ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಯುಎಇ ಚರಣ ಈಗಾಗಲೇ ಆರಂಭವಾಗಿದೆ. ಯುಎಇ ಲೆಗ್ ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನುಭವಿಸಿದೆ. ಕೋಲ್ಕತ್ತಾ ವಿರುದ್ಧ ನಡೆದ ಪಂದ್ಯದಲ್ಲಿ ಆರ್ ಸಿಬಿ ಹೀನಾಯ ಸೋಲನುಭವಿಸಿತ್ತು.
ಆದರೆ ಸೋಲಿನ ನಡುವೆ ಆರ್ ಸಿಬಿ ಕ್ಯಾಂಪ್ ನ ಒಂದು ಫೋಟೊ ವೈರಲ್ ಆಗಿದೆ. ಬೌಲರ್ ಜೇಮಿಸನ್ ಅವರು ತಂಡ ಸಹಾಯಕ ಸಿಬ್ಬಂದಿಯತ್ತ ನೋಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದೆ.
ಇದನ್ನೂ ಓದಿ:ಪಾಕ್ ಪ್ರವಾಸ ರದ್ದು: ಇಂಗ್ಲೆಂಡ್ ಮಂಡಳಿಗೆ ಮುಜುಗರ ತಂದ ರಾಯಭಾರಿಯ ಹೇಳಿಕೆ
ಚಿತ್ರದಲ್ಲಿರುವ ಸಿಬ್ಬಂದಿ ನವನೀತಾ ಗೌತಮ್. ಇವರು ಆರ್ ಸಿಬಿ ತಂಡದ ಮಸಾಜ್ ಥೆರಪಿಸ್ಟ್. ಆರ್ ಸಿಬಿ ತಂಡದ ಏಕೈಕ ಮಹಿಳಾ ಸಿಬ್ಬಂದಿ ಈಕೆ. 2019ರಲ್ಲೇ ಆರ್ ಸಿಬಿ ಕ್ಯಾಂಪ್ ಸೇರಿದ್ದ ಸದ್ಯ 29ರ ಹರೆಯದ ನವನೀತಾ ಕೆನಡಾ ಮೂಲದವರು.
ಆರ್ ಸಿಬಿ ತಂಡಕ್ಕೆ ಸೇರುವ ಮೊದಲು ನವನೀತಾ ಹಲವಾರು ತಂಡಗಳಿಗೆ ಕೆಲಸ ಮಾಡಿದ್ದಾರೆ. ಕೆನಡಾದ ಗ್ಲೋಬಲ್ ಟಿ20 ಕೂಟದಲ್ಲಿ ನವನೀತಾ ಟೊರಾಂಟೊ ನಾಶನಲ್ಸ್ ತಂಡದ ಪರವಾಗಿ ಕೆಲಸ ಮಾಡಿದ್ದರು. ಏಶ್ಯಾ ಕಪ್ ನಲ್ಲಿ ಭಾರತ ಮಹಿಳಾ ಬಾಸ್ಕೆಟ್ ಬಾಲ್ ತಂಡದಲ್ಲೂ ಕೆಲಸ ಮಾಡಿದ್ದರು.
2019ರಲ್ಲಿ ಇವರು ಆರ್ ಸಿಬಿ ಕ್ಯಾಂಪ್ ಸೇರಿದಾಗ ಐಪಿಎಲ್ ನ ಎಲ್ಲಾ ಐದು ತಂಡಗಳಲ್ಲಿ ಕೆಲಸ ಮಾಡುವ ಏಕೈಕ ಮಹಿಳಾ ಸಿಬ್ಬಂದಿಯಾಗಿದ್ದರು. ತಂಡದಲ್ಲಿ ಒಬ್ಬಂಟಿ ಮಹಿಳೆಯಾಗಿ ಕೆಲಸ ಮಾಡುವಾಗ ಯಾವುದೇ ಕಷ್ಟವಾಗುವುದಿಲ್ಲವೇ ಎಂದು ಕೇಳಿದಾಗ, ‘ ಇಲ್ಲ ಹಾಗೇನಿಲ್ಲ, 20 ಮಂದಿ ಸಹೋದರರ ಜೊತೆಗಿರುವ ಭಾವನೆ ಇರುತ್ತದೆ ಎನ್ನುತ್ತಾರೆ ನವನೀತಾ ಗೌತಮ್.