Advertisement

ಯಾರಿಗೆ ಜಯಭೇರಿ.. ಇನ್ಯಾರಿಗೆ ಮನೆ ದಾರಿ..?

01:16 PM May 15, 2018 | |

ರಾಯಚೂರು: ಕದನ ಕುತೂಹಲ ಕೆರಳಿಸಿದ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಯಾರಿಗೆ ಹೂವಿನ ಗದ್ದುಗೆ, ಇನ್ಯಾರಿಗೆ ಮುಳ್ಳಿನ ಹಾಸಿಗೆ ಎಂಬ ಲೆಕ್ಕಾಚಾರ ಮನೆ ಮಾಡಿದೆ.

Advertisement

ನಗರದ ಇನ್‌ಫೆಂಟ್‌ ಜೀಸಸ್‌ ಶಾಲೆಯಲ್ಲಿ ಮೇ 15ರ ಬೆಳಗ್ಗೆ 8.00ರಿಂದ ಮತ ಎಣಿಕೆ ಶುರುವಾಗುವ ಮೂಲಕ ಜಿಲ್ಲೆಯ ಏಳು ಕ್ಷೇತ್ರಗಳ 79 ಅಭ್ಯರ್ಥಿಗಳ ಭವಿಷ್ಯ ಅನಾವರಣಗೊಳ್ಳಲಿದೆ. 11 ಸ್ಟ್ರಾಂಗ್‌ ರೂಂಗಳಿದ್ದು, 9 ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಗೆ 50ರಂತೆ 450 ಮತ್ತು 50 ಹೆಚ್ಚುವರಿ ಸಿಬ್ಬಂದಿ ಯೋಜನೆಗೊಂಡಿದ್ದಾರೆ. ಎಲ್ಲ ಏಳು ಕ್ಷೇತ್ರಗಳ ಮತ ಎಣಿಕೆ ಕಾರ್ಯವನ್ನು ನಗರದಲ್ಲಿಯೇ ಮಾಡುತ್ತಿರುವುದು ವಿಶೇಷ.
 
ಈಗಾಗಲೇ ಕೆಲ ಅಭ್ಯರ್ಥಿಗಳು ಗೆಲುವಿನ ಗುಂಗಿನಲ್ಲಿದ್ದರೆ, ಇನ್ನೂ ಕೆಲವರು ಗೆಲ್ಲುತ್ತೇವಾ ಎಂಬ ಆತಂಕದಲ್ಲಿದ್ದಾರೆ. ಆದರೆ, ಮತದಾರ ಯಾರ ಕೈ ಹಿಡಿಯುವನೋ ಎಂಬ ಕುತೂಹಲವಂತೂ ಇದ್ದೇ ಇದೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ನಿಂದ ಎಲ್ಲೆಡೆ ಅಭ್ಯರ್ಥಿಗಳು ಕಣಕ್ಕಿಳಿದರೆ, ಪಕ್ಷೇತರರಾಗಿ ಸಾಕಷ್ಟು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.  ಜಿಲ್ಲೆಯ ಎಲ್ಲ ಹಾಲಿ ಶಾಸಕರು ಕಣದಲ್ಲಿದ್ದಾರೆ. ಜೆಡಿಎಸ್‌ ಇಬ್ಬರು ಬಿಜೆಪಿಯಿಂದ ಸ್ಪರ್ಧಿಸಿದರೆ, ಕಾಂಗ್ರೆಸ್‌ ಮಾತ್ರ ಹಾಲಿ ಶಾಸಕರು ಮತ್ತು ಕಳೆದ ಬಾರಿ ಪರಾಜಿತಗೊಂಡವರಿಗೆ ಟಿಕೆಟ್‌ ನೀಡಿತ್ತು. ಗ್ರಾಮೀಣ ಕ್ಷೇತ್ರವೊಂದಕ್ಕೆ ಹೊಸಬರಿಗೆ ಅವಕಾಶ ನೀಡಿದೆ. ಜೆಡಿಎಸ್‌ ಮಾತ್ರ ಗೆಲ್ಲುವ ಕುದುರೆಗಳಿಗೆ ಮಣೆ ಹಾಕಿದ್ದು, ಅದರಲ್ಲಿ ವಲಸಿಗರೇ ಹೆಚ್ಚು. 

ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿ ಮೂವರು: ಈ ಬಾರಿ ಮೂರು ಅಭ್ಯರ್ಥಿಗಳು ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮಾನ್ವಿ ಕಾಂಗ್ರೆಸ್‌ ಅಭ್ಯರ್ಥಿ ಹಂಪಯ್ಯ ನಾಯಕ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 

ಲಿಂಗಸುಗೂರು ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್‌ ಕಳೆದೆರಡು ಅವಧಿಗೆ ಶಾಸಕರಾಗಿದ್ದರು. ಇನ್ನೂ ಮಸ್ಕಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಕೂಡ ಎರಡು ಅವಗೆ ಶಾಸಕರಾಗಿ ಆಯ್ಕೆಯಾಗಿದ್ದು ಹ್ಯಾಟ್ರಿಕ್‌
ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ಮೂವರಲ್ಲಿ ಯಾರಿಗೆ ಮೂರನೇ ಬಾರಿಗೆ ಅವಕಾಶ ಸಿಗಬಹುದೋ ಎಂದು ಕಾದು ನೋಡಬೇಕು. 

ಕುಟುಂಬ ಕದನ: ದೇವದುರ್ಗ ಕ್ಷೇತ್ರದಲ್ಲಿ ಕುಟುಂಬ ಕದನ ಏರ್ಪಟ್ಟಿದೆ. ಕುಟುಂಬ ರಾಜಕಾರಣಕ್ಕೆ ಹೆಸರಾದ ಈ ಕ್ಷೇತ್ರದಲ್ಲಿ ಈ ಬಾರಿ ಮೂರು ಪಕ್ಷಗಳು ಒಂದೇ ಕುಟುಂಬದವರಿಗೆ ಮಣೆ ಹಾಕಿವೆ. ಪಕ್ಷೇತರ ಅಭ್ಯರ್ಥಿ ಕೆ. ಕರೆಮ್ಮ ಮೂವರು ನಾಯಕರಿಗೆ ಪ್ರಬಲ ಪೈಪೋಟಿ ನೀಡಿದ್ದು, ಮತ ವಿಭಜನೆಗೆ ಮಹತ್ವದ ಪಾತ್ರ ವಹಿಸಿದ್ದಾರೆ. ಮೇಲ್ನೋಟಕ್ಕೆ ಕಾಂಗ್ರೆಸ್‌ನ ರಾಜಶೇಖರ್‌ ನಾಯಕ, ಬಿಜೆಪಿ ಕೆ.ಶಿವನಗೌಡ ನಾಯಕರ ಮಧ್ಯೆ ನೇರ ಹಣಾಹಣಿ
ಏರ್ಪಟ್ಟಿದೆ. ಆದರೆ, ಜೆಡಿಎಸ್‌ನ ವೆಂಕಟೇಶ ಪೂಜಾರಿ ಹಾಗೂ ಪಕ್ಷೇತರ ಅಭ್ಯರ್ಥಿ ಕರೆಮ್ಮ ಪಡೆಯುವ ಮತಗಳ ಆಧರಿಸಿ ಗೆಲುವು ನಿರ್ಧರಿತವಾಗಲಿದೆ.

Advertisement

ಬಂಡಾಯಗಾರರ ಸವಾಲ್‌: ಇನ್ನೂ ನಗರ ಕ್ಷೇತ್ರ ಮತ್ತು ಮಾನ್ವಿಯಲ್ಲಿ ಬಂಡಾಯ ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕಿಳಿಯುವ ಮೂಲಕ ಪ್ರಬಲ ಪೈಪೋಟಿ ನೀಡಿದ್ದು, ಗೆಲುವಿನ ಲೆಕ್ಕಾಚಾರ ತಲೆ ಕೆಳಗಾಗಿದೆ. ನಗರದ ಬಿಜೆಪಿ ಬಂಡಾಯ ಅಭ್ಯರ್ಥಿ ಈ.ಆಂಜನೇಯ ಅಬ್ಬರದ ಪ್ರಚಾರ ನಡೆಸುವ ಮೂಲಕ ಇತರೆ ಪಕ್ಷಗಳ ಅಭ್ಯರ್ಥಿಗಳ ನಿದ್ದೆಗೆಡಿಸಿದ್ದಾರೆ. ಬಿಜೆಪಿ ಭಿನ್ನಮತ ಆಂಜನೇಯ ಅವರಿಗೆ ವರವಾಗುವ ಸಾಧ್ಯತೆ ಸೃಷ್ಟಿಸಿದೆ. ಕಾಂಗ್ರೆಸ್‌ನ ಬಣ
ರಾಜಕೀಯ ಯಾರ ಗೆಲುವಿಗೆ ಶ್ರಮಿಸಲಿದೆ ಎಂಬ ಕುತೂಹಲ ಮೂಡಿದೆ. ಮಾನ್ವಿಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಡಾ| ತನುಶ್ರೀ ಪಕ್ಷೇತರರಾಗಿ ಸ್ಪರ್ಧಿಸಿದ್ದು, ಪ್ರಬಲ ಪೈಪೋಟಿ ನೀಡುವ ಮೂಲಕ ಕಾಂಗ್ರೆಸ್‌ ಗೆಲುವಿಗೆ ಅಡ್ಡಗಾಲಾಗಿದ್ದರು.

ಮಾಡು ಇಲ್ಲವೇ ಮಡಿ: ಪಕ್ಷದ ವರ್ಚಸ್ಸಿಗಿಂತ ಜಿಲ್ಲೆಯಲ್ಲಿ ವೈಯಕ್ತಿಕ ವರ್ಚಸ್ಸು ಕೆಲಸ ಮಾಡುತ್ತಿರುವುದು ಗಮನಾರ್ಹ. ಪಕ್ಷಾಂತರ ಮಾಡುವ ಮೂಲಕ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ ಇಬ್ಬರು ಶಾಸಕ ಪಕ್ಷಕ್ಕಿಂತ ಸ್ವಂತ ಬಲ ನೆಚ್ಚಿಕೊಂಡು ಅಖಾಡಕ್ಕಿಳಿದಿದ್ದಾರೆ. ಅಲ್ಲಿ ಮಾತ್ರವಲ್ಲದೇ, ಗ್ರಾಮೀಣ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ರವಿ ಪಾಟೀಲ, ಲಿಂಗಸೂಗುರು ಕ್ಷೇತ್ರ ಸಿದ್ಧು ಬಂಡಿ, ಪಕ್ಷೇತರ ಅಭ್ಯರ್ಥಿ ಈ.ಆಂಜನೇಯ ಸೇರಿ ಎಲ್ಲರೂ ಸ್ವಂತ ಬಲದಿಂದ ಸ್ಪರ್ಧೆಗಿಳಿದಿದ್ದು, ಮಾಡು ಇಲ್ಲವೇ ಮಡಿ ಎನ್ನುವಂತೆ ಸ್ಪರ್ಧೆಗಿಳಿದಿದ್ದಾರೆ.

ಒಟ್ಟಾರೆ ಫಲಿತಾಂಶದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಯಾರಿಗೆ ಮತದಾರ ಗೆಲುವಿನ ಮಾಲೆ ಹಾಕುವನೋ, ಯಾರಿಗೆ ಸೋಲಿನ ರುಚಿ ಉಣಿಸುವನೋ ಇಂದು ಇತ್ಯರ್ಥಗೊಳ್ಳಲಿದೆ

Advertisement

Udayavani is now on Telegram. Click here to join our channel and stay updated with the latest news.

Next