ಚೆನ್ನೈ: ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲಾ ಒಂದು ವೈರಲ್ ವಿಡಿಯೋಗಳು ಪ್ರತಿನಿತ್ಯ ಕುತೂಹಲ ಕೆರಳಿಸುತ್ತವೆ. ಕೆಲವೊಂದು ವಿಡಿಯೋಗಳು ರೋಮಾಂಚನ ಸೃಷ್ಟಿಸಿದರೆ, ಮತ್ತೆ ಕೆಲವು ‘ಹೀಗೂ ಉಂಟೇ?” ಎಂಬ ರೀತಿಯಲ್ಲಿ ಮೂಗಿನ ಮೇಲೆ ಬೆರಳಿಡುವುಂತೆ ಮಾಡುತ್ತದೆ. ಇದೀಗ ಅಂತಹದ್ದೇ ಒಂದು ವಿಡಿಯೋ ಎಲ್ಲಡೆ ಹರಿದಾಡುತ್ತಿದ್ದು ನೋಡುಗರಿಗೆ ದಿಗ್ಭ್ರಮೆ ಮೂಡಿಸಿದ್ದು ಮಾತ್ರವಲ್ಲದೆ ಇದೇಗೆ ಸಾಧ್ಯ ? ಎಂಬ ಪ್ರೆಶ್ನೆ ಹುಟ್ಟುವಂತೆ ಮಾಡಿದೆ.
ಟೆಸ್ಲಾ ಕಂಪೆನಿ ಸ್ವಯಂ ಚಾಲನಾ ಕಾರುಗಳನ್ನು ತಯಾರಿಸುತ್ತಿರುವ ವಿಷಯ ನಿಮಗೆ ತಿಳಿದಿರಬಹುದು. ಆದರೆ ತಂತ್ರಜ್ಞಾನವು ಇನ್ನೂ ಭಾರತಕ್ಕೆ ತಲುಪಿಲ್ಲ. ಅದಾಗ್ಯೂ ಭಾರತದಲ್ಲಿನ ಕಾರೊಂದು ಯಾವುದೇ ಡ್ರೈವರ್ ಸಹಾಯವಿಲ್ಲದೆ ಚಲಿಸಿದೆ. ಇದೇಗೆ ಸಾಧ್ಯ? ಅದು ಯಾವುದೋ ಸ್ವಯಂಚಾಲಿತ ಆಧುನಿಕ ಕಾರಿರಬೇಕೆಂದು ನೀವಂದುಕೊಂಡರೇ, ನಿಮ್ಮ ಊಹೆ ತಪ್ಪು !
ನಿಮಗೆ ಪ್ರೀಮಿಯರ್ ಪದ್ಮಿನಿ ಕಾರು ನೆನಪಿರಬೇಕು. ಇದನ್ನು ಫಿಯೆಟ್ ಕಾರು ಎಂದು ಕೂಡ ಕರೆಯುತ್ತಾರೆ. ಒಂದು ಕಾಲದಲ್ಲಿ ಇದು ರಸ್ತೆಯಲ್ಲಿ ಚಲಿಸುತ್ತಿದ್ದರೇ ದಾರಿಹೋಕರು ಕೂಡ ನೋಡುತ್ತಾ ನಿಂತುಬಿಡುತ್ತಿದ್ದರು. ಆ ಮಟ್ಟಿಗೆ ಇದು ಜನಪ್ರಿಯವಾಗಿತ್ತು. ಕಾಲಬದಲಾದಂತೆ ತೆರೆಮೆರೆಗೆ ಸರಿದ ಈ ಕಾರು ಜಗ್ಗೇಶ್ ಅಭಿನಯದ ‘ಪ್ರೀಮಿಯರ್ ಪದ್ಮಿನಿ ಸಿನಿಮಾ’ ಬಂದಾಗ ಮತ್ತೆ ಮುನ್ನೆಲೆಗೆ ಬಂದಿತ್ತು. ಇದೀಗ ಮತ್ತೊಮ್ಮೆ ಈ ಕಾರು ಸುದ್ದಿ ಮಾಡುತ್ತಿದ್ದು ಅದು ಕೂಡ ಸ್ವಯಂಚಾಲಿತವಾಗಿ ಚಲಿಸುವ ಮೂಲಕ.
ಹೌದು ! ಹೆದ್ದಾರಿಯಲ್ಲಿ ಕಾರೊಂದು ವೇಗವಾಗಿ ಚಲಿಸುತ್ತಿತ್ತು. ಆಶ್ಚರ್ಯದ ಸಂಗತಿಯೆಂದರೇ ಆ ಕಾರಿಗೆ ಡ್ರೈವರ್ ಇರಲಿಲ್ಲ. ಪ್ಯಾಸೆಂಜರ್ ಸೀಟ್ ನಲ್ಲಿ ಮಾತ್ರ ಮಾಸ್ಕ್ ಧರಿಸಿದ ಓರ್ವ ವ್ಯಕ್ತಿ ನಿರಾತಂಕವಾಗಿ ಕುಳಿತಿದ್ದರು. ಇವರ ಬಳಿಯೂ ಕೂಡ ಸ್ಟೇರಿಂಗ್ ಇರಲಿಲ್ಲ. ಕಾರು ಯಾವುದೇ ವ್ಯಕ್ತಿಯ ನಿಯಂತ್ರಣದಲ್ಲಿರದೇ ಸ್ವಯಂಚಾಲಿತವಾಗಿ ಚಲಿಸುತ್ತಿರುವುದನ್ನು ಕಂಡ ಹಿಂದಿನ ಕಾರಿನವರು ಆಶ್ಚರ್ಯಚಕಿತರಾಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
ಈ ಕೂತೂಹಲಕಾರಿ ಘಟನೆ ನಡೆದಿರುವುದು ತಮಿಳುನಾಡಿನಲ್ಲಿ ಎನ್ನಲಾಗಿದೆ. ಟ್ಯಾಗೋರ್ ಚೆರ್ರಿ ಎನ್ನುವವರು ಇದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು ಸಾಕಷ್ಟು ವೈರಲ್ ಆಗಿದೆ. ಮಾತ್ರವಲ್ಲದೆ ನೆಟ್ಟಿಗರು ಕೂಡ ಅಚ್ಚರಿಯನ್ನು ವ್ಯಕ್ತಪಡಿಸಿದ್ದು, ಕಾರನ್ನು ಯಾರು ಚಲಾಯಿಸುತ್ತಿರಬಹುದು? ಎಂದು ಅಲೋಚಿಸುತ್ತಿದ್ದಾರೆ. ಮಾತ್ರವಲ್ಲದೆ ದೆವ್ವದ ಕರಾಮತ್ತು ಇರಬಹುದೇ ಎಂಬ ರೀತಿಯಲ್ಲೂ ಚರ್ಚೆ ನಡೆಸಿದ್ದಾರೆ.
ಇದರ ರಹಸ್ಯ ಭೇಧಿಸಲು ಹೊರಟ ಕೆಲವರು, ಪ್ಯಾಸೆಂಜರ್ ಸೀಟ್ ನಲ್ಲಿ ಕುಳಿತ ವ್ಯಕ್ತಿಯೇ ಕಾರನ್ನು ನಿಯಂತ್ರಿಸುತ್ತಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಡ್ರೈವಿಂಗ್ ಸ್ಕೂಲ್‌ಗಳಲ್ಲಿ ಬಳಸುವ ವಾಹನಗಳಲ್ಲಿ ಎರಡು ಕಡೆ ಪೆಡಲ್ ವ್ಯವಸ್ಥೆ ಇರುತ್ತದೆ. ಹೊಸದಾಗಿ ಕಾರು ಕಲಿಯುವವರಿಗೆ ಕಾರನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಲ್ಲಿ ಸಹ-ಚಾಲಕನು ತನ್ನ ಸೀಟಿನ ಕೆಳಗಿರುವ ಪೆಡಲ್‌ಗಳನ್ನು ಬಳಸಿ ಕಾರನ್ನು ಕಂಟ್ರೋಲ್ ಮಾಡುತ್ತಾನೆ. ಈ ಕಾರಿನಲ್ಲಿಯೂ ಇದೇ ರೀತಿಯ ಪೆಡಲ್ ಗಳಿರುವ ಸಾಧ್ಯತೆಗಳಿವೆ. ಇದರಿಂದ ಸಹ-ಚಾಲಕನ ಸೀಟಿನಲ್ಲಿದ್ದವರು ಆಕ್ಸಲರೇಟರ್, ಕ್ಲಚ್ ಹಾಗೂ ಬ್ರೇಕ್ ಗಳನ್ನು ಕಂಟ್ರೋಲ್ ಮಾಡಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ.