ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆಯ ಮುನ್ನೋಟ ಎಂದೇ ಪರಿಗಣಿಸಲಾಗಿರುವ ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶ ಡಿ. 18 ರಂದು ಪ್ರಕಟವಾಗಲಿದೆ. ಪ್ರಧಾನಿ ಮೋದಿ ಮೋಡಿಯಿಂದ ಗೆಲುವಿನ ಜಯಭೇರಿಯ ನಿರೀಕ್ಷೆಯಲ್ಲಿ ಆಡಳಿತಾರೂಢ ಬಿಜೆಪಿ ಇದ್ದರೆ, ಈಗಷ್ಟೇ ಪಕ್ಷ ಮುನ್ನಡೆಸುವ ಜವಾಬ್ದಾರಿ ಹೊತ್ತ ರಾಹುಲ್ ಸಾರಥ್ಯದ ಕಾಂಗ್ರೆಸ್ ಕೂಡ ಗೆಲುವಿನ ಕನಸು ಕಾಣುತ್ತಿದೆ.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ ವಾಗಲಿದ್ದು, 3 ಗಂಟೆ ಸುಮಾರಿಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ತವರು ನೆಲವಾದ್ದರಿಂದ ಈ ಚುನಾವಣೆಗೆ ಇನ್ನಿಲ್ಲದ ಮಹತ್ವ ಸಿಕ್ಕಿದ್ದು, ಮೋದಿ ಸರಕಾರ ಕೈಗೊಂಡ ಎಲ್ಲ ಸುಧಾರಣ ಕ್ರಮಗಳನ್ನು ಜನರು ಮೆಚ್ಚಿಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ತಿಳಿಯಲಿದೆ. ಈಗಾಗಲೇ ಪ್ರಕಟವಾಗಿರುವ ಚುನಾವಣ ಪೂರ್ವ ಸಮೀಕ್ಷೆಗಳ ಫಲಿತಾಂಶಗಳ ಪ್ರಕಾರ ಬಿಜೆಪಿ ಉತ್ತಮ ಬಹುಮತದಿಂದ ಗೆದ್ದು ಬರಲಿದೆ. ಶನಿವಾರವಷ್ಟೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಪದವಿಗೇರಿದ ರಾಹುಲ್ ಗಾಂಧಿಗೆ ಹಾಗೂ ಇಡೀ ಪಕ್ಷದ ಪುನಶ್ಚೇತನಕ್ಕೆ ಈ ಫಲಿತಾಂಶ ಅತ್ಯಂತ ಮಹತ್ವದ್ದಾಗಿರಲಿದೆ.
ಎರಡು ಹಂತಗಳಲ್ಲಿ (ಡಿ. 9 ಮತ್ತು ಡಿ.14) ನಡೆದ ಚುನಾವಣೆ ಯಲ್ಲಿ ಸರಾಸರಿ ಶೇ. 68.41ರಷ್ಟು ಮತದಾನವಾಗಿದ್ದು, 2012ಕ್ಕಿಂತ ಶೇ. 2.91ರಷ್ಟು ಕಡಿಮೆ ಮತದಾನವಾಗಿದೆ.
ವೈಫೈಗೆ ನಿಷೇಧ: ನಾಲ್ಕು ವಿಧಾನಸಭೆ ಕ್ಷೇತ್ರಗಳ ಒಟ್ಟು ಆರು ಬೂತ್‌ಗಳಲ್ಲಿ ರವಿವಾರ ಮರುಮತದಾನ ನಡೆದಿದೆ. ಅಲ್ಲದೆ ಇವಿಎಂಗಳನ್ನು ಇಟ್ಟ ಕಾಲೇಜಿನಲ್ಲಿ ವೈಫೈ ಮೂಲಕ ಹ್ಯಾಕ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಆರೋಪಿಸಿದ ಹಿನ್ನೆಲೆಯಲ್ಲಿ ಸೂರತ್‌ನ ಅಮ್ರೇಜ್‌ನಲ್ಲಿ ವೈಫೈಗಳನ್ನು ನಿಷೇಧಿಸಲಾಗಿದೆ.
ಹಿಮಾಚಲದ ಭವಿಷ್ಯವೂ ನಿರ್ಧಾರ: ಗುಜರಾತ್ ಚುನಾವಣೆ ಗಿಂತಲೂ ಮೊದಲೇ ನಡೆದ ಹಿಮಾಚಲ ಪ್ರದೇಶ ಮತದಾನದ ಫಲಿತಾಂಶವೂ ಸೋಮವಾರವೇ ಪ್ರಕಟವಾಗಲಿದೆ. ಇಲ್ಲಿ ಶೇ. 75.28ರಷ್ಟು ಮತದಾನವಾಗಿದ್ದು, 42 ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಕಾಂಗ್ರೆಸ್ ಸಿಎಂ ವೀರಭದ್ರ ಸಿಂಗ್ ಹಾಗೂ ಬಿಜೆಪಿಗೆ ಇದು ಮಹತ್ವದ ಚುನಾವಣೆಯಾಗಿರಲಿದೆ. ಹಿಮಾಚಲ ಚುನಾವಣಪೂರ್ವ ಸಮೀಕ್ಷೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದೇ ಹೇಳಲಾಗಿದೆ.