದು ವಿಭಿನ್ನ ದೇಶ. ಪ್ರಪಂಚದಲ್ಲೆಲ್ಲೂ ಇರದ ವೈವಿಧ್ಯತೆ, ವಿಶಿಷ್ಟತೆ ನಮ್ಮಲ್ಲಿದೆ. ಅದನ್ನೇ ಪೂರ್ತಿಯಾಗಿ ಅರ್ಥೈಸಿ ಕೊಳ್ಳಬೇಕಾದರೆ ಇದೇ ಭರತ ಖಂಡದಲ್ಲಿ ನಾಲ್ಕೈದು ಬಾರಿಯಾ ದರೂ ಜನ್ಮ ತಾಳಿ ಬರಬೇಕಾದೀತು. ಹಾಗೆಂದು ಈ ವೈವಿಧ್ಯತೆ ಯನ್ನು ಪುರಾವೀಕರಿಸಲು ಉತ್ತರದ ಮುಕುಟ ಕಾಶ್ಮೀರಕ್ಕೋ, ದಕ್ಷಿಣದ ಕನ್ಯಾಕುಮಾರಿಗೋ, ರಾಮ ಜನ್ಮ ಭೂಮಿಗೋ, ಕೃಷ್ಣ ಜನ್ಮಸ್ಥಳಕ್ಕೋ ಪ್ರವಾಸ ಹೋಗಿ ಬರಬೇಕೆಂದೇನಿಲ್ಲ. ಒಂದು ಸಣ್ಣ ಉದಾಹರಣೆ ಚಿಕ್ಕ ಜಿಲ್ಲೆ ಉಡುಪಿಯೇ ಸಾಕು. ಈಗಿನ ಹೊಸ ತಾಲೂಕುಗಳಿಗೂ ಮುನ್ನ ಇದ್ದ ಕುಂದಾಪುರ, ಉಡುಪಿ ಮತ್ತು ಕಾರ್ಕಳವನ್ನೇ ಗಣನೆಗೆ ತೆಗೆದುಕೊಂಡರೂ ಒಂದು ತಾಲೂಕು ಕೇಂದ್ರ ಇನ್ನೊಂದರಿಂದ 30-40 ಕಿ.ಮೀಗಳಷ್ಟೇ ದೂರ. ಹಾಗಿದ್ದರೂ ಸಹ ಭಾಷೆಯ ವಿಚಾರಕ್ಕೆ ಬಂದಾಗ ಒಂದೊಂದು ತಾಲೂಕುಗಳು ಇನ್ನೊಂದರಿಂದ ಭಿನ್ನ. ಅಚ್ಚಗನ್ನಡ ಮತ್ತು ಮಂಗಳೂರು ಕನ್ನಡದ ಮಿಶ್ರಣ ಉಡುಪಿ ತಾಲೂಕಿನ ಭಾಷೆಯಾದರೆ, ಕುಂದಗನ್ನಡವೆಂಬ ವಿಶೇಷ ಭಾಷೆ ಕುಂದಾಪುರದಲ್ಲಿ ಕಂಪು ಸೂಸುತ್ತದೆ. ಕಾರ್ಕಳ ತಾಲೂಕಿನ ವ್ಯಾಪ್ತಿಯೊಳಕ್ಕೆ ನುಸುಳುತ್ತಲೇ ತುಳು ಭಾಷೆಯ ಪರಿಚಯ ವಾಗುತ್ತದೆ. ಬಸ್ಸಿನಲ್ಲೊಮ್ಮೆ ಕುಂದಾಪುರ-ಉಡುಪಿ-ಕಾರ್ಕಳ ಮುಖಾಂತರ ಪ್ರಯಾಣಿಸಿದರೂ ಕೇವಲ 100 ಕಿ.ಮೀ. ವ್ಯಾಪ್ತಿಯೊಳಗೇ ಮೂರು ರೀತಿಯ ಭಾಷೆಯ ದರ್ಶನವಾಗುತ್ತದೆ. ಇದೇ ನೋಡಿ ಭಾರತೀಯತೆ! ಆಯಾ ಪ್ರದೇಶಕ್ಕೆ ತನ್ನದೇ ವಿಭಿನ್ನತೆ, ಅದರೊಳಗೂ ಏಕತೆ!
Related Articles
Advertisement
ಇನ್ನು ರಾಜ್ಯ-ರಾಜ್ಯಗಳ ಬಗೆಗೆ ಮಾತನಾಡ ಹೊರಟರೆ ತ್ರಿಪುರ ಮತ್ತು ಮಿಜೋರಾಂ ಈಶಾನ್ಯ ಭಾರತದ ಅತ್ಯಂತ ಸಾಕ್ಷರ ರಾಜ್ಯಗಳೆಂದು ಖ್ಯಾತಿ ಪಡೆದಿವೆ. ದಶಕಗಳಿಗೂ ಹಿಂದಿನ ದಾಖಲೆ ಗಳ ಪ್ರಕಾರ ಕೇರಳ ಸಾಕ್ಷರತೆಯಲ್ಲಿ ಪ್ರಥಮ ರಾಜ್ಯವೆನಿಸಿದ್ದರೂ 2013ರ ಗಣತಿಯ ಪ್ರಕಾರ ಶೇ. 94.65 ಸಾಕ್ಷರರನ್ನು ಹೊಂದಿ ತ್ರಿಪುರ ರಾಜ್ಯ ಕೇರಳ(ಶೇ.93.91)ವನ್ನೂ ಹಿಂದಿಕ್ಕಿ ಅಗ್ರಸ್ಥಾನ ಪಡೆದಿರುವುದು ಪುಟ್ಟ ರಾಜ್ಯದ ದಿಟ್ಟ ಸಾಧನೆ. ದೇಶದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಮೇಘಾಲಯ ಅಂಗ್ರಪಕ್ತಿಯಲ್ಲಿ ಕಾಣಸಿಗುತ್ತದೆ. ಸಿಕ್ಕಿಂ ರಾಜ್ಯದ ಸುಮಾರು 75,000 ಹೆಕ್ಟೇರ್ ಭೂ ಪ್ರದೇಶ ಸಾವಯವ ಕೃಷಿಯಲ್ಲಿ ಲೀನವಾಗಿದೆ. ಈ ಮೂಲಕ 2016ರಲ್ಲಿ ದೇಶದ ಮೊಟ್ಟಮೊದಲ ಸಂಪೂರ್ಣ ಸಾವಯವ ರಾಜ್ಯವೆಂಬ ಗೌರವಕ್ಕೆ ಅದು ಪಾತ್ರವಾಗಿದ್ದು ನಿರಂತರ ಧ್ಯಾನದ ಫಲ. ಇನ್ನು ವೈಟ್ ಪ್ಯಾಟ್, ಗೋಲ್ಡನ್ ಮುಗಾ ಮತ್ತು ವಾರ್ಮ್ಏರಿ ಎಂಬ ಮೂರು ಬಗೆಯ ವಿಭಿನ್ನ ರೇಷ್ಮೆ ತಯಾರಾಗುವುದು ಕೇವಲ ಅಸ್ಸಾಂ ರಾಜ್ಯದಲ್ಲಿ. ದೇಶದಲ್ಲಿ ಬೆಳೆಯುವ ಚಹಾದ ಒಟ್ಟು ಪ್ರಮಾಣದ ಅರ್ಧಕ್ಕೂ ಹೆಚ್ಚು ಅಸ್ಸಾಮಿನದ್ದೇ ಎನ್ನುವುದು ಈಶಾನ್ಯದ ಗರಿಮೆಗೆ ಮತ್ತೂಂದು ಸಾಕ್ಷಿ. ವರದಕ್ಷಿಣೆಯ ಪಿಡುಗು ಪೂರ್ತಿ ಈಶಾನ್ಯ ರಾಜ್ಯದಲ್ಲೆಲ್ಲೂ ಇಲ್ಲವೆನ್ನುವುದು ಒಂದೆಡೆ ಹೆಮ್ಮೆ ಮೂಡಿಸಿದರೆ ಇನ್ನೊಂದೆಡೆ ಕನ್ನಡಿ ಕಂಡುಕೊಂಡಾಗ ನಾಚಿಕೆಯೆನ್ನಿಸುವುದೂ ಹೌದು. ಒಟ್ಟು 220 ಭಾಷೆಗಳ ತವರು ಈಶಾನ್ಯವೆಂಬುದು ಸೋಜಿಗದ ಸಂಗತಿ. ಮೊಘಲರು ಆಕ್ರಮಿಸಲಾಗದ ಭಾರತದ ಭೂಮಿಯಿದ್ದರೆ ಅದು ಕೇವಲ ಈಶಾನ್ಯ ಭಾಗ ಮಾತ್ರ. ದೇಶದ ಪ್ರಮುಖ ಏಳು ರಾಷ್ಟ್ರೀಯ ಉದ್ಯಾನಗಳಿರುವುದು ಈಶಾನ್ಯದಲ್ಲಿಯೇ. ಅದರಲ್ಲೂ ಒಂದು ಕೊಂಬಿನ ಘೇಂಡಾಮೃಗ ಕಾಣಸಿಗುವುದು ಅಸ್ಸಾಮಿನ ಕಾಜಿರಂಗದಲ್ಲಿ ಮಾತ್ರ.
ನಮ್ಮಲ್ಲಿ ಸ್ವಚ್ಛತೆಯ ಕಲ್ಪನೆಯನ್ನು ಅದರ ಬಗೆಗೆ ಅರಿವನ್ನು ಮೂಡಿಸಿದ ಖ್ಯಾತಿ ಪ್ರಧಾನಿ ನರೇಂದ್ರ ಮೋದಿಯವರದ್ದು. ಅಂದಿನವರೆಗೂ ಸಂಕೀರ್ಣವಾಗಿದ್ದ ಆ ಜನಜಾಗೃತಿ ಮೋದಿ ಯವರು ಪ್ರಧಾನಿಯಾದ ಬಳಿಕ ದಟ್ಟೈಸಿತು. ಆದರೆ ಮೇಘಾಲ ಯದಲ್ಲಿ ಮೌಲಿನ್ನಾಂಗ್ ಎಂಬೊಂದು ಹಳ್ಳಿಯಿದೆ. 2003ರಲ್ಲಿ “ಡಿಸ್ಕವರ್ ಇಂಡಿಯಾ’ ಎಂಬ ಪತ್ರಿಕೆಯೊಂದು ಸಮೀಕ್ಷೆ ನಡೆಸಿ ಏಷ್ಯಾದ ಅತಿ ಸ್ವತ್ಛ ಹಳ್ಳಿ ಎಂಬ ಪಟ್ಟ ಹಳ್ಳಿಗೆ ನೀಡಿತು. ಹಳ್ಳಿಯ ಬೀದಿಬದಿಯಲ್ಲಿ, ಮನೆಮನೆಗಳೆದುರು ಬಿದಿರಿನ ಬುಟ್ಟಿಯೊಂದು ತೂಗುತ್ತಿದ್ದು ಅದರಲ್ಲೇ ಕಸವನ್ನು ಎಸೆಯ ಲಾಗುತ್ತಿತ್ತು. ಹುಟ್ಟಿದ ಮಗುವೊಂದು ಶಾಲೆಗೆ ಸೇರುವುದಕ್ಕೂ ಮುನ್ನವೇ ಅದಕ್ಕೆ ನೀಡಲಾಗುತ್ತಿದ್ದ ಪ್ರಾಥಮಿಕ ಶಿಕ್ಷಣವೇ ಸ್ವತ್ಛತೆಯ ಅರಿವು. ಇಂದಿಗೂ ಅಲ್ಲಿ ಮರದಿಂದ ಉದುರುವ ಎಲೆಗಳನ್ನು ಹೂವು ಗಳನ್ನು ಗುಂಡಿಯಲ್ಲಿ ಹಾಕಿ ಗೊಬ್ಬರ ತಯಾರಿಸಲಾಗುತ್ತದೆ. ಮನೆಯಲ್ಲಿ ಉಳಿದ ತಿನಿಸನ್ನು ಊರಿಂದ ಹೊರಗೆ ಹಂದಿಗಳಿಗೆ ಹಾಕಲಾಗುತ್ತದೆ. ಯಾವುದೇ ಮನೆ ನಿರ್ಮಾಣಕ್ಕೂ ಮುನ್ನವೇ ಅದರ ಶೌಚಾಲಯವನ್ನು ನಿರ್ಮಿಸಲಾಗುತ್ತದೆ. ಇನ್ನು ಬಯಲು ಶೌಚದ ಬಗೆಗೆ ಚರ್ಚೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಗಮನಾರ್ಹವೆಂಬುದನ್ನು ಸಾಧಿಸಿ ತೋರಿವೆ. ಇವೆರಡೂ ರಾಜ್ಯಗಳು ಈಶಾನ್ಯದ ಬಯಲು ಶೌಚಮುಕ್ತವೆಂದು ಘೋಷಿಸುವ ಮೂಲಕ ಅಕ್ಟೋಬರ್ 2, 2019ಕ್ಕಿದ್ದ ಸ್ವತ್ಛತಾ ಗುರಿಯನ್ನು ಬಹುಬೇಗನೆ ತಲುಪಿ ಉಳಿದ ರಾಜ್ಯಗಳಿಗೆ ಮಾದರಿಯೆನಿಸಿವೆ.
ಇಷ್ಟೆಲ್ಲಾ ಹೇಳಬೇಕಾಯಿತೇಕೆಂದರೆ ಈಶಾನ್ಯ ಭಾರತೀಯರು ಮೊದಲಿನಿಂದಲೂ ನಿರ್ಲಕ್ಷ್ಯಕ್ಕೊಳಗಾಗುತ್ತಲೇ ಇದ್ದಾರೆ. ಅವರ ಭಾಷೆ, ವರ್ಣ, ಮುಖಚರ್ಯೆಯ ನೆಪದಲ್ಲಿ ಅವರನ್ನು ಭಾರತದಿಂದ ವಿಭಿನ್ನರೆಂದು ಬದಿಗೊತ್ತಿದ್ದೇವೆ. ದೇಶದ ನಾನಾ ಕಡೆ ಅವರು ನಿಂದನೆಗೊಳಗಾಗುತ್ತಿರುವುದು ಅನ್ಯಾಯವೇ ಸರಿ. ಮುಖಾಕೃತಿಗೆ ಅವರನ್ನು ಚೀನೀಯರ ಜೊತೆಗೆ ಹೋಲಿಕೆ ಮಾಡುತ್ತಿರುವುದು ಕೂಡ ಅಕ್ಷಮ್ಯ. ಕಾಶ್ಮೀರ, ಕೇರಳದಲ್ಲಿಯ ಭಯಾನಕ ವಾತಾವರಣ ಈಶಾನ್ಯ ರಾಜ್ಯಗಳಲ್ಲಿ ಅದೆಂದೋ ನೆಲೆಯಾಗಿತ್ತು. ನುಸುಳುಕೋರರ ಸಮಸ್ಯೆ, ಬಂಡುಕೋರರ ಸಮಸ್ಯೆ, ಜನಾಂಗೀಯ ಘರ್ಷಣೆ, ಯುವ ಜನಾಂಗದ ವಲಸೆ, ನಿರುದ್ಯೋಗ, ಬಡತನ, ಅನಿಶ್ಚಿತ ಅಲೆಮಾರಿ ಬದುಕು, ಮತಾಂತ ರದ ಜ್ವಾಲೆಗಳು ಅವರನ್ನು ಅದಾಗಲೇ ಸಾಕಷ್ಟು ಸುಟ್ಟು ಹಾಕಿವೆ. ಅದಕ್ಕೆ ಅಲ್ಲಿನ ಸರ್ಕಾರದ ಮತ್ತು ಜನರ ಕೊಡುಗೆಯೂ ಇಲ್ಲವೆಂದಿಲ್ಲ. ಹಾಗೆಂದು ಅಲ್ಲಿನ ಶ್ರೀಮಂತಿಕೆಗೇನೂ ಕುಂದು ಬಂದಿಲ್ಲ. ನೂರೆಂಟು ಸಮಸ್ಯೆಗಳ ನಡುವೆಯೂ ಈಶಾನ್ಯ ದೇಶಕ್ಕೆ ಅದರದ್ದೇ ಆದ ಕೊಡುಗೆ ನಿರಂತರವಾಗಿ ನೀಡುತ್ತಲೇ ಬಂದಿದೆ. ಅಖಂಡ ಭಾರತದ ಪರಿಕಲ್ಪನೆಯಲ್ಲಿ ಭಾರತ ತೇಲಾಡುತ್ತಿರುವ ಈ ಸಂದರ್ಭ ಯಾವುದೇ ರೀತಿಯ ತಾರತಮ್ಯ, ಬೇರ್ಪಡುವಿಕೆ, ಮನಸ್ಸುಗಳ ನಡುವೆ ತಡೆಗೋಡೆಗಳ ನಿರ್ಮಾಣ ಸಲ್ಲದು. ಈಶಾನ್ಯದವರನ್ನು ಭಾರತದ ತೆಕ್ಕೆಗೆ ಸ್ವಾಗತಿಸುವ ಮೂಲಕ ಅವರ ಲ್ಲಿನ ಅಸಮಾಧಾನಕ್ಕೆ ಕೊನೆ ಹಾಡುವುದು ಇಂದಿನ ತುರ್ತು. ಅದಕ್ಕೇ ಇರಬೇಕು ನಮ್ಮ ನಾಡಿನ ಈಶಾನ್ಯದ ರಾಜ್ಯಪಾಲ ಪಿ.ಬಿ. ಆಚಾರ್ಯರು ಹೇಳಿದ್ದು ನಾವು ಅಮೆರಿಕಾದ ಬಗ್ಗೆ ತಿಳಿದು ಕೊಂಡಷ್ಟು ಕೂಡ ಈಶಾನ್ಯ ರಾಜ್ಯಗಳ ಬಗ್ಗೆ ಅರಿತಿಲ್ಲ ಎಂದು.
ಕೊನೆಮಾತುಸಂಘದ ಮಾದರಿ ಮತ್ತು ಮಾರ್ಗದರ್ಶನದಲ್ಲಿ ಕರ್ನಾಟಕದ ಅನೇಕ ವಿದ್ಯಾಸಂಸ್ಥೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಈಶಾನ್ಯದ ಮಕ್ಕಳು ವಿದ್ಯಾರ್ಜನೆಯಲ್ಲಿ ತೊಡಗಿದ್ದಾರೆ. ಮತಾಂತರವೂ ಸೇರಿದಂತೆ ಈಶಾನ್ಯದ ಹತ್ತಾರು ಸಮಸ್ಯೆಗಳಿಗೆ ಯುವಜನಾಂಗ ಬಲಿಯಾಗದಿರಲೆಂಬ ಆಶಯದಿಂದ ರಾಷ್ಟ್ರೀಯ ಸ್ವಯಂ ಸೇವಾ ಸಂಘ ದಕ್ಷಿಣದ ಅನೇಕ ರಾಜ್ಯಗಳಿಗೆ ಅವರನ್ನು ಕರೆತಂದು ಬಹುತೇಕ ಉಚಿತ ವಿದ್ಯೆಯನ್ನು ದೊರಕಿಸುತ್ತಿದೆ. ಅವರಲ್ಲೊಬ್ಬ ಅತ್ಯುತ್ತಮ ಪ್ರಜೆ ಮತ್ತು ರಾಷ್ಟ್ರಭಕ್ತಿಯ ರೂವಾರಿ ಯನ್ನು ಸ್ಥಾಪಿಸಿ ಈಶಾನ್ಯಕ್ಕೆ ಹಿಂದಿರುಗಿಸುತ್ತಿದೆ. ಆ ಮೂಲಕ ಅವರು ಅಲ್ಲಿಯೇ ಶಿಕ್ಷಕರಾಗಿಯೋ ಅಥವಾ ಇನ್ನಿತರ ಚಟುವಟಿಕೆಗಳಿಂದಲೋ ದೇಶಕ್ಕೆ ಕೊಡುಗೆ ನೀಡಲೆಂಬುದು ಅದರ ಮೂಲೋದ್ದೇಶ. ಸಣ್ಣ ಪ್ರಾಯದಲ್ಲೇ ಇಲ್ಲಿ ಬಂದು ನೆಲೆಸುವ ಅಂತಹಾ ಮಕ್ಕಳು ಇಲ್ಲಿನ ಭಾಷೆಯನ್ನು ಸಂಪೂರ್ಣವಾಗಿ ಗ್ರಹಿಸುತ್ತವೆ. ಇದೇ ಮಾದರಿಯಲ್ಲಿ ಈಶಾನ್ಯದ ಹಲವಾರು ಮಕ್ಕಳನ್ನು ಪೋಷಿಸುತ್ತಿರುವ “ಅಮೃತಭಾರತಿ’ ಎಂಬ ವಿದ್ಯಾಸಂಸ್ಥೆಯೊಂದು ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿದೆ. ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ಈ ವಿದ್ಯಾಸಂಸ್ಥೆಯ ಮಕ್ಕಳು ಒಂದಿಷ್ಟೂ ಉಚ್ಚಾರ ದೋಷವಿಲ್ಲದೇ ಕನ್ನಡದ ಗೀತೆಯೊಂದನ್ನು ಸೊಗಸಾಗಿ ಹಾಡಿ ನೋಡುಗರ ಹುಬ್ಬೇರಿಸಿದರು. ಈಶಾನ್ಯದವರು ನಮ್ಮವರೇ ಎನ್ನಲು ಇದಕ್ಕಿಂತ ದೊಡ್ಡ ಪುರಾವೆ ಇನ್ನೇನು ಬೇಕು? ಅರ್ಜುನ್ ಶೆಣೈ