Advertisement

ಹಾಸನ ಅಗ್ರಸ್ಥಾನಕ್ಕೆ ಯಾರು ಕಾರಣ?

03:06 AM May 02, 2019 | sudhir |

ಬೆಂಗಳೂರು/ಹಾಸನ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫ‌ಲಿತಾಂಶ ಬಂದರೆ ಯಾರು ಹೊಣೆ? ಕಣ್ಣಿಗೆ ಎಣ್ಣೆ ಬಿಟ್ಟು ಓದಿದ ವಿದ್ಯಾರ್ಥಿಗಳೇ, ಅವರಿಗೆ ಮಾರ್ಗದರ್ಶನ ನೀಡಿದ ಶಿಕ್ಷಕರೇ ಅಥವಾ ಮಕ್ಕಳ ಬೆನ್ನಿಗೆ ನಿಂತ ಪೋಷಕರೇ…?

Advertisement

ಹಾಸನ ಜಿಲ್ಲೆಯಲ್ಲಿ ಇವರಾರೂ ಅಲ್ಲ. ಈ ಬಾರಿ ಎಸೆಸೆಲ್ಸಿ ಫ‌ಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಹಾಸನದಲ್ಲಿ ಈಗ ಫ‌ಲಿತಾಂಶದ ಗರಿಮೆ ಪಡೆಯುವುದಕ್ಕೆ ವಾಗ್ವಾದ ಶುರುವಾಗಿದೆ.

“ಹಾಸನ ಜಿಲ್ಲೆ ಫ‌ಸ್ಟ್‌ ಬರಲು ಜಿಲ್ಲಾ ಪಂಚಾಯತ್‌ನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ, ನನ್ನ ಪತ್ನಿ ಭವಾನಿ ರೇವಣ್ಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವನಾದ ನಾನೇ ಕಾರಣ’ ಎಂದು ಎಚ್‌.ಡಿ. ರೇವಣ್ಣ
ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಿಎಂ ಕುಮಾರ ಸ್ವಾಮಿ, ಈಗಿನ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್‌ ಕೊಡುಗೆಯನ್ನೂ ನೆನಪಿಸಿಕೊಂಡಿದ್ದಾರೆ.

ಹಾಸನ ಜಿಲ್ಲೆ ಉತ್ತಮ ಸ್ಥಾನ ಪಡೆಯಲು ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರೇ ಕಾರಣ ಎಂಬ ಕೆಲವು ಮಾಧ್ಯಮಗಳ ವರದಿಗಳಿಗೆ ಆಕ್ರೋಶ ವ್ಯಕ್ತಪಡಿಸಿರುವ ರೇವಣ್ಣ, “ಆ ಯಮ್ಮಾ ಏನು ಕಡಿದು ಕಟ್ಟೆ ಹಾಕಿದ್ರಾ, ಶೈಕ್ಷಣಿಕ ಪ್ರಗತಿ ಸುಧಾರಣೆಗೆ ಒಂದು ದಿನವಾದ್ರೂ ಸಭೆ ಮಾಡಿದ್ರಾ, ಶಾಲೆಗೆ ಹೋಗಿ ಪಾಠ ಮಾಡಿದ್ರಾ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 2006ರಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ, ಆಗಿನ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ, ಅಂದಿನ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್‌ ಹಾಸನ ಜಿಲ್ಲೆಗೆ ಭರಪೂರ ಕೊಡುಗೆ ನೀಡಿದರು. ಅನಂತರದಲ್ಲಿ 31ನೇ ಸ್ಥಾನದಲ್ಲಿದ್ದ ಹಾಸನ ಜಿಲ್ಲೆ ಸುಧಾರಿಸುತ್ತಾ ಬಂದು, ಕಳೆದ ವರ್ಷ 7ನೇ ಸ್ಥಾನದಲ್ಲಿತ್ತು. ಈಗ ಮೊದಲ ಸ್ಥಾನಕ್ಕೆ ಬಂದಿದೆ. ಇದಕ್ಕೆ ನಾನು ಆಗಾಗ್ಗೆ ನಡೆಸಿದ ಸಭೆಯೂ ಕಾರಣ ಎಂದರು.

Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ಆಗಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, “ರಾಜಕಾರಣಿಗಳ ಎಲ್ಲ ಮಾತಿಗೂ ಪ್ರತಿಕ್ರಿಯಿಸಲಾರೆ. ಹಾಸನ ಜಿಲ್ಲೆಯ ಫ‌ಲಿತಾಂಶಕ್ಕೆ ಅಧಿಕಾರಿಗಳು ಹಾಗೂ ಶಿಕ್ಷಕರೇ ಕಾರಣ. ನಾನು ಡಿಸಿಯಾಗಿದ್ದಾಗ ತಾಯಂದಿರ ಸಭೆ ಮತ್ತಿತರ ಕಾರ್ಯಕ್ರಮ ನಡೆಸಿದ್ದೆ’ ಎಂದಿದ್ದಾರೆ.

ಬಿಜೆಪಿಗೆ ಓಟ್‌ ಹಾಕಿದ್ದಕ್ಕೆ ಕರಾವಳಿಗೆ ಕಡಿಮೆ ಸ್ಥಾನ
ಉಡುಪಿ, ದಕ್ಷಿಣ ಕನ್ನಡದವರು ಬಿಜೆಪಿಗೆ ಓಟ್‌ ಹಾಕಿ ಎಸೆಸೆಲ್ಸಿ ಫ‌ಲಿತಾಂಶದಲ್ಲಿ 5, 7ನೇ ಸ್ಥಾನಕ್ಕೆ ಹೋಗಿದ್ದಾರೆ. ಜಾತ್ಯತೀತ ಪಕ್ಷಕ್ಕೆ ಓಟು ಹಾಕಿದ ಹಾಸನ, ರಾಮನಗರ ಜಿಲ್ಲೆಯವರು ಮೊದಲೆರಡು ಸ್ಥಾನ ಪಡೆದಿದ್ದಾರೆ ಎಂದೂ ರೇವಣ್ಣ ವ್ಯಂಗ್ಯವಾಡಿದರು. ಹಾಸನದ ಸಾಧನೆಗೆ ದೇವೇಗೌಡರ ಮಾರ್ಗ ದರ್ಶನವೂ ಕಾರಣ. ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ದೇವೇಗೌಡ 3 ದಶಕಗಳಿಂದಲೂ ಶ್ರಮಿಸಿದ್ದಾರೆ. ಮೇಲಾಗಿ ದೈವಾ ನುಗ್ರಹವೂ ಕಾರಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next