ವಿನೋದ್ ಪ್ರಭಾಕರ್ ಅಭಿನಯದಲ್ಲಿ ಓಂಪ್ರಕಾಶ್ ರಾವ್ ಒಂದು ಚಿತ್ರ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಹಳೆಯದೇ. ಆದರೆ, ಆ ಚಿತ್ರದ ಹೆಸರೇನೆಂದು ವಿನೋದ್ ಆಗಲೀ, ಓಂಪ್ರಕಾಶ್ ರಾವ್ ಆಗಲೀ ಬಾಯಿಬಿಟ್ಟಿರಲಿಲ್ಲ. ಈಗ ಆ ಚಿತ್ರಕ್ಕೆ ಕೊನೆಗೂ ಹೆಸರು ಫೈನಲ್ ಆಗಿದೆ. ಚಿತ್ರಕ್ಕೆ “ವೇದ-ವ್ಯಾಸ’ ಎಂದು ಹೆಸರಿಡಲಾಗಿದ್ದು, ಚೆನ್ನೈನಲ್ಲಿ ಸದ್ದಿಲ್ಲದೆ ಚಿತ್ರದ ಫೋಟೋಶೂಟ್ ಸಹ ಆಗಿದೆ. ಚೆನ್ನೈನ ಎ.ವಿ.ಎಂ ಸ್ಟುಡಿಯೋದಲ್ಲಿ ಚಿತ್ರಕ್ಕೆ ವಿಶೇಷವಾದ ಫೋಟೋ ಶೂಟ್ ಮಾಡಲಾಗಿದೆ.
ವಿಶೇಷವೆಂದರೆ, ಈ ಚಿತ್ರದಲ್ಲಿ “ಮದರಂಗಿ ಕೃಷ್ಣ’ ಸಹ ಕಾಣಿಸಿಕೊಳ್ಳುತ್ತಿರುವುದು. ಹಾಗಾಗಿ ಇದು ಪುರಾಣದ ವೇದವ್ಯಾಸ ಅಲ್ಲ, “ವೇದ-ವ್ಯಾಸ’ ಎಂಬ ಇಬ್ಬರ ಸುತ್ತ ಈ ಚಿತ್ರ ಸುತ್ತುತ್ತದೆ. ವಿನೋದ್ ಮತ್ತು ಕೃಷ್ಣ ಇಬ್ಬರಲ್ಲಿ ವೇದ ಯಾರು, ವ್ಯಾಸ ಯಾರು ಎಂಬುದನ್ನು ಇನ್ನೂ ಚಿತ್ರತಂಡ ಬಹಿರಂಗಪಡಿಸಿಲ್ಲ. ಒಟ್ಟಿನಲ್ಲಿ ಚಿತ್ರದಲ್ಲಿ ಇಬ್ಬರೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮಂಡ್ಯದಲ್ಲಿ 1973-74ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಕಥೆ ರಚಿಸಲಾಗಿದೆ.
ಈ ಚಿತ್ರವನ್ನು ರೇಣುಕಾ ಮೂವಿ ಮೇಕರ್ ಬ್ಯಾನರ್‌ನಡಿ ಎ.ಎಂ. ಉಮೇಶ್ ರೆಡ್ಡಿ ನಿರ್ಮಿಸುತ್ತಿದ್ದಾರೆ. “ವೇದ-ವ್ಯಾಸ’ ಚಿತ್ರದ ಚಿತ್ರೀಕರಣ ಡಿಸೆಂಬರ್ ಮೂರರಿಂದ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಇದೇ 20ರಂದು ಹಂಸಲೇಖ ಅವರ ಸ್ಟುಡಿಯೋದಲ್ಲಿ ಚಿತ್ರದ ಹಾಡುಗಳ ಧ್ವನಿಮುದ್ರಣ ಪ್ರಾರಂಭವಾಗಲಿದೆ. ಸಂಗೀತ ಸಂಯೋಜನೆಯ ಜೊತೆಗೆ ಹಂಸಲೇಖ ಅವರು ಚಿತ್ರಕ್ಕೆ ಸಾಹಿತ್ಯವನ್ನೂ ರಚಿಸಿದ್ದಾರೆ.
ಈ ಚಿತ್ರಕ್ಕೆ ಓಂಪ್ರಕಾಶ್ ರಾವ್ ಅವರ ಪತ್ನಿ ಡೆನ್ನಿಸಾ ಪ್ರಕಾಶ್ ಕಥೆ ಬರೆದಿದ್ದು, ಓಂಪ್ರಕಾಶ್ ರಾವ್ ಚಿತ್ರಕಥೆ ಬರೆದು, ನಿರ್ದೇಶಿಸುತ್ತಿದ್ದಾರೆ. ಇನ್ನು ಎಂ.ಎಸ್. ರಮೇಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರದಲ್ಲಿ ವಿನೋದ್ ಪ್ರಭಾಕರ್ ಮತ್ತು “ಮದರಂಗಿ’ ಕೃಷ್ಣ ಜೊತೆಗೆ ಅಭಿಮನ್ಯು ಸಿಂಗ್, ಶ್ರೀನಿವಾಸಮೂರ್ತಿ, ಅವಿನಾಶ್, ರಂಗಾಯಣ್ ರಘು, ಶೋಭರಾಜ್, ಚಿತ್ರಾ ಶೆಣೈ, ಸುಧಾ ಬೆಳವಾಡಿ ನಟಿಸುತ್ತಿದ್ದು, ನಾಯಕಿಯ ಹುಡುಕಾಟ ನಡೆಯುತ್ತಿದೆ.