ಮುಂಬಯಿ: ಸೋದರ ಸಂಬಂಧಿ ಅಜಿತ್ ಪವಾರ್ ಮತ್ತು ತಂಡವು ಶಿವಸೇನೆ-ಬಿಜೆಪಿ ಸರಕಾರವನ್ನು ಸೇರ್ಪಡೆಯಾದ ಕಾರಣ ಪಕ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಎದುರಿಸುವ ನಿಟ್ಟಿನಲ್ಲಿ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಕಾರ್ಯಪ್ರವೃತ್ತರಾಗಿದ್ದಾರೆ. ಬಂಡಾಯವೆದ್ದಿರುವ ಶಾಸಕರ ವಿರುದ್ಧ ಕಾನೂನು ಸಮರಕ್ಕೆ ಸಿದ್ಧರಾಗಿರುವ ಅವರು, ಮಂಗಳವಾರ ತಜ್ಞರಿಂದ ಕಾನೂನು ಸಲಹೆ ಪಡೆದುಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದೇ ವೇಳೆ ಬುಧವಾರ ಮಧ್ಯಾಹ್ನ 1 ಗಂಟೆಗೆ ಶರದ್ ಪವಾರ್ ಅವರು ಶಾಸಕರ ಸಭೆಯನ್ನು ಕರೆದಿದ್ದಾರೆ. ಈ ಸಭೆಗೆ ಎಷ್ಟು ಮಂದಿ ಆಗಮಿಸುತ್ತಾರೆ ಎನ್ನುವುದರ ಮೇಲೆ “ಪವಾರ್’ದ್ವಯರ ಭವಿಷ್ಯ ಅವಲಂಬಿ ಸಿದೆ. ಈಗಾಗಲೇ ಅಜಿತ್ ಪವಾರ್ ಬಣವು ತಮಗೆ 40ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದೆ. ಆದರೆ ಶಿಂಧೆ ಸರಕಾರವನ್ನು ಸೇರಿರುವುದು 9 ಶಾಸಕರು ಮಾತ್ರ. ಅಲ್ಲದೇ ಮಂಗಳವಾರ ಮಾತನಾಡಿರುವ ಎನ್‌ಸಿಪಿ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೋ, ಅಜಿತ್ ಅವರಿಗೆ 13ಕ್ಕಿಂತ ಹೆಚ್ಚು ಶಾಸಕರ ಬೆಂಬಲವಿಲ್ಲ. ಹಾಗಾಗಿ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಸಿಎಂ ಏಕನಾಥ ಶಿಂಧೆ ಮತ್ತು ಶಿವಸೇನೆಯ ಇತರ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸುವಂತೆ ಮಹಾರಾಷ್ಟ್ರ ಅಸೆಂಬ್ಲಿ ಸ್ಪೀಕರ್‌ಗೆ ಸೂಚಿಸುವಂತೆ ಕೋರಿ ಶಿವಸೇನೆಯ ಉದ್ಧವ್ ಬಣ ಮಂಗಳವಾರ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಕಾಂಗ್ರೆಸ್ ಕಾದು ನೋಡುವ ತಂತ್ರ: ಎನ್‌ಸಿಪಿ ಬಿಕ್ಕಟ್ಟಿನ ಬಳಿಕ ಮಹಾರಾಷ್ಟ್ರ ವಿಧಾನಸಭೆ ವಿಪಕ್ಷ ನಾಯಕ ಸ್ಥಾನ ತನಗೇ ಸಿಗಬೇಕೆಂದು ಹೇಳುತ್ತಿದ್ದ ಕಾಂಗ್ರೆಸ್ ಮಂಗಳವಾರ ಈ ಕುರಿತು ಚರ್ಚಿಸಲೆಂದು ಶಾಸಕಾಂಗ ಪಕ್ಷದ ಸಭೆ ನಡೆಸಿತ್ತು. ಆದರೆ ವಿಪಕ್ಷ ನಾಯಕನ ಆಯ್ಕೆ ಕುರಿತು ನಿರ್ಧಾರ ಕೈಗೊಳ್ಳದೇ ಕಾದು ನೋಡುವ ತಂತ್ರದ ಮೊರೆಹೋಯಿತು. ಸಭೆಯ ಬಳಿಕ ಕಾಂಗ್ರೆಸ್ ನಾಯಕರು ಶರದ್ ಪವಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಹೋರಾಟದಲ್ಲಿ ನಾವೆಲ್ಲರೂ ನಿಮ್ಮ ಜತೆಗಿದ್ದೇವೆ ಎಂದು ಹೇಳುವ ಮೂಲಕ ಎಂವಿಎ(ಮಹಾ ವಿಕಾಸ ಅಘಾಡಿ) ಒಗ್ಗಟ್ಟಾಗಿದೆ ಎಂಬ ಸಂದೇಶ ಸಾರಿದರು.
ಪ್ರಧಾನಿ ಮೋದಿ ಅವರ ನಾಯಕತ್ವ ದಲ್ಲಿ ದೇಶ ಉತ್ತುಂಗಕ್ಕೇರುತ್ತಿದೆ. ಅವರಂಥ ಮತ್ತೂಬ್ಬ ನಾಯಕನಿಲ್ಲ. ಅವರಿಗೆ ಪರ್ಯಾಯವಾದ ನಾಯಕನೂ ಇಲ್ಲ. ಮೋದಿಯವರಿಗೆ ಬೆಂಬಲ ನೀಡಲೆಂದೇ ನಾವು ಮಹಾರಾಷ್ಟ್ರ ಸರಕಾರಕ್ಕೆ ಬೆಂಬಲ ನೀಡಿದ್ದೇವೆ.
ಅಜಿತ್ ಪವಾರ್, ಡಿಸಿಎಂ
ಕಳೆದ ವರ್ಷ ಎಂವಿಎ ಸರಕಾರ ಪತನಗೊಂಡಾಗಲೇ ಬಿಜೆಪಿ ಜತೆ ಕೈಜೋಡಿಸಲು ಎನ್‌ಸಿಪಿಯ 53ರ ಪೈಕಿ 51 ಶಾಸಕರು ಒಲವು ವ್ಯಕ್ತಪಡಿಸಿದ್ದರು. ಶಿವಸೇನೆಯ ಜತೆ ಎನ್‌ಸಿಪಿ ಕೈಜೋ ಡಿಸಬಹುದು ಎಂದಾದರೆ ಬಿಜೆಪಿ ಜತೆ ಯಾಕೆ ಕೈಜೋಡಿಸಬಾರದು?
ಪ್ರಫುಲ್ ಪಟೇಲ್, ಎನ್‌ಸಿಪಿ ನಾಯಕ