ಅಮೃತಸರ: ಪಂಜಾಬಿ ಭಾಷೆಯ ಜನಪ್ರಿಯ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲಾ (28ವರ್ಷ) ಅವರನ್ನು ಗುಂಡು ಹಾರಿಸಿ ಹತ್ಯೆಗೈದಿರುವ ಘಟನೆ ಕುರಿತಂತೆ ಕೆನಡಾ ಮೂಲದ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಹೊಣೆ ಹೊತ್ತುಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಉತ್ತರ ಕನ್ನಡದ ಅಂಕೋಲಾಕ್ಕೂ ಸಿಕ್ಕಿಂ ರಾಜ್ಯಕ್ಕೂ ಸಂಪರ್ಕ ಸೇತುವೆಯಾದ ಕರಿಈಸಾಡು ಮಾವು
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ಸಹಚರ ಗೋಲ್ಡಿ ಬ್ರಾರ್ ಸಿಧು ಮೂಸೆವಾಲಾ ಅವರನ್ನು ಹತ್ಯೆಗೈದಿರುವುದಾಗಿ ವರದಿ ವಿವರಿಸಿದೆ. ಕಳೆದ ವರ್ಷ ಅಕಾಲಿದಳದ ಯುವ ಮುಖಂಡ ವಿಕ್ಕಿ ಮಿಡ್ಡುಖೇರಾ ಅವರ ಹತ್ಯೆಯಾಗಿದ್ದು, ಈ ಘಟನೆಯಲ್ಲಿ ಮೂಸೆವಾಲಾ ಮ್ಯಾನೇಜರ್ ಶಗನ್ ಪ್ರೀತ್ ಶಾಮೀಗಾಗಿದ್ದ. ಬಳಿಕ ಶಗನ್ ಪ್ರೀತ್ ಆಸ್ಟ್ರೇಲಿಯಾಕ್ಕೆ ಪರಾರಿಯಾಗಿದ್ದ. ಮಿಡ್ಡುಕೇರ್ ಕೊಲೆಗೆ ಪ್ರತೀಕಾರವಾಗಿ ಮೂಸೆವಾಲಾ ಹತ್ಯೆ ನಡೆದಿದೆ ಎಂದು ಪಂಜಾಬ್ ಡಿಜಿಪಿ ವಿ.ಕೆ.ಭಾವ್ರಾ ತಿಳಿಸಿದ್ದಾರೆ.
ಭಾನುವಾರ (ಮೇ 29) ಪಂಜಾಬ್ ನ ಮಾನ್ಸಾ ಜಿಲ್ಲೆಯ ಜವಾಹರ್ ಕೆ ಎಂಬಲ್ಲಿ ಮೂಸೆವಾಲಾ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈಯಲಾಗಿತ್ತು. ಮೂಸೆವಾಲಾ ಸೇರಿದಂತೆ 424 ಮಂದಿ ವಿವಿಐಪಿಗಳಿಗೆ ನೀಡಲಾಗಿದ್ದ ಭದ್ರತೆಯನ್ನು ಪಂಜಾಬ್ ಸರ್ಕಾರ ವಾಪಸ್ ಪಡೆದ ಮಾರನೇ ದಿನವೇ ಈ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಯಾರೀತ ಗೋಲ್ಡಿ ಬ್ರಾರ್?
2021ರ ಮಾರ್ಚ್ ನಲ್ಲಿ ಫರೀದ್ ಕೋಟ್ ನಲ್ಲಿ ಯುವ ಕಾಂಗ್ರೆಸ್ ಮುಖಂಡ ಗುರ್ಲಾಲ್ ಸಿಂಗ್ ಪೆಹಲ್ವಾನ್ ಅವರನ್ನು ಹತ್ಯೆಗೈದ ಪ್ರಕರಣದಲ್ಲಿ ಗೋಲ್ಡಿ ಬ್ರಾರ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು.
ಮಾಧ್ಯಮಗಳ ವರದಿ ಪ್ರಕಾರ, ತನ್ನ ಸೋದರ ಸಂಬಂಧಿ ಗುರ್ಲಾಲ್ ಬ್ರಾರ್ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಗೋಲ್ಡಿ ಬ್ರಾರ್ ಜೈಲಿನಲ್ಲಿದ್ದ ಗ್ಯಾಂಗ್ ಸ್ಟರ್ ಬಿಷ್ಣೋಯಿ ನೆರವಿನೊಂದಿಗೆ ಗುರ್ಲಾಲ್ ಸಿಂಗ್ ಹತ್ಯೆಗೆ ಸಂಚು ರೂಪಿಸಿರುವುದಾಗಿ ತಿಳಿಸಿದೆ. ಕೆನಡಾದಲ್ಲಿ ನೆಲೆಸಿರುವ ಬಟಿಂಡಾ ನಿವಾಸಿ ಗೋಲ್ಡಿ ಬ್ರಾರ್ ಭಾರತದಲ್ಲಿ ಹಲವಾರು ಕೊಲೆ ಕೃತ್ಯಗಳಲ್ಲಿ ಭಾಗಿಯಾಗಿದ್ದ.