Advertisement
ಮಾತೃ ದೇವೋಭವ, ಮಗುವಿನ ಮೊದಲ ನುಡಿ “ಮಾ’, “ಅಮ್ಮ’, ಹೆಣ್ಣು ಕರುಣೆ, ತ್ಯಾಗದ ಪ್ರತೀಕ. ಹೀಗೆ ಸಮಾಜದಲ್ಲಿ ಹೆಣ್ಣಿಗೆ ಉನ್ನತ ಸ್ಥಾನವಿದೆ, ಹೆಣ್ಣನ್ನು ಹೊಗಳಿ ನೂರಾರು ಕವಿತೆಗಳು ಬರೆಯಲ್ಪಟ್ಟವು. ಆದರೆ, ಕವಿತೆಗಳನ್ನು ಬರೆದವರೆಲ್ಲ ಪುರುಷರೇ! ವಿಶ್ವದ ಶ್ರೇಷ್ಠ ಚಿತ್ರವೆಂದು ಗುರುತಿಸಲ್ಪಟ್ಟಿದ್ದು “ಮೊನಾಲಿಸಾ’, ಸ್ತ್ರೀಯ ಮುಗುಳ್ನಗುವಿನ ಚಿತ್ರ, ಬರೆದವನು ಪುರುಷ “ಲಿಯೋನಾರ್ಡೊ ದ ವಿಂಚಿ’. ದೇವರು ಹೆಣ್ಣಿಗೆ ಸೌಂದರ್ಯ, ಕೋಮಲತೆ, ಕರುಣೆ, ತಾಳ್ಮೆಯನ್ನು ಕೊಟ್ಟಂತೆ ಹೊಟ್ಟೆಕಿಚ್ಚನ್ನು ಸ್ವಲ್ಪ ಜಾಸ್ತಿಯಾಗೇ ಕೊಟ್ಟನೋ ಏನೋ. ಈ ಹೊಟ್ಟೆಕಿಚ್ಚಿಗೆ ಮೊದಲ ಬಲಿಪಶು ಮತ್ತೂಂದು ಹೆಣ್ಣೇ ಇರಬೇಕು. ಹೆಣ್ಣಿನ ಈ ಗುಣ ಹಳ್ಳಿ, ಪಟ್ಟಣ, ಕಲಿತವರು, ಕಲಿಯದಿದ್ದವರು, ಕೆಲಸಕ್ಕೆ ಹೋಗುವವರು, ಹೋಗದಿದ್ದವರು ಎಂಬ ಭೇದಭಾವವಿಲ್ಲದೆ ಹೆಚ್ಚಿನ ಎಲ್ಲರಲ್ಲೂ ಕಂಡು ಬಂದರೂ, ಪಟ್ಟಣದ ಹೆಂಗಸರಲ್ಲೇ ಇದು ಅಧಿಕವೇನೋ! ಹೆಣ್ಣಿಗೆ ಹೆಚ್ಚಾಗಿ ತಾನೇ ಎಲ್ಲರಿಗಿಂತ ಚೆಂದ ಕಾಣಬೇಕು, ಎಲ್ಲರೂ ತನ್ನನ್ನೇ ಗಮನಿಸಬೇಕೆಂಬ ಗುಣವೂ ಹೆಣ್ಣಿಗೆ ಹೆಣ್ಣೇ ಶತ್ರುವನ್ನಾಗಿ ಮಾಡುತ್ತದೆಯೆ?
Related Articles
Advertisement
ದ್ರೌಪದಿಗೆ ಐದು ಗಂಡಂದಿರಿದ್ದರೂ ತಕರಾರು ಇರಲಿಲ್ಲ ಅವರೊಳಗೆ, ಅದೇ ದಶರಥನಿಗೆ ಮೂವರು ಹೆಂಡತಿಯರನ್ನು ಸಂಭಾಳಿಸಲಾಗದೇ ಒಬ್ಬಳ ಹೊಟ್ಟೆಕಿಚ್ಚೇ ರಾಮಾಯಣಕ್ಕೆ ನಾಂದಿ ಹಾಡಿತು. ಕೃಷ್ಣನ ಪತ್ನಿಯರಾದ ರುಕ್ಮಿಣಿ, ಸತ್ಯಭಾಮೆಯರ ಜಗಳ ಹಲವು ಕತೆೆಗಳನ್ನು ಹುಟ್ಟುಹಾಕಿತು. ಇನ್ನು ಸಿನೆಮಾ ರಂಗದ ನಾಯಕಿಯರ ಕೋಳಿಜಗಳಗಳು ಹಲವು ಮಾಧ್ಯಮಗಳಿಗೆ ಆಹಾರವಾಗಿ, ಪುಟ ತುಂಬಿಸಲೋ, ಟಿ.ವಿ. ಚಾನೆಲ್‌ಗಳಿಗೆ ಸಿನೆಮಾ ಸುದ್ದಿ ಬಿತ್ತರಿಸಲು ಸಹಾಯವಾಗಿ ಹಲವರಿಗೆ ಅಸ್ತಿತ್ವ ಉಳಿಸಿಕೊಳ್ಳಲು ಸಹಾಯವಾಗುತ್ತದೆ.ಮನೆಯಲ್ಲಿ ಅಮ್ಮ, ಮಗ ಹತ್ತಿರವಾಗಿ ತನ್ನ ಎಲ್ಲ ವಿಷಯಗಳನ್ನು ಬಂದು ಅಮ್ಮನಲ್ಲೇ ಮಗ ಹೇಳಿಕೊಳ್ಳುವುದು ಜಾಸ್ತಿ. ಅದೇ ಮಗಳಿಗೆ ಅಮ್ಮ ಓಲ್ಡ್ ಫ್ಯಾಶನ್, ಅಪ್ಪ ಒಬ್ಬ ಆದರ್ಶ ಪುರುಷನಾಗಿರುವುದೇ ಅಧಿಕ. ಮಗಳು ಮಾಡಿದ್ದಕ್ಕೆ ಅಪ್ಪನ ಸೈ ಸೇರಿರುತ್ತದೆ. ಈ ವಾದ-ವಿವಾದಕ್ಕೆ ಅಪವಾದ ಇಲ್ಲವೆಂದಲ್ಲ, ಸುಮಾರು 90 ಶೇ. ಅಕ್ಕ-ತಂಗಿಯರು ಪ್ರೀತಿಯಿಂದಿರುತ್ತಾರೆ. ಅಕ್ಕ-ತಂಗಿಯರು ಭಿನ್ನ ಪ್ರಕೃತಿಯವರಾಗಿದ್ದರೂ ಹೆಚ್ಚಾಗಿ ಅನ್ಯೋನ್ಯವಾಗಿರುತ್ತಾರೆ. ನಮ್ಮ ಹಿಂದಿ ಸಿನೆಮಾದ ನಟಿಯರನ್ನೇ ತೆಗೆದುಕೊಂಡರೂ ಹಲವು ಉತ್ತಮ ಹಾಗೂ ಆದರ್ಶ ಉದಾಹರಣೆಗಳಿವೆ, ಕರಿಷ್ಮಾ ಕಪೂರ್, ಕರೀನಾ ಕಪೂರ್, ಕಾಜೋಲ್ ಮುಖರ್ಜಿ, ತನಿಶಾ ಮುಖರ್ಜಿ, ಶಿಲ್ಪಾ ಶೆಟ್ಟಿ- ಶಮಿತಾ ಶೆಟ್ಟಿ. ಟೆನ್ನಿಸ್ ಆಟದ ಜಗತ್‌ಪ್ರಸಿದ್ಧ ಆಟಗಾರ್ತಿಯರಾದ ವೀನಸ್ ವಿಲಿಯಮ್ಸ… ಮತ್ತು ಸೆರೆನಾ ವಿಲಿಯಮ್ಸ… ಅಕ್ಕ-ತಂಗಿಯರು, ಟೆನ್ನಿಸ್ ಕೋರ್ಟಿನಲ್ಲಿ ಎದುರಾಳಿಗಳಾದರೂ ಅಕ್ಕ-ತಂಗಿಯರ ಪ್ರೀತಿಗೆ ಉದಾಹರಣೆಯಂತಿದ್ದಾರೆ. ಅಕ್ಕ-ತಂಗಿಯರ ಜಗಳ ಬೀದಿ ಬಾಗಿಲಿಗೆ ಬಂದು ನಗೆಪಾಟಲಾಗಿರುವ ಉದಾಹರಣೆ ಇಲ್ಲವೆನ್ನಬಹುದೋ ಏನೋ. ಅಮ್ಮ, ಮಗಳು ಅನ್ಯೋನ್ಯವಾಗಿದ್ದು “ತಾಯಿಯಂತೆ ಸೀರೆ, ನೂಲಿನಂತೆ ಮಗಳು’- ಎನ್ನುವ ಗಾದೆಗೆ ಉದಾಹರಣೆಯಾಗಿರುವವರೂ ಇದ್ದಾರೆ. ಮದುವೆ ಮಾಡಿ ಮಗಳನ್ನು ಕಳುಹಿಸಿ ಕೊಡುವಾಗ ಧಾರಾಕಾರವಾಗಿ ಕಣ್ಣೀರು ಹರಿಸುವ ತಾಯಂದಿರೂ ಇದ್ದಾರೆ. ಮದುವೆಯಾದ ಮೇಲೂ ಮಗಳ ಮೇಲಿನ ಪ್ರೇಮದಿಂದ ಅವಳ ಸಂಸಾರದಲ್ಲಿ ಮೂಗು ತೂರಿಸಿ ಸಂಸಾರದಲ್ಲಿ ಬಿರುಕು ಬಿಡುವುದಕ್ಕೆ ಕಾರಣರಾಗುವ ತಾಯಂದಿರೂ ಇಲ್ಲದಿಲ್ಲ. ಈ ಜಗಳ ಕೋರ್ಟಿನ ಮೆಟ್ಟಿಲು ತುಳಿದು ಸಂಸಾರ ನೌಕೆ ಛಿದ್ರ ಛಿದ್ರವಾದದ್ದೂ ಇದೆ. ನನ್ನ ಈ ವಾದ ಭಾರತಕ್ಕೆ ಸೀಮಿತವಾಗಿಲ್ಲ. ನಾನು ಹಲವು ವರ್ಷ ಗಲ್ಫ್ ರಾಜ್ಯದಲ್ಲಿದ್ದು ಒಂದು ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ ಇಪ್ಪತ್ತೈದಕ್ಕಿಂತ ಜಾಸ್ತಿ ದೇಶದ ಜನರು ಒಂದೇ ಕಡೆ ಕೆಲಸ ಮಾಡುತ್ತಿದ್ದ ಸಂಸ್ಥೆಯಾಗಿತ್ತು ಅದು, ನನಗೆ ಕೆಲಸದಲ್ಲಿ ಸಹಾಯ, ಸಹಕಾರ ಸಿಗುತ್ತಿದ್ದದ್ದು ಪುರುಷರಿಂದಲೇ! ಬಾಸ್ ಅಂತೂ ಎಲ್ಲರೆದುರಿಗೆ ಯಾವ ಮಹಿಳೆಯನ್ನೂ ದೂರುವ ಅಥವಾ ಹೊಗಳುವ ಸಾಹಸವನ್ನು ಮಾಡುತ್ತಿರಲಿಲ್ಲ. ಈ ಎಲ್ಲದರಿಂದ ನಷ್ಟ ಮಹಿಳೆಗೇ, ಪುರುಷರು ಇದರಿಂದ ಲಾಭ ಪಡಿಯುತ್ತಿದ್ದರೇನೋ ಅನ್ನಿಸುತ್ತಿತ್ತು.ಈ ಗುಣ ಮನುಷ್ಯರಲ್ಲಿ ಮಾತ್ರ ಅಲ್ಲ ಪ್ರಾಣಿ-ಪಕ್ಷಿಗಳಲ್ಲೂ ಇದೆ, ಜೇನುಗೂಡಿನಲ್ಲಿ ಒಂದೇ ರಾಣಿ ಹುಳು, ಮತ್ತೂಂದು ರಾಣಿಗೆ ಅವಕಾಶವಿಲ್ಲ ಅಲ್ಲಿ.
ಕೆಲ್ಲಿ ವ್ಯಾಲನ್ ಬರೆದ ಪುಸ್ತಕ ದಿ ಟ್ವಿಸ್ಟಡ್ ಸಿಸ್ಟರ್ ಹುಡ್ ಪ್ರಕಾರ 90 ಶೇ. ಹೆಂಗಸರಲ್ಲಿ ಮತ್ತೂಬ್ಬ ಹೆಂಗಸಿನ ಬಗ್ಗೆ ಕಾರಣವಿಲ್ಲದೆ ಕೀಳು, ನಿಕೃಷ್ಟ ಮತ್ತು ವಿರೋಧ ಭಾವನೆಗಳ ಗುಪ್ತವಾಹಿನಿ ಹರಿಯುತ್ತದಂತೆ, ಇದು ಕೃತಕ ನಗುವಿಗೆ ಕಾರಣವಾಗುವುದಂತೆ. ಈ ವಿರೋಧಿ ಭಾವನೆಗಳು ಹುಡುಗಿಯರಲ್ಲಿ ಮಾತ್ರ ಅಲ್ಲ , ಪ್ರಬುದ್ಧ ಹೆಂಗಸರಲ್ಲಿಯೂ ಇದೆಯಂತೆ. ಕೆಲ್ಲಿ ವ್ಯಾಲನ್ ನಡೆಸಿದ ಸರ್ವೆಯಲ್ಲಿ ಸುಮಾರು 3000 ಅಧಿಕ ಹೆಂಗಸರು ಭಾಗವಹಿಸಿದ್ದು, ಈ ಹೆಂಗಸರು ಸುಮಾರು 50ಕ್ಕೂ ಹೆಚ್ಚಿನ ಪ್ರಶ್ನಾವಳಿಗಳನ್ನು ಎದುರಿಸಿದ್ದರಂತೆ. ಭಾಗವಹಿಸಿದ ಸುಮಾರು 75 ಶೇ. ಹೆಂಗಸರ ಪ್ರಕಾರ ಇನ್ನೊಬ್ಬ ಹೆಂಗಸಿನ ಹೊಟ್ಟೆಕಿಚ್ಚು ಮತ್ತು ಸ್ಪರ್ಧಾತ್ಮಕ ಮನೋಭಾವವೇ ಬೇಜಾರು ತರುವ ಸಂಗತಿಯೆಂದು ಹೇಳಿಕೊಂಡಿದ್ದಾರೆ. ವ್ಯಾಲನ್ ಪ್ರಕಾರ ಹೆಣ್ಣಿನ ಶಕ್ತಿ, ಸ್ತ್ರೀಸಮಾನತಾವಾದಿ, ಸ್ತ್ರೀಶೋಷಣೆಯ ಬಗ್ಗೆ ಮಾತನಾಡುವ, ಹೋರಾಡುವ ಹೆಂಗಸರನ್ನೂ ಬಿಟ್ಟಿಲ್ಲ ಈ ಸ್ತ್ರೀವಿರೋಧಿ ಗುಪ್ತವಾಹಿನಿ, ಇದು ಕೃತಕ ಆತ್ಮೀಯತೆ ಮತ್ತು ಪ್ಲಾಸ್ಟಿಕ್ ನಗುವಿಗೆ ಕಾರಣವಾಗುತ್ತದೆ. ಇಂತಹ ಹೆಂಗಸರು ಭಾವನಾತ್ಮಕವಾಗಿ ಮತ್ತೂಬ್ಬ ಹೆಂಗಸರಿಂದ ಅಧೀರರಾಗಿರುತ್ತಾರೆ. ಕೆಲ್ಲಿ ವ್ಯಾಲನ್ ಬರೆದ ಪುಸ್ತಕ ಅಮೆರಿಕದಲ್ಲಿ ಬಿಡುಗಡೆಯಾಗಿ ಆಗಲೇ ಪ್ರಸಿದ್ಧಿ ಪಡೆದಿದೆ ಮತ್ತು ಸದ್ಯದಲ್ಲೇ ಇಂಗ್ಲೆಂಡಿಗೂ ಕಾಲಿಡುತ್ತಿದೆಯಂತೆ. ಹೆಣ್ಣಿಗೆ ಮತ್ತೂಂದು ಹೆಣ್ಣಿನ ಬಗ್ಗೆ ಇರುವ ದ್ವೇಷ, ಅಸೂಯೆಯು ಪ್ರಕೃತಿ ಸಹಜವಾಗಿದ್ದರೂ, ಆದಷ್ಟು ಈ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳುವತ್ತ ಪ್ರಯತ್ನಿಸುವುದು ಉತ್ತಮ. – ಗೀತಾ ಕುಂದಾಪುರ