Advertisement

ಯಾರೇ ನೀ ಮೋಹಿನಿ!

12:09 PM Oct 04, 2017 | |

ಸುಷ್ಮಾ ಎಂದರೆ ಬಹುಶಃ ಯಾರಿಗೂ ಈ ಹುಡುಗಿಯ ಪರಿಚಯವಾಗುವುದಿಲ್ಲ. ಆದರೆ, “ಲಕುಮಿ’ ಎಂದು ಹೇಳಿ ನೋಡಿ; ಎಲ್ಲರಿಗೂ ಥಟ್ಟಂತ ನೆನಪಾಗುತ್ತಾಳೆ. ಇಡೀ ಧಾರಾವಾಹಿಯ ಜೀವವೇ ಆಗಿದ್ದ ಆ ಪುಟ್ಟ ಹುಡುಗಿಯನ್ನು ಕಿರುತೆರೆ ವೀಕ್ಷಕರು ಮರೆಯಲು ಸಾಧ್ಯವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಸುಷ್ಮಾ ವೀಕ್ಷಕರ ಮನಸ್ಸನ್ನು ಆವರಿಸಿದ್ದರು. ಸದ್ಯ ಸುಷ್ಮಾ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ “ಯಾರೇ ನೀ ಮೋಹಿನಿ’ ಧಾರಾವಾಹಿಯ ನಾಯಕಿ. 6ನೇ ವಯಸ್ಸಿನಲ್ಲೇ “ವೆಂಕಟೇಶ ಮಹಾತ್ಮೆ’ ಧಾರಾವಾಹಿಯಿಂದ ಕಿರುತೆರೆ ಪ್ರವೇಶ ಮಾಡಿದ ಈಕೆ, “ಲಕುಮಿ’ ಮತ್ತು “ಕನಕ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಈ ಅಪ್ಸರೆಯ ಬದುಕಿನಲ್ಲಿ ಒಂದು ಟ್ರಿಪ್‌ ಹೊಡೆಯುವುದಾದರೆ…


ಸುಮಾರು ದಿನ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಎಲ್ಲಿಗೆ ಹೋಗಿದ್ರಿ?

ಎಲ್ಲೂ ಹೋಗಿರಲಿಲ್ಲ. ಸುರಾನಾ ಕಾಲೇಜಿನಲ್ಲಿ ಬಿಬಿಎ ಡಿಗ್ರಿ ವ್ಯಾಸಂಗ ಮಾಡ್ತಾ ಇದ್ದೆ. “ಕನಕ’ ಧಾರಾವಾಹಿ ಮುಗಿಸುವಾಗ ನಾನು ಸೆಕೆಂಡ್‌ ಪಿಯುಸಿ ಅಲ್ಲಿ ಇದ್ದೆ. ಪದವಿ ಮುಗಿಯುವವರೆಗೂ ಯಾವುದೇ ಧಾರಾವಾಹಿ ಒಪ್ಪಿಕೊಳ್ಳಬಾರದು ಅಂತ ತೀರ್ಮಾನ ಮಾಡಿದ್ದೆ. ಮೊನ್ನೆ ಮೊನ್ನೆಯಷ್ಟೇ ಡಿಗ್ರಿ ಮುಗಿದಿದೆ. ಅದಕ್ಕೆ ಸರಿಯಾಗಿ “ಯಾರೇ ನೀ ಮೋಹಿನಿ’ ಧಾರಾವಾಹಿಯಲ್ಲ ಅವಕಾಶ ಸಿಕ್ಕಿತು. 3 ವರ್ಷಗಳ ಗ್ಯಾಪ್‌ ಬಳಿಕ ಮತ್ತೆ ಟಿ.ವಿಯಲ್ಲಿ ಪ್ರತ್ಯಕ್ಷವಾಗಿದ್ದೇನೆ.

Advertisement

ಕಿರುತೆರೆಯಲ್ಲಿಯೇ ಸೆಟಲ್‌ ಆಗುವ ಯೋಚನೆ ಇದೆಯಾ?
ಖಂಡಿತಾ ಇಲ್ಲ. ಈ ವರ್ಷ ನಾನು ಓದಿನಿಂದ ಬ್ರೇಕ್‌ ತೆಗೆದುಕೊಂಡಿದ್ದೇನೆ. ಮುಂದಿನ ವರ್ಷ ಎಂಬಿಎ ಮಾಡಲು ಮತ್ತೆ ಕಾಲೇಜಿಗೆ ಸೇರುತ್ತೇನೆ. ಉತ್ತಮ ಅವಕಾಶ ಸಿಕ್ಕರೆ ಮುಂದೆಯೂ ನಟಿಸುತ್ತೇನೆ. ಆದರೆ, ನನಗೆ ಕಾರ್ಪೋರೆಟ್‌ ಉದ್ಯೋಗಿ ಆಗಬೇಕು ಅಂತ ಕನಸಿದೆ. 

ನಿಮ್ಮ ಪಾತ್ರಗಳಂತೆ ನಿಮ್ಮದು ಕೂಡ ಪ್ರಬುದ್ಧ ವ್ಯಕ್ತಿತ್ವನಾ? 
ನಾನು ನಿರ್ವಹಿಸಿದ ಪಾತ್ರಗಳಿಗೂ ನನಗೂ ಯಾವುದೇ ಹೋಲಿಕೆ ಇಲ್ಲ. “ಲಕುಮಿ’ಯಲ್ಲಿ ನಾನು ಪಕ್ಕಾ ಹಳ್ಳಿ ಹುಡುಗಿ. ಅಲ್ಲಿ ನನ್ನ ಭಾಷೆ ಕೂಡ ಸಂಪೂರ್ಣ ಗ್ರಾಮೀಣ ಭಾಷೆ. “ಕನಕ’ದಲ್ಲಿ ಎಲ್ಲಾ ಸಂದರ್ಭಗಳನ್ನೂ ಏಕಾಂಗಿಯಾಗಿ ಎದುರಿಸುವಂಥ ಛಾತಿ ಇರೋ ಹುಡುಗಿ. ಆದರೆ, ವಾಸ್ತವದಲ್ಲಿ ನಾನು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಸಿಟಿ ಹುಡುಗಿ. ಎಲ್ಲದಕ್ಕೂ ಅಪ್ಪ, ಅಮ್ಮನನ್ನು ಆಶ್ರಯಿಸುವಂಥವಳು. ಧಾರಾವಾಹಿಗಳಲ್ಲಿ ತುಂಬಾ ಮಾತನಾಡುತ್ತೇನೆ. ರಿಯಲ್ಲಾಗಿ, ನಾನೊಬ್ಬಳು ಮುಗೆœ!

ಯಾರೇ ನೀ ಮೋಹಿನಿಯಲ್ಲಿ “ಅತಿಮಾನುಷ ಶಕ್ತಿ’ಯ ಪರಿಕಲ್ಪನೆ ಇದೆ. ಇದನ್ನೆಲ್ಲಾ ನಂಬುತ್ತೀರಾ? 
ನನಗೆ ಮೂಢನಂಬಿಕೆ ಇಲ್ಲ. ಬೆಕ್ಕು ಅಡ್ಡ ಬಂದರೆ ಏನೋ ಕೆಟ್ಟದ್ದಾಗುತ್ತದೆ. ದೆವ್ವ ನಮ್ಮ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಹಿಂಸೆ ಮಾಡುತ್ತದೆ ಎಂಬುದನ್ನೆಲ್ಲಾ ನಾನು ನಂಬುವುದಿಲ್ಲ. ಆದರೆ, ಒಂದು ಧನಾತ್ಮಕ ಶಕ್ತಿ ಇರುತ್ತದೆ. ಅದು ನಮ್ಮನ್ನು ಕೆಟ್ಟ ಶಕ್ತಿಗಳಿಂದ ರಕ್ಷಿಸುತ್ತದೆ ಎಂಬುದನ್ನು ನಂಬುತ್ತೇನೆ. 

ಇಡೀ ದಿನ ಲಂಗ ದಾವಣಿ ಹಾಕುವುದಕ್ಕೆ ಕಿರಿಕಿರಿ ಆಗುವುದಿಲ್ಲವಾ? 
ಎಲ್ಲರೂ ಇದೇ ಪ್ರಶ್ನೆ ಕೇಳ್ತಾರೆ. ನಿಜ ಹೇಳಬೇಕೆಂದರೆ ಲಂಗ ದಾವಣಿ ಬಹಳ ಆರಾಮದಾಯಕ ಉಡುಗೆ. ತುಂಬಾ ಜನ ಇದನ್ನು ಹಾಕಿರುವುದಿಲ್ಲ ಅದಕ್ಕೇ ಇದು ಕಿರಿಕಿರಿ ಅಂತ ತಿಳ್ಕೊಂಡಿರ್ತಾರೆ.

Advertisement

ನಿಮಗೆ ತುಂಬಾ ಕ್ರೇಜ್‌ ಇರುವ ವಸ್ತು ಯಾವುದು?
ಸನ್‌ ಗ್ಲಾಸ್‌ ಮತ್ತು ಫ‌ೂಟ್‌ವೇರ್‌ಗಳು. ಹೋದಲ್ಲಿ ಬಂದಲ್ಲೆಲ್ಲಾ ನಾನು ಇವುಗಳನ್ನು ಕೊಳ್ಳುತ್ತೇನೆ. ನನ್ನ ಬಳಿ ಬಟ್ಟೆಗಿಂತ ಜಾಸ್ತಿ ಕನ್ನಡಕ ಮತ್ತು ಚಪ್ಪಲಿಗಳಿವೆ.

ಕಾಲೇಜು ಜೀವನ ಹೇಗಿತ್ತು. ನೀವು ಮತ್ತು ನಿಮ್ಮ ಸ್ನೇಹಿತರ ಅಡ್ಡಾ ಯಾವುದು?
ಶೂಟಿಂಗ್‌ ನಡುವೆಯೇ ಚೆನ್ನಾಗಿ ಓದಿ ಪಿಯುಸಿಯಲ್ಲಿ ಶೇ.91 ಅಂಕ ಗಳಿಸಿದ್ದೆ. ಡಿಗ್ರಿಯಲ್ಲಿ ಶೇ.83 ತೆಗೆದಿದ್ದೇನೆ. ಜಯನಗರ 4ನೇ ಬ್ಲಾಕ್‌ನ ಬಿಡಿಎ ಕಾಂಪ್ಲೆಕ್ಸ್‌ನಲ್ಲಿ ಇರುವ ಚಾಟ್ಸ್‌ ಅಂಗಡಿ ನಮ್ಮ ಫೇವರಿಟ್‌ ಅಡ್ಡಾ. 

ನಟನಾ ಜೀವನದಲ್ಲಿ ಎಂದೂ ಮರೆಯಲಾಗದ ಘಟನೆ?
3 ವರ್ಷಗಳ ಗ್ಯಾಪ್‌ ಬಳಿಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದೇನೆ. ಎಲ್ಲರೂ ನನ್ನನ್ನು ಮರೆತಿರುತ್ತಾರೆ ಅಂದುಕೊಂಡಿದ್ದೆ. ಆದರೆ, ಮೈಸೂರಿನಲ್ಲಿ “ಯಾರೇ ನೀ ಮೋಹಿನಿ’ ಪ್ರೋಮೊ ಬಿಡುಗಡೆ ಕಾರ್ಯಕ್ರಮದಲ್ಲಿ ಜನರು ನಡೆದುಕೊಂಡ ರೀತಿ ನೋಡಿ ಮೂಕಳಾದೆ. ನಾನು ವೇದಿಕೆ ಹತ್ತುತ್ತಿದ್ದಂತೆ ಜನರು ಲಕುಮಿ… ಲಕುಮಿ.. ಅಂತ ಕೂಗಲು ಶುರು ಮಾಡಿದರು. ಮಾತನಾಡಲೆಂದೇ ವೇದಿಕೆ ಹತ್ತಿದ್ದೆ. ಆದರೆ ಆ ಕ್ಷಣ ಮಾತು ಮರೆತು ಕೆಲ ಕಾಲ ಹಾಗೇ ನಿಂತುಕೊಂಡೆ.

ಮನೆ ಊಟ ಮತ್ತು ರಸ್ತೆ ಬದಿ ಚಾಟ್ಸ್‌. ಎರಡರಲ್ಲಿ ನಿಮಗೆ ತುಂಬಾ ಇಷ್ಟ ಯಾವುದು?
 ನನಗೆ ಎರಡೂ ಇಷ್ಟ. ನಾನು ತುಂಬಾ ಫ‌ುಡ್ಡಿ. ಒಳ್ಳೆಯ ಊಟ ಸಿಕ್ಕರೆ ಖುಷಿಯಿಂದ ಹೊಟ್ಟೆ ತುಂಬಾ ಊಟ ಮಾಡ್ತೀನಿ. ನಮ್ಮ ಮನೆಯಲ್ಲಿ ಪ್ರತಿ ಮಧ್ಯಾಹ್ನ ಚಪಾತಿ, 2 ಬಗೆಯ ಪಲ್ಯಗಳು. ಚಿತ್ರಾನ್ನ ಅಥವಾ ಪುಳಿಯೊಗರೆ. ಅನ್ನ, ಹುಳಿ, ತಿಳಿಸಾರು ಮಾಡಿರುತ್ತಾರೆ. ನಾನು ಇಷ್ಟನ್ನೂ ತಿನ್ನುತ್ತೇನೆ. ಹೊರಗಡೆ ಹೋದಾಗ ಊಟಕ್ಕಿಂತ ಚಾಟ್ಸ್‌ ತಿನ್ನುವುದೆಂದರೆ ಇಷ್ಟ. ಪಿಜ್ಜಾ, ಬರ್ಗರ್‌ಗಳೆಂದರೆ ನನಗೆ ಅಷ್ಟಕ್ಕಷ್ಟೇ. ಹಸಿವಾದರೆ ನಾನು ಓಡೋಡಿ ಹೋಗುವ ಜಾಗ ವಿವಿ ಪುರಂನ ಚಾಟ್‌ ಸ್ಟ್ರೀಟ್‌. 

ನೀವು ಸೆಟ್‌ನಲ್ಲಿ ಫೋನ್‌ ಮತ್ತು ಟ್ಯಾಬ್‌ಗಳನ್ನು ಬಿಟ್ಟಿರೋದೇ ಇಲ್ವಂತೆ!
ಸೆಟ್‌ನಲ್ಲಿ ಮಾತ್ರವಲ್ಲ, ಮನೆಯಲ್ಲೂ ಟ್ಯಾಬ್‌ ಹಿಡಿದುಕೊಂಡೇ ಇರಿ¤àನಿ. ಸೂಪರ್‌ ಮಾರಿಯೊ, ಆ್ಯಂಗ್ರಿ ಬರ್ಡ್ಸ್‌, ಕ್ಯಾಂಡಿ ಕ್ರಶ್‌, ಬಬಲ್‌ ಶೂಟರ್‌ ಗೇಮ್‌ಗಳೆಂದರೆ ನನಗೆ ಪ್ರಾಣ. ಹಾಗಂತ ಬರೀ ಗೇಮ್ಸ್‌ ಆಡಿಕೊಂಡೇ ಕೂತಿರ್ತೀನಿ ಅಂತ ಅನ್ಕೋಬೇಡಿ. ನಾನು ಕಾದಂಬರಿಗಳನ್ನು ಓದುತ್ತೀನಿ.  ಕಾದಂಬರಿಗಳನ್ನು ಓದುತ್ತೀನಿ. ಹ್ಯಾರಿಪಾಟರ್‌ ಸೀರೀಸ್‌ ನನಗೆ ತುಂಬಾ ಇಷ್ಟ. ಮುಂದೆ ಎಸ್‌.ಎಲ್‌. ಭೈರಪ್ಪ ಕಾದಂಬರಿಗಳನ್ನು ಓದಬೇಕು ಅನ್ಕೊಂಡಿದ್ದೇನೆ. 

ಈಗಲೂ ಫ್ರೆಂಡ್ಸ್‌ ಜೊತೆ ಹೊರಗಡೆ ಸುತ್ತಾಡುತ್ತೀರಾ? ಜನ ಗುರುತು ಹಿಡಿದು ಮಾತನಾಡಿಸಿದ ಪ್ರಸಂಗ ಯಾವುದಾದರು ಹೇಳಿ…
ನಾನು ಚಿಕ್ಕವಳಿದ್ದಾಗ ಯಾವೆಲ್ಲಾ ಜಾಗಗಳಿಗೆ ಹೋಗಿ ಚಾಟ್ಸ್‌ ತಿನ್ನುತ್ತಾ ಇದ್ದೆನೋ ಈಗಲೂ ಅದೇ ಜಾಗಗಳಿಗೇ ನಾನು ಹೋಗುವುದು. ಕೆಲವರು ನನ್ನ ಬಳಿ ಬಂದು ಮಾತಾಡಿಸುತ್ತಾರೆ. ಇನ್ನೂ ಕೆಲವರು ದೂರದಿಂದಲೇ ನೋಡಿ ಆಶ್ಚರ್ಯಪಡುತ್ತಾರೆ. ಕೆಲವರು ನೀವು ರಸ್ತೆ ಬದಿ ಗೋಲ್‌ಗ‌ಪ್ಪಾ ತಿನ್ನುತ್ತೀರಾ? ಅಂತ ಕೇಳುತ್ತಾರೆ. ನಾನು ಅವರಿಗೆ, “ನಾನೂ ಮನುಷ್ಯಳೇ, ನನಗೂ ಇದೇ ಇಷ್ಟ ಆಗುವುದು. ನಾವು ಟಿ.ವಿಯಲ್ಲಿ ಕಾಣಿಸಿಕೊಳ್ಳುವ ಮಾತ್ರಕ್ಕೆ ಸ್ಟಾರ್‌ ಹೋಟೆಲ್‌ಗೇ ಹೋಗಬೇಕೆಂಬ ನಿಯಮ ಇಲ್ವಲ್ಲಾ’ ಅಂತ ಕೇಳ್ತೀನಿ. ಕೆಲವರು ನೀವು ಎಷ್ಟು ಸಿಂಪಲ್‌ ಆಗಿರಿ¤àರಾ? ಅಂತ ಆಶ್ಚರ್ಯ ಪಡ್ತಾರೆ.

ಒಟ್ಟಿಗೇ 6 ಪ್ಲೇಟ್‌ ಗೋಲ್ಗಪ್ಪಾ ಸ್ವಾಹಾ!
ನಾವೆಲ್ಲಾ ಸ್ನೇಹಿತರು ಸೇರಿದರೆ ಕಡ್ಡಾಯವಾಗಿ ಗೋಲ್ಗಪ್ಪಾ ತಿನ್ನುತ್ತೇವೆ. ಅದೂ ಹೇಗೆ ಗೊತ್ತಾ? ಬೆಟ್ಸ್‌ ಕಟ್ಟಿಕೊಂಡು ತಿಂತೇವೆ. ನಾನು ಪಿಯುಸಿಯಲ್ಲಿ ಇರುವಾಗ 1 ಪ್ಲೇಟ್‌ಗೆ 8 ಪುರಿ ಕೊಡ್ತಾ ಇದ್ರು. ಬಹುತೇಕ ಬಾರಿ ಕಾಂಪಿಟೇಷನ್‌ನಲ್ಲಿ ನಾನೇ ವಿನ್‌ ಅಗುತ್ತಿದ್ದೆ. ನನ್ನ ಫ್ರೆಂಡ್ಸ್‌ 2 ಪ್ಲೇಟ್‌ ತಿನ್ನುವಾಗಲೇ ಸುಸ್ತಾಗುತ್ತಿದ್ದರು. ಒಬ್ಬ ಫ್ರೆಂಡ್‌ ಮಾತ್ರ ನನಗೆ ಸಖತ್‌ ಕಾಂಪಿಟೇಷನ್‌ ಕೊಡ್ತಿದ್ದ. ಅವನು 5 ಪ್ಲೇಟ್‌ ಗೋಲ್ಗಪ್ಪಾ ತಿಂದರೆ ನಾನು 6 ಪ್ಲೇಟ್‌ ತಿನ್ನುತ್ತಿದ್ದೆ. ಈಗಲೂ ಗೋಲ್ಗಪ್ಪಾ ಕಾಂಪಿಟೇಷನ್‌ ನಡೆಸಿದರೆ ನಾನೇ ವಿನ್‌ ಆಗುವುದು. 

ಪಾತ್ರಗಳ ಜೊತೆ ನಾನೂ ಬೆಳೆದಿದ್ದೇನೆ…
ನಾನು ನಟನಾ ಕ್ಷೇತ್ರಕ್ಕೆ ಬಂದಿದ್ದೇ ಆಕಸ್ಮಿಕ. ಲಕುಮಿಯಲ್ಲಿ ನನ್ನ ಅಕ್ಕ ನಟಿಸಬೇಕಿತ್ತು. ಆದರೆ, 2ನೇ ಪಿಯುಸಿಯಲ್ಲಿ ಇದ್ದುದ್ದರಿಂದ ಆಕೆ ನಿರಾಕರಿಸಿದಳು. ಅವಳು ನಿರ್ದೇಶಕರನ್ನು ಭೇಟಿಯಾಗಲು ಹೋದಾಗ ಜೊತೆಯಲ್ಲಿ ನಾನೂ ಹೋಗಿದ್ದೆ. ಆಗ ನಿರ್ದೇಶಕರು ನನಗೇ ಆ ಪಾತ್ರ ಮಾಡಲು ಹೇಳಿದರು. ಆಗ ನಾನು 7ನೇ ತರಗತಿ ಮುಗಿಸಿದ್ದೆ. ಧಾರಾವಾಹಿಯಲ್ಲಿ ಲಕುಮಿ ಹೈಸ್ಕೂಲ್‌ ಮುಗಿಸಿದಾಗ ನಾನೂ ನನ್ನ ಹೈಸ್ಕೂಲ್‌ ಮುಗಿಸಿದ್ದೆ. “ಕನಕಾ’ಕ್ಕೆ ಬಣ್ಣ ಹಚ್ಚಿದಾಗ ನಾನು ಪಿಯುಸಿ ಹುಡುಗಿ. ಪಾತ್ರಗಳು ಬೆಳೆದಂತೆ ನಾನೂ ಬೆಳೆದಿದ್ದೇನೆ. 

ಚೇತನ ಜೆ.ಕೆ.

Advertisement

Udayavani is now on Telegram. Click here to join our channel and stay updated with the latest news.

Next