ನವದೆಹಲಿ: ದೆಹಲಿ-ಎನ್ ಸಿಆರ್ ಪ್ರದೇಶದಲ್ಲಿನ ಗ್ಯಾಂಗ್ ಸ್ಟರ್ ರವಿ ಕಾನಾ ಮತ್ತು ಆತನ ಸಹಚರರು ಗುಜರಿ ವಸ್ತು ಮಾಫಿಯಾದಲ್ಲಿ ತೊಡಗಿದ್ದು, ಇದಕ್ಕೆ ಸಂಬಂಧಿಸಿದಂತೆ ನೋಯ್ಡಾ ಪೊಲೀಸರು ಈಗಾಗಲೇ 200 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Kottigehara: ಕಾರಿನಲ್ಲಿ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ…
ಗುಜರಿ ಮಾಫಿಯಾ ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸಿರುವ ನೋಯ್ಡಾ ಪೊಲೀಸರು ರವಿ ಕಾನಾ ತನ್ನ ಗೆಳತಿ ಕಾಜಲ್ ಜಾಗೆ ಉಡುಗೊರೆಯಾಗಿ ನೀಡಿದ್ದ 100 ಕೋಟಿ ರೂ. ಮೌಲ್ಯದ ದಕ್ಷಿಣ ದೆಹಲಿಯ ಬಂಗಲೆ ಮೇಲೆ ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.
ಯಾರೀಕೆ ಕಾಜಲ್ ಜಾ?
ಉದ್ಯೋಗದ ಹುಡುಕಾಟದಲ್ಲಿದ್ದ ಕಾಜಲ್ ಜಾ, ಗ್ಯಾಂಗ್ ಸ್ಟರ್ ರವಿ ಕಾನಾನನ್ನು ಸಂಪರ್ಕಿಸಿದ್ದಳು. ಬಳಿಕ ಜಾ ಈತನ ಗ್ಯಾಂಗ್ ಗೆ ಸೇರ್ಪಡೆಗೊಂಡಿದ್ದು, ಪ್ರಮುಖ ಸದಸ್ಯಳಾಗಿ ಗುರುತಿಸಿಕೊಳ್ಳತೊಡಗಿದ್ದಳು. ರವಿ ಕಾನಾನ ಎಲ್ಲಾ ಬೇನಾಮಿ ಆಸ್ತಿಯನ್ನು ನೋಡಿಕೊಳ್ಳುವ ಹೊಣೆ ಈಕೆಯದ್ದಾಗಿತ್ತು.
ರವಿ ಕಾನಾ ಕಾಜಲ್ ಜಾಗೆ ದಕ್ಷಿಣ ದೆಹಲಿಯಲ್ಲಿನ ಪ್ರತಿಷ್ಠಿತ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿ ನೂರು ಕೋಟಿ ರೂಪಾಯಿ ಮೌಲ್ಯದ ಮೂರು ಮಹಡಿಗಳ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದ. ಬುಧವಾರ ಈ ಐಶಾರಾಮಿ ಬಂಗಲೆ ಮೇಲೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಕಾಜಲ್ ಮತ್ತು ಆಕೆಯ ನೌಕರರು ಪರಾರಿಯಾಗಿದ್ದರು. ನಂತರ ಪೊಲೀಸರು ಬಂಗಲೆಗೆ ಬೀಗ ಮುದ್ರೆ ಒತ್ತಿದ್ದರು.