Advertisement

ನಿಜವಾದ ಶ್ರೀಮಂತರು ಯಾರು?

06:00 AM Dec 20, 2018 | |

ಶಿಕ್ಷಣ ಮುಗಿದ ಬಳಿಕ ಗುಣವಂತ ಮನೆಗೆ ಹಿಂತಿರುಗಿದ. ಅವನ ತಂದೆ ಧನವಂತನಿಗೆ ನಾವೆಷ್ಟು ಶ್ರೀಮಂತರೆಂಬುದನ್ನು ಮಗನಿಗೆ ತೋರಿಸಬೇಕೆಂಬ ಬಯಕೆಯಾಯಿತು. ಅವನನ್ನು ಕರೆದುಕೊಂಡು ಬಡವರು ವಾಸಿಸುತ್ತಿದ್ದ ಕೇರಿಗೆ ಹೋದ…

Advertisement

ಒಂದೂರಲ್ಲಿ ಒಬ್ಬ ಧನವಂತನಿದ್ದ. ಬಡವರಿಗೆ ಹಣವನ್ನು ಸಾಲವಾಗಿ ಕೊಟ್ಟು ಬಡ್ಡಿ ಪಡೆದು ಹೇರಳವಾಗಿ ಹಣ ಸಂಪಾದಿಸಿದ್ದ. ಅವನ ಭವ್ಯಮಹಲಿನಲ್ಲಿ ಚಿನ್ನದ ಕಂಬಗಳಿದ್ದವು. ಕಣ್ಣು ಕೋರೈಸುವ ರತ್ನಗಳಿಂದ ಮನೆಯೊಳಗೆ ಬೆಳಕು ತುಂಬುತ್ತಿತ್ತು. ಬೆಳ್ಳಿಯ ತಾಟಿನಲ್ಲಿ ಊಟ ಮಾಡುತ್ತಿದ್ದ. ಬಂಧುಗಳ ಮುಂದೆ ತನ್ನಲ್ಲಿರುವ ಸಂಪತ್ತನ್ನು ಪ್ರದರ್ಶಿಸುವ ಸಲುವಾಗಿ “ಇಷ್ಟು ಸಿರಿತನವಿರುವ ವ್ಯಕ್ತಿಯನ್ನು ಎಲ್ಲಾದರೂ ನೋಡಿದ್ದೀರಾ?’ ಎಂದು ಪ್ರಶ್ನಿಸುತ್ತಿದ್ದ.

ಧನವಂತನ ಮಗ ಗುಣವಂತ ದೂರದ ಶಾಲೆಯಲ್ಲಿ ವಿದ್ಯೆ ಕಲಿಯುತ್ತಿದ್ದ. ಅವನು ಅಪ್ಪನಂತಿರಲಿಲ್ಲ. ಶಾಲೆಯಲ್ಲಿ ಹೇಳಿ ಕೊಡುತ್ತಿದ್ದ ಪಾಠಗಳು ಅವನನ್ನು ಪ್ರಭಾವಿಸಿದ್ದವು. ಶಿಕ್ಷಣ ಮುಗಿದ ಬಳಿಕ ಗುಣವಂತ ಮನೆಗೆ ಹಿಂತಿರುಗಿದ. ಧನವಂತನಿಗೆ ನಾವೆಷ್ಟು ಶ್ರೀಮಂತರೆಂಬುದನ್ನು ಮಗನಿಗೆ ತೋರಿಸಬೇಕೆಂಬ ಬಯಕೆಯಾಯಿತು. ಅವನನ್ನು ಕರೆದುಕೊಂಡು ಬಡವರು ವಾಸಿಸುತ್ತಿದ್ದ ಕೇರಿಗೆ ಹೋದ. ಅಲ್ಲಿ ಮೂಲಭೂತ ಸೌಲಭ್ಯಗಳೇ ಇರಲಿಲ್ಲ. ಅವರೆಲ್ಲಾ ತಮ್ಮ ತಮ್ಮ ಕೆಲಸದಲ್ಲಿ ತಲ್ಲೀನರಾಗಿದ್ದರು. ಅವರ ಬಳಿ ಸಿರಿವಂತಿಕೆ ಇಲ್ಲದಿದ್ದರೂ, ದುಡಿಮೆಯಿಂದ ದಿನಕ್ಕಾಗುವಷ್ಟು ದುಡ್ಡು ಸಂಪಾದಿಸುತ್ತಿದ್ದರು. ಇದ್ದದ್ದರಲ್ಲೇ ನೆಮ್ಮದಿ ಕಂಡುಕೊಂಡಿದ್ದರು. 

ಕೇರಿಯನ್ನು ತೋರಿಸಿ ಧನವಂತ, ಗುಣವಂತನನ್ನು ಮನೆಗೆ ಕರೆದುಕೊಂಡು ಬಂದು “ಬಡವರ ಜೀವನವನ್ನು ನೋಡಿದೆಯಲ್ಲವೆ? ನಮ್ಮ ಮನೆಯಲ್ಲಿರುವ ಸುಖ ಸೌಲಭ್ಯಗಳನ್ನು ಕಂಡಾಗ ನಮ್ಮ ಸಿರಿತನದ ಬಗೆಗೆ ಹೆಮ್ಮೆ ಅನಿಸುವುದಿಲ್ಲವೆ?’ ಎಂದು ಜಂಭದಿಂದ ಕೇಳಿದ. “ಅಪ್ಪಾ, ನಾವು ಇಲ್ಲಿ ಹತ್ತಾರು ನಾಯಿಗಳನ್ನು ಸಾಕುತ್ತಿದ್ದೇವೆ, ಅವುಗಳ ಸ್ನಾನಕ್ಕೆ ಈಜುಕೊಳಗಳು ಕೂಡ ನಮ್ಮಲ್ಲಿವೆ. ಆದರೆ ಇದಕ್ಕಿಂತ ಎಷ್ಟೋ ವಿಶಾಲವಾದ ಸಮುದ್ರದಲ್ಲಿ ಅಸಂಖ್ಯಾತ ಜೀವಿಗಳು ಈಜುವುದನ್ನು ಕಂಡಿದ್ದೀರಾ?’ ಎಂದು ಗುಣವಂತ ತಣ್ಣಗೆ ಕೇಳಿದ. “ಹೌದು ಹೌದು, ಕಂಡಿದ್ದೇನೆ’ ಎಂದರು ತಂದೆ. ಅಲ್ಲಿಗೇ ಮಾತು ನಿಲ್ಲಿಸದ ಗುಣವಂತ “ನಮ್ಮ ಮನೆಯಲ್ಲಿ ಝಗಮಗ ಬೆಳಗಲು ವಿದ್ಯುದ್ದೀಪಗಳ ಸಾಲುಗಳೇ ಇವೆ. ಅದರಡಿ ನಾವು ವಾಸಿಸುತ್ತಿದ್ದೇವೆ. ಆದರೆ, ಇಡೀ ಜಗತ್ತನ್ನು ಬೆಳಗುವ ನಕ್ಷತ್ರಗಳು ಆಕಾಶದಲ್ಲಿವೆ. ಅದರಡಿ ವಿಶಾಲ ಬಯಲಿನಲ್ಲಿ ನಿದ್ರಿಸುವ ಆ ಬಡವರೇ ನಮಗಿಂತ ಅದೃಷ್ಟವಂತರಲ್ಲವೆ?’ ಎಂದ. ಧನವಂತ ಹುಬ್ಬೇರಿಸಿದ. ಅವನಿಗೆ ಮಗನ ಮಾತುಗಳು ಅರ್ಥವಾಗಲಿಲ್ಲ. “ನಮ್ಮ ಶ್ರೀಮಂತಿಕೆ ಏನೇನೂ ಅಲ್ಲವೆ?’ ಎಂದು ಅವನು ಕೋಪದಿಂದ ಕೇಳಿದ.

“ಅಪ್ಪಾ, ನಮ್ಮ ಮನೆಯ ಬಳಿಗೆ ಹೊರಗಿನಿಂದ ಯಾರೂ ಬರದ ಹಾಗೆ ಭದ್ರವಾದ ಕೋಟೆ ಕಟ್ಟಿದ್ದೀರಿ. ಬೇರೆಯವರು ಒಳಗೆ ಬರುವುದಿಲ್ಲ. ಆದರೆ ನಾವು ಅದನ್ನು ದಾಟಿ ಹೊರಗೆ ಹೋಗಿ ನಮ್ಮ ಜೀವನಕ್ಕಾಗಿ ಶ್ರಮಜೀವಿಗಳ ಮುಂದೆ ಕೈಯೊಡ್ಡುತ್ತೇವೆ. ಅವರು ಬೆವರಿಳಿಸಿ ಬೆಳೆದ ತರಕಾರಿಗಳು, ಧಾನ್ಯಗಳು, ಹಣ್ಣುಗಳನ್ನು ತಂದು ಬೇಯಿಸಿ ತಿಂದು ಬದುಕುತ್ತೇವೆ. ಕೇರಿಯ ಬಡ ಕೂಲಿಕಾರರು ಬೆಳೆದ ಆಹಾರವನ್ನು ತಿಂದು ಹೊಟ್ಟೆ ತುಂಬಿಸಿಕೊಂಡು ಬದುಕಬೇಕಿದ್ದರೆ ನಮಗಿಂತ ದೊಡ್ಡವರಾಗುವುದು ನಮಗೆ ಅನ್ನ ಕೊಡುವ ಅವರೇ ತಾನೆ?’ ಎಂದು ಹೇಳಿ ಗುಣವಂತ ಮೌನಕ್ಕೆ ಶರಣಾದ.

Advertisement

ಮಗನ ಮಾತು ಧನವಂತನ ಹೃದಯವನ್ನು ಈಟಿಯಂತೆ ಇರಿಯಿತು. ಮನಸ್ಸನ್ನು ಮಂಜಿನಂತೆ ಕೊರೆಯಿತು. ಅವನ ಜ್ಞಾನದ ಮುಂದೆ ಧನಂವಂತನ ಸೊಕ್ಕು ನಾಚಿಕೆಯಿಂದ ಬಾಗಿತು. “ಮಗನೇ, ನಿನ್ನ ಮಾತು ನಿಜ. ನಾವು ಬದುಕುವುದಕ್ಕೆ ಹಣವಾಗಲಿ, ರತ್ನಗಳಾಗಲಿ ಮುಖ್ಯವಲ್ಲ. ಬದುಕಿಗೆ ಬೇಕಾದ್ದು ಅನ್ನ, ನೀರು, ಗಾಳಿ. ಅದನ್ನು ಕೊಡುವವರೇ ದೊಡ್ಡವರು’ ಎಂದ ಅವನು. 

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next