ಢಾಕಾ: ಹಿಂಸಾಚಾರದಿಂದ ಬಾಂಗ್ಲಾದೇಶ ನಲುಗಿ ಹೋಗಿದ್ದು, ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಮತ್ತೊಂದೆಡೆ ಶೇಖ್ ಹಸೀನಾ ಅವರ ರಾಜಕೀಯ ಬದ್ಧ ವೈರಿ ಎಂದೇ ಗುರುತಿಸಲ್ಪಟ್ಟ ಖಲೀದಾ ಜಿಯಾ ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶ ನೀಡಿರುವ ಬೆಳವಣಿಗೆ ಸೋಮವಾರ (ಆಗಸ್ಟ್ 05) ನಡೆದಿದೆ.
ಶೇಖ್ ಹಸೀನಾ ನೇತೃತ್ವದ ಸರ್ಕಾರ ಬಾಂಗ್ಲಾದೇಶದಲ್ಲಿ ಪತನಗೊಂಡ ಬೆನ್ನಲ್ಲೇ ದೇಶದ ರಾಜಕೀಯದಲ್ಲಿ ಭಾರೀ ಬದಲಾವಣೆಯ ಮುನ್ಸೂಚನೆ ಲಭಿಸತೊಡಗಿದ್ದು, ಅವಾಮಿ ಲೀಗ್ ನಾಯಕಿ, ಜೈಲಿನಿಂದ ಬಿಡುಗಡೆಗೊಳ್ಳಲಿರುವ ಖಲೀದಾ ಜಿಯಾ ಮತ್ತೆ ಅಧಿಕಾರದ ಗದ್ದುಗೆ ಏರುವ ಸಿದ್ಧತೆಯಲ್ಲಿರುವುದಾಗಿ ವರದಿ ವಿವರಿಸಿದೆ.
ಜೈಲಿನಲ್ಲಿರುವ ಮಾಜಿ ಪ್ರಧಾನಿ ಖಲೀದಾ ಜಿಯಾ ಜೈಲಿನಿಂದ ಬಿಡುಗಡೆಯಾಗುವ ಸಿದ್ಧತೆಯಲ್ಲಿದ್ದಾರೆ. ಪದಚ್ಯುತ ಶೇಖ್ ಹಸೀನಾ ಬಾಂಗ್ಲಾದೇಶ ತೊರೆದ ಬೆನ್ನಲ್ಲೇ ಬಾಂಗ್ಲಾದೇಶ ಅಧ್ಯಕ್ಷ ಮೊಹಮ್ಮದ್ ಶಹಾಬುದ್ಧೀನ್ ಜಿಯಾ ಬಿಡುಗಡೆಗೆ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.
ಖಲೀದಾ ಜಿಯಾ ಅವರು ಅವಿಭಜಿತ ಭಾರತದ ಪಶ್ಚಿಮಬಂಗಾಳದ ಜಲ್ಪೈಗುರಿಯಲ್ಲಿ ಜನಿಸಿದ್ದರು. ಆಕೆಯ ಪತಿ ಲೆಫ್ಟಿನೆಂಟ್ ಜನರಲ್ ಜಿಯಾವುರ್ ರೆಹಮಾನ್ ಒಬ್ಬ ನಿರ್ದಯಿ ಮಿಲಿಟರಿ ಅಧಿಕಾರಿಯಾಗಿದ್ದ. 1977ರಿಂದ ಬಾಂಗ್ಲಾದೇಶದ ಅಧ್ಯಕ್ಷರಾಗಿದ್ದು, 1981ರಲ್ಲಿ ಹತ್ಯೆಗೈಯಲಾಗಿತ್ತು.
ಬಾಂಗ್ಲಾದೇಶದಲ್ಲಿ ಭೀಕರ ಹಿಂಸಾಚಾರ ನಡೆಯುತ್ತಿದ್ದ ಸಂದರ್ಭದಲ್ಲೇ ಖಲೀದಾ ಜಿಯಾ 1991ರಲ್ಲಿ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಆಡಳಿತ ನಡೆಸಿದ್ದರು. ಬಹುಮತ ಕೊರತೆಯಿಂದಾಗಿ ಜಿಯಾ ಜಾಮಾ ಇ ಇಸ್ಲಾಮಿ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದರು.
1996ರಲ್ಲಿ ಖಲೀದಾ ಜಿಯಾ ಎರಡನೆ ಬಾರಿ ಗೆಲುವು ಸಾಧಿಸಿದ್ದರು ಕೂಡಾ, ಅವಾಮಿ ಲೀಗ್ ಸೇರಿದಂತೆ ಪ್ರಮುಖ ವಿಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದವು. ನಂತರ ಕೇವಲ 12 ದಿನಗಳಲ್ಲಿ ಜಿಯಾ ಸರ್ಕಾರ ಪತನಗೊಂಡಿತ್ತು. ಬಳಿಕ ಜೂನ್ ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಜಯಭೇರಿ ಬಾರಿಸುವ ಮೂಲಕ ಶೇಖ್ ಹಸೀನಾ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರದ ಗದ್ದುಗೆ ಏರಿದ್ದರು.