Advertisement

ಪರಿಶುದ್ಧರು ಯಾರು? ರಾಜಕೀಯ ಮತ್ತು ನೈತಿಕತೆ

09:18 AM Aug 19, 2017 | |

ರಾಜಕೀಯಕ್ಕೆ ಬರುವವರು ನೈತಿಕವಾಗಿ ಪರಿಶುದ್ಧರಿರ ಬೇಕೆನ್ನುವುದು ಪ್ರಜಾತಂತ್ರದ ಮುಖ್ಯ ಆಶಯಗಳಲ್ಲಿ ಒಂದು. ಆದರೆ ನಮ್ಮ ರಾಜಕಾರಣಿಗಳು ಇದಕ್ಕೆ ಎಳ್ಳು ನೀರು ಬಿಟ್ಟು ಬಹಳ ಕಾಲ ಸಂದು ಹೋಗಿದೆ.

Advertisement

ಮೂರು ಪ್ರಕರಣಗಳು ರಾಜ್ಯದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೊಳಗಾಗಿದೆ. ಒಂದು ಮಾಜಿ ಸಚಿವ ಹರತಾಳ ಹಾಲಪ್ಪ ಅವರು ಅತ್ಯಾಚಾರ ಪ್ರಕರಣದಲ್ಲಿ ದೋಷಮುಕ್ತಿಗೊಂಡಿರುವುದು, ಎರಡನೆಯದ್ದು ಮಾಜಿ ಅಬಕಾರಿ ಸಚಿವ ಎಚ್‌. ವೈ. ಮೇಟಿ ವಿರುದ್ಧವಿದ್ದ ಅತ್ಯಾಚಾರ ಪ್ರಕರಣಕ್ಕೆ ಮರುಜೀವ ಬಂದಿರುವುದು ಮತ್ತು ಮೂರನೆಯದ್ದು ಮಡಿಕೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ವೇದಿಕೆಯಲ್ಲೇ ಕಾಂಗ್ರೆಸ್‌ ನಾಯಕ ಟಿ. ಪಿ. ರಮೇಶ್‌ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಅವರ ಕೈ ಸವರಿರುವುದು. ಈ ಘಟನೆಗಳು ರಾಜಕೀಯದಲ್ಲಿರುವವರ ನೈತಿಕತೆಯ ಕುರಿತು ಮತ್ತೂಮ್ಮೆ ಚಿಂತಿಸುವಂತೆ ಮಾಡಿದೆ. ರಾಜಕೀಯಕ್ಕೆ ಬರುವವರು ನೈತಿಕವಾಗಿ ಪರಿಶುದ್ಧರಾಗಿರಬೇಕೆನ್ನುವುದು ಪ್ರಜಾತಂತ್ರದ ಆಶಯಗಳಲ್ಲಿ ಒಂದು. ಆದರೆ ನಮ್ಮ ರಾಜಕಾರಣಿಗಳು ಇದಕ್ಕೆ ಎಳ್ಳು ನೀರು ಬಿಟ್ಟು ಬಹಳ ಕಾಲ ಸಂದು ಹೋಗಿದೆ. ರಾಜಕೀಯದ ಅಪರಾಧೀಕರಣವನ್ನು ತಡೆಯಲು ನ್ಯಾಯಾಲಯ ಮತ್ತು ಚುನಾವಣಾ ಆಯೋಗ ಕೆಲ ಕ್ರಮಗಳನ್ನು ಕೈಗೊಂಡಿದ್ದರೂ ಅದರಿಂದ ಹೆಚ್ಚಿನ ಪರಿಣಾಮವಾದಂತೆ ಕಾಣಿಸುವುದಿಲ್ಲ. 

ಇನ್ನು ಕರ್ನಾಟಕದ ವಿಚಾರಕ್ಕೆ ಬರುವುದಾದರೆ ಸದ್ಯದ ಮೂರು ಘಟನೆಗಳು ಬಹಳ ಗಂಭೀರವಾದ ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಮೊದಲ ಪ್ರಕರಣದಲ್ಲಿ ಹಿಂದಿನ ಬಿಜೆಪಿ ಸರಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಹಾಲಪ್ಪ ಮೇಲೆ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊರಿಸಲಾಗಿತ್ತು. ಅತ್ಯಾಚಾರಕ್ಕೊಳಗಾಗಿದ್ದರೆ ಎನ್ನಲಾಗಿದ್ದ ಮಹಿಳೆಯೇ ಸ್ವತಃ ಈ ಕುರಿತು ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದರು. ಹಾಲಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಯನ್ನು ಎದುರಿಸಿದ್ದಾರೆ. ಅವರ ವಿರುದ್ಧ ಸಿಐಡಿ ತನಿಖೆಯನ್ನೂ ನಡೆಸಲಾಗಿತ್ತು. ಆದರೆ ಅಂತಿಮವಾಗಿ ಸಾಕ್ಷ್ಯಾಧಾರಗಳ ಕೊರತೆಯಿಂದ ನಿರ್ದೋಷಿಯಾಗಿದ್ದಾರೆ. ಸಾಕಷ್ಟು ಸಾಕ್ಷ್ಯಾಧಾರಗಳೇ ಇಲ್ಲದೆ ಅತ್ಯಾಚಾರದಂತಹ ಗಂಭೀರ ಆರೋಪ ಮಾಡಿರುವುದರ ಹಿಂದೆ ಹಾಲಪ್ಪನವರ ರಾಜಕೀಯ ನೈತಿಕತೆಗೆ ಕಳಂಕ ಮೆತ್ತುವ ಪ್ರಯತ್ನವಿತ್ತೇ ಎಂಬ ಪ್ರಶ್ನೆ ಈಗ ಎದುರಾಗಿದೆ. ಒಂದು ವೇಳೆ ಇದು ಸುಳ್ಳು ಆರೋಪವಾಗಿದ್ದರೆ ಯಾವ ಉದ್ದೇಶಕ್ಕಾಗಿ ಈ ಆರೋಪ ಮಾಡಲಾಯಿತು ಮತ್ತು ಇದರ ಹಿಂದೆ ಯಾರು ಎನ್ನುವುದರ ಕುರಿತು ಕೂಡ ತನಿಖೆಯಾಗಬೇಕಲ್ಲವೆ? 

ಎಚ್‌. ವೈ. ಮೇಟಿ ಪ್ರಕರಣದಲ್ಲಿ ಸಿಐಡಿ ತನಿಖೆಯಾಗಿ ಕ್ಲೀನ್‌ಚಿಟ್‌ ಸಿಕ್ಕಿಯೂ ಆಗಿದೆ. ಆದರೆ ಇದೀಗ ಅತ್ಯಾಚಾರಕ್ಕೊಳಗಾಗಿದ್ದಾರೆ ಎನ್ನಲಾಗಿರುವ ಮಹಿಳೆ ಮತ್ತೆ ಮಾಧ್ಯಮದವರ ಎದುರು ಬಂದು ಅತ್ಯಾಚಾರ ಆಗಿರುವುದು ನಿಜ, ಅನಂತರ ನನ್ನನ್ನು ಅಪಹರಿಸಿ ಗೃಹ ಬಂಧನದಲ್ಲಿಟ್ಟು ಬೆದರಿಸಿ ಸುಳ್ಳು ಹೇಳಿಕೆ ಬರೆಸಲಾಗಿದೆ ಎಂದೆಲ್ಲ ಘಟನೆಯನ್ನ ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಹಾಗಿದ್ದರೆ ಸಿಐಡಿ ಅಧಿಕಾರಿಗಳು ಅತ್ಯಾಚಾರವಾಗಿಲ್ಲ ಎನ್ನುವ ತೀರ್ಮಾನಕ್ಕೆ ಬಂದದ್ದು ಹೇಗೆ? ಮಹಿಳೆ ಹೇಳುವ ಪ್ರಕಾರ ಅವರನ್ನು ಸಿಐಡಿ ವಿಚಾರಣೆಯೇ ನಡೆಸಿಲ್ಲವಂತೆ. ಸಂತ್ರಸ್ತೆಯನ್ನೇ ವಿಚಾರಣೆ ನಡೆಸದೆ ಕ್ಲೀನ್‌ಚಿಟ್‌ ನೀಡಿದ್ದು ಹೇಗೆ? ಈ ಪ್ರಕರಣ ಸಿಐಡಿಯ ಸಾಚಾತನವನ್ನೇ ಅನುಮಾನಿಸುವಂತೆ ಮಾಡಿದೆ. ಹಿಂದೆಯೂ ಕೆಲ ಪ್ರಕರಣಗಳಲ್ಲಿ ನಡೆದ ಸಿಐಡಿ ತನಿಖೆ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಸಿಐಡಿ ತನಿಖೆ ನಡೆಸುವುದೇ ತಪ್ಪಿತಸ್ಥರಿಗೆ ಕ್ಲೀನ್‌ಚಿಟ್‌ ನೀಡಲು ಎನ್ನುವ ಭಾವನೆಯಿದೆ. 

ಮಡಿಕೇರಿಯಲ್ಲಿ ನಡೆದ ಘಟನೆ ಇಷ್ಟು ಗಂಭೀರವಾಗಿಲ್ಲದಿದ್ದರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ನಾಯಕರಾದವರು ತಮ್ಮ ವರ್ತನೆಯ ಕುರಿತು ಬಹಳ ಜಾಗರೂಕರಾಗಿರಬೇಕೆಂಬ ಪಾಠವನ್ನು ಹೇಳುತ್ತದೆ. ಹೇಳಿಕೇಳಿ ಇದು ಸಾಮಾಜಿಕ ಮಾಧ್ಯಮದ ಯುಗ. ಎಲ್ಲರ ಕೈಯಲ್ಲೂ ಮೊಬೈಲ್‌ ಇದೆ. ವೇದಿಕೆಯಲ್ಲಿ ಕುಳಿತಿರುವಾಗ ಪಕ್ಕದಲ್ಲಿ ಕುಳಿತ ಮಹಿಳೆಯ ಕೈಮುಟ್ಟುವುದು ಅಸಭ್ಯವರ್ತನೆ ಎನ್ನುವುದು ಹಿರಿಯ ಮುಖಂಡರಾದ ರಮೇಶ್‌ ಅವರಿಗೆ ತಿಳಿದಿರಲಿಲ್ಲವೆ? ಯಾವುದೇ ಭಾವನೆಯಿಂದ ಮೈಮುಟ್ಟಿದ್ದರೂ ಈಗ ಆಗಬೇಕಾದ ಹಾನಿ ಆಗಿ ಹೋಗಿದೆ. ಜನರು ಭ್ರಷ್ಟ, ಅಪ್ರಾಮಾಣಿಕ, ಅಪರಾಧಿ ಹಿನ್ನೆಲೆಯ ನಾಯಕರನ್ನಾದರೂ ಸಹಿಸಿಕೊಳ್ಳುತ್ತಾರೆ. ಆದರೆ ಶೀಲಗೆಟ್ಟವರನ್ನು ಸಹಿಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ಇತಿಹಾಸದಲ್ಲಿ ಅನೇಕ ಉದಾಹರಣೆಗಳಿವೆ. ಹೀಗಾಗಿ ರಾಜಕಾರಣಿಗಳು ಗರಿಷ್ಠ ಎಚ್ಚರಿಕೆಯಿಂದ ಇರುವುದು ಅಗತ್ಯ. ಈಗ ಜನರ ಕೈಯಲ್ಲಿರುವ ಮೊಬೈಲ್‌ ಎಲ್ಲವನ್ನೂ ದಾಖಲಿಸಿಕೊಳ್ಳುತ್ತದೆ ಎನ್ನುವ ಪರಿಜ್ಞಾನ ಇರಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next