Advertisement

ಗೋವಾದಲ್ಲಿ ಗೆಲುವು ಯಾರಿಗೆ?

03:02 AM Apr 15, 2019 | Team Udayavani |

ಗೋವಾ ರಾಜಕೀಯದಲ್ಲಿ ಕಳೆದೊಂದು ತಿಂಗಳಲ್ಲಿ ಅನೇಕ ಪಲ್ಲಟಗಳು ಸಂಭವಿಸಿಬಿಟ್ಟಿವೆ. ಮನೋಹರ್‌ ಪರಿಕ್ಕರ್‌ ಅವರ ನಿಧನವು ಇದರಲ್ಲಿ ಪ್ರಮುಖವಾದದ್ದು. ಪರಿಕ್ಕರ್‌ ನಿಧನ ನಂತರ ಗೋವಾ ಬಿಜೆಪಿಯ ಕಥೆಯೇನಾಗಲಿದೆ, ಅವರ ಅಭಾವ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಹುದೇ ಎನ್ನುವ ಪ್ರಶ್ನೆಯೂ ಇದೆ. ದೇಶದ ಅತಿ ಚಿಕ್ಕ ರಾಜ್ಯವಾಗಿರುವ ಗೋವಾದಲ್ಲಿ ಕೇವಲ 2 ಲೋಕಸಭಾ ಸ್ಥಾನಗಳಿವೆ. 2 ಸ್ಥಾನಗಳಿದ್ದರೂ ಪೈಪೋಟಿಯೇನೂ ಕಡಿಮೆಯಿಲ್ಲ. 2014ರ ಚುನಾವಣೆಯಲ್ಲಿ ಬಿಜೆಪಿಯೇ ಎರಡೂ ಸ್ಥಾನಗಳಲ್ಲಿ ಗೆದ್ದಿತ್ತು. ಒಟ್ಟು 14.58 ಲಕ್ಷ ಜನಸಂಖ್ಯೆ ಇರುವ ಗೋವಾ ರಾಜ್ಯವು ಉತ್ತರ ಗೋವಾ ಮತ್ತು ದಕ್ಷಿಣ ಗೋವಾ ಎಂಬ ಎರಡು ಜಿಲ್ಲೆಗಳಾಗಿ ವಿಗಂಡಣೆಯಾಗಿದೆ. ಪ್ರಸಕ್ತ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಕದನವಿರುವುದು ಈ ಎರಡು ಭಾಗಗಳಲ್ಲೇ.

Advertisement

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಲೆಯಿತ್ತಾದರೂ, 2017ರ ವಿಧಾನ ಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಹೆಚ್ಚಿನ ಸೀಟುಗಳನ್ನು ಪಡೆಯಲು ಯಶಸ್ವಿಯಾಗಿ ಬಿಟ್ಟಿತ್ತು. ಆದರೆ ಬಿಜೆಪಿಯು ಗೋವಾದ ಪ್ರಾದೇಶಿಕ ಪಕ್ಷಗಳಾದ ಮಹಾರಾಷ್ಟ್ರವಾದಿ ಗೋಮಂತಕ್‌ ಪಾರ್ಟಿ(ಎಂಜಿಪಿ), ಗೋವಾ ಫಾರ್ವರ್ಡ್‌ ಪಾರ್ಟಿ(ಜಿಎಫ್ಪಿ) ಜತೆ ಸೇರಿ ಸರ್ಕಾರ ರಚಿಸಲು ಸಫ‌ಲವಾಗಿಬಿಟ್ಟಿತು.ಕಾಂಗ್ರೆಸ್‌ಗೆ ಅಂದು ಸರ್ಕಾರ ರಚಿಸಲು ಸಾಧ್ಯ ವಾಗಲಿಲ್ಲವಾದರೂ, ಲೋಕಸಭಾ ಚುನಾವಣೆಯಲ್ಲಿ ಬಂಪರ್‌ ಪಡೆಯುತ್ತೇವೆ ಎನ್ನುವ ಭರವಸೆಯನ್ನು ಅಂದಿನ ಅದರ ಪ್ರದರ್ಶನ ಬಲವಾಗಿ ಮೂಡಿಸಿತ್ತು. ಇದೇ ಕಾರಣಕ್ಕಾ ಗಿಯೇ, ಈ ಬಾರಿ ಬಿಜೆಪಿಗಿಂತ ಕಾಂಗ್ರೆಸ್‌ ಅತ್ಯುತ್ಸಾಹದಲ್ಲಿರುವುದು ಗೋಚರಿಸುತ್ತಿದೆ. ಈಗ ಎಂಜಿಪಿಯೂ ಸರ್ಕಾರದ ಸಂಗ ತೊರೆದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ನಿಲ್ಲುವ ಬೆದರಿಕೆಯೊಡ್ಡುತ್ತಿರು ವುದರಿಂದ ಬಿಜೆಪಿ ತುಸು ಕಳವಳಗೊಂಡಿರು ವುದಂತೂ ಸತ್ಯ. ಮೇಲ್ನೋಟಕ್ಕೆ ಲೋಕಸಭಾ ಕದನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಷ್ಟೇ ಕಾಣಿಸುತ್ತಿವೆಯಾದರೂ, ಈ ರಾಜ್ಯದಲ್ಲಿ ಈ ಬಾರಿ ಆಪ್‌ ಮತ್ತು ಶಿವಸೇನೆಯೂ ಎರಡೂ ಸೀಟುಗಳ ಮೇಲೆ ದೃಷ್ಟಿ ನೆಟ್ಟು ಕುಳಿತಿವೆ. ಅವುಗಳು ಲೆಕ್ಕಕ್ಕೇ ಇಲ್ಲ ಎಂದು ಚುನಾವಣಾ ಪರಿಣತರು ಹೇಳುತ್ತಾರಾದರೂ, ಅವರ ಲೆಕ್ಕಾಚಾರ ಉಲ್ಟಾ ಆದರೂ ಅಚ್ಚರಿಯಿಲ್ಲ. ಹಿಂದೂಗಳ ಬಾಹುಳ್ಯವಿರುವ ಗೋವಾದಲ್ಲಿ, ಕ್ರಿಶ್ಚಿಯನ್‌ ಸಮುದಾಯವೂ ಕೂಡ ಚುನಾ ವಣಾ ಹಣೆಬರಹವನ್ನು ಬರೆಯುವಂಥ ಶಕ್ತಿ ಹೊಂದಿದೆ.

1)ಗೋವಾ ಉತ್ತರ
ಒಟ್ಟು ಮತದಾರರು- 5.15 ಲಕ್ಷ
ಮೀಸಲು ಕ್ಷೇತ್ರವೇ?: ಅಲ್ಲ
2008ರವರೆಗೂ ಇದನ್ನು ಪಣಜಿ ಲೋಕಸಭಾ ಕ್ಷೇತ್ರವೆಂದು ಕರೆಯಲಾಗುತ್ತಿತ್ತು.
ಈ ಕ್ಷೇತ್ರವು 1999ರಿಂದ ಬಿಜೆಪಿಯ ಕೇಂದ್ರ ಸ್ಥಾನವಾಗಿದ್ದು, ಕೇಂದ್ರ ಸಚಿವರೂ ಆಗಿರುವ ಶ್ರೀಪಾದ್‌ ನಾಯಕ್‌ ಇದರ ಸಂಸದರಾಗಿದ್ದಾರೆ. ಈ ಕ್ಷೇತ್ರದಲ್ಲಿ ಹಿಂದೂ ಮತದಾರರ ಸಂಖ್ಯೆ 76 ಪ್ರತಿಶತವಿದ್ದು, ಕ್ರಿಶ್ಚಿಯನ್ನರ ಸಂಖ್ಯೆ 16.4 ಪ್ರತಿಶತದಷ್ಟಿದೆ.

2) ಗೋವಾ ದಕ್ಷಿಣ
ಒಟ್ಟು ಮತದಾರರು- 5. 45 ಲಕ್ಷ
ಮೀಸಲು ಕ್ಷೇತ್ರವೇ?: ಅಲ್ಲ
2008ರವರೆಗೂ ಈ ಕ್ಷೇತ್ರವನ್ನು ಮರ್ಮಗೋವಾ ಲೋಕಸಭಾ ಕ್ಷೇತ್ರವೆಂದು ಕರೆಯಲಾಗುತ್ತಿತ್ತು.
ಈ ಕ್ಷೇತ್ರವು 1999ರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ನ ನಡುವೆ ಬದಲಾಗುತ್ತಾ ಬಂದಿದೆ. 1999ರಲ್ಲಿ ಬಿಜೆಪಿಯ ರಮಾಕಾಂತ್‌ ಸೋಯು ಕಾಂಗ್ರೆಸ್‌ ಎದುರಾಳಿಯನ್ನು ಬ್ರಾಜ್‌ರನ್ನು ಸೋಲಿಸಿ ಸಂಸದರಾದರು, 2004ರಲ್ಲಿ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬ್ರಾಜ್‌, ಸೋಯು ಅವರನ್ನು ಸೋಲಿಸಿದರು. 2009ರಲ್ಲಿ ಕಾಂಗ್ರೆಸ್‌ನ ಫ್ರಾನ್ಸಿಸ್ಕೋ ಸಾರ್ಡಾನಾ ಅವರು ಬಿಜೆಪಿ ನಾಯಕ ನರೇಂದ್ರ ಕೇಶವ ಸವಾಯ್ಕರ್‌ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಆದರೆ 2014ರಲ್ಲಿ ಸವಾಯ್ಕರ್‌ ಕಾಂಗ್ರೆಸ್‌ ಅನ್ನು ಸೋಲಿಸಿ ಸಂಸದರಾದರು.

Advertisement

Udayavani is now on Telegram. Click here to join our channel and stay updated with the latest news.

Next