Advertisement

Anti-Bullying Squad…13ನೇ ವಯಸ್ಸಿನಲ್ಲೇ ಆ್ಯಪ್ ಕಂಡು ಹಿಡಿದ ದಿಟ್ಟೆ…ಯಾರೀಕೆ ಅನುಷ್ಕಾ?

04:22 PM Mar 05, 2023 | ಸುಹಾನ್ ಶೇಕ್ |

ಸ್ಟೂಡೆಂಟ್ ಲೈಫ್ ನ್ನು ಗೋಲ್ಡನ್ ಲೈಫ್ ಎಂದು ಕರೆಯುತ್ತೇವೆ. ಆ ಸಮಯದಲ್ಲಿ ಸಿಗುವ ಸ್ನೇಹಿತರು, ಶಿಕ್ಷಕರು, ನೆನಪುಗಳು ಎಂದಿಗೂ ಮರೆಯಲಾಗುವುದಿಲ್ಲ. ಆದರೆ ಈ ಸಮಯದಲ್ಲಿ ಸಂತಸದೊಂದಿಗೆ ಎಂದಿಗೂ ಮರೆಯಲಾಗದ ಕೆಲವೊಂದಿಷ್ಟು ಘಟನೆಗಳು ಕೂಡ ನಡೆಯುತ್ತವೆ. ಸೀನಿಯರ್ ,ಜೂನಿಯರ್ ನಲ್ಲಿ ಕೆಲವೊಮ್ಮೆ ತಮಾಷೆಗಳು ನಡೆಯುವುದುಂಟು. ಈ ತಮಾಷೆಯಲ್ಲೇ ಮುಗ್ಧರಾಗಿ ವಿದ್ಯಾರ್ಥಿಗಳಿಗೆ ಹೀಯಾಳಿಸಿ ಅವರನ್ನು ಕುಗ್ಗಿಸುತ್ತೇವೆ.

Advertisement

ಗುರುಗ್ರಾಮ್ ಮೂಲದ 14 ವರ್ಷದ  ಅನುಷ್ಕಾ ಜಾಲಿ  ವಿದ್ಯಾರ್ಥಿ ಜೀವನದಲ್ಲಿ ಹೀಗೆಯೇ ಆಯಿತು. ಮುಗ್ದೆಯಾಗಿ ತಾನಾಯಿತು, ಕಲಿಕೆಯಾಯಿತೆಂದು ಸುಮ್ಮನೆ ‌ಇರುತ್ತಿದ್ದ ಅನುಷ್ಕಾ ಅವರಿಗೆ ತರಗತಿ ಸಹ ವಿದ್ಯಾರ್ಥಿಗಳು ಆಗಾಗ ಹೀಯಾಳಿಸಿ ತಮಾಷೆ ಮಾಡುತ್ತಿದ್ದರು ( ಬುಲ್ಲಿಂಗ್)  ಎಷ್ಟು ಎಂದರೆ ಕೆಲ ಸಲ ಅನುಷ್ಕಾ ಅವರ ಬಳಿಯೇ ಸಹ ವಿದ್ಯಾರ್ಥಿಗಳು ತಮ್ಮ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದರು.

ಆದರೆ ಇದೆಲ್ಲಕ್ಕಿಂತ 8 ವರ್ಷದವಳಿದ್ದಾಗ ಅನುಷ್ಕಾ ಅವರ ವಿದ್ಯಾರ್ಥಿ ಜೀವನದಲ್ಲಿ ಎಂದೂ ಮರೆಯದ ಒಂದು ಘಟನೆ ನಡೆಯಿತು. ತರಗತಿ ಪಾಠ ಮುಗಿದ ಬಳಿಕ ಕೆಲ ವಿದ್ಯಾರ್ಥಿನಿಯರು ಅನುಷ್ಕಾಳ ಪ್ಯಾಂಟ್ ಜಾರಿಸುತ್ತಾರೆ. ಇದು ಅನುಷ್ಕಾಳ ಮನಸ್ಸಿಗೆ ತುಂಬಾ ನೋವು ಕೊಡುತ್ತದೆ. ಅಳುತ್ತಾ ಮನಸ್ಸನ್ನು ಗಟ್ಟಿಯಾಗಿಸಿ ಮನೆಗೆ ಹೋಗಿ ಇದನ್ನು ‌ಮನೆಯಲ್ಲಿ ಅಪ್ಪ – ಅಮ್ಮನ ಜೊತೆ ಹಂಚಿಕೊಳ್ಳುತ್ತಾರೆ. ನನ್ನ ಹಾಗೆ ಅದೆಷ್ಟೋ‌ ವಿದ್ಯಾರ್ಥಿಗಳಿಗೆ ಇದೇ ರೀತಿ ಆಗಿರಬಹುದೆಂದು ಅಂದುಕೊಳ್ಳುತ್ತಾರೆ.

ಇದೇ ಆಲೋಚನೆಯಲ್ಲಿದ್ದ ಅನುಷ್ಕಾ ತರಗತಿಗಳನ್ನು ದಾಟುತ್ತಾ ಸಹ ವಿದ್ಯಾರ್ಥಿಗಳ ಹೀಯಾಳಿಸುವಿಕೆಗೆ ತಕ್ಕ ಉತ್ತರವನ್ನು ನೀಡುತ್ತಾರೆ. ಅವರು ತಮಾಷೆ ಮಾಡಿದರೆ ಅವರಿಗೆ ವಿರುದ್ದವಾಗಿ ಮುಂದೆ ನಿಂತು ಪ್ರಶ್ನಿಸುವಷ್ಟು ಧೈರ್ಯ ತಂದುಕೊಂಡು, ಬುಲ್ಲಿಂಗ್ ಎದುರಿಸುವ ವಿದ್ಯಾರ್ಥಿಗಳ ಬೆನ್ನ ಹಿಂದೆ ನಿಲ್ಲುತ್ತಾರೆ. ಬುಲ್ಲಿಂಗ್ ಮಾಡುವುದು ತಪ್ಪು, ಹಾಗೆ ಆದರೆ ಸಂಬಂಧಪಟ್ಟವರಿಗೆ ಹೇಳಿ ಎಂದು ಅನೇಕರಿಗೆ ಅನುಷ್ಕಾ ಹೇಳಿ, ಅವರ ಜೊತೆ ನಿಲ್ಲುತ್ತಾರೆ.

ತಂದೆ – ತಾಯಿಯ ಸಹಕಾರದಿಂದ 2018 ರಲ್ಲಿ ಅನುಷ್ಕಾ ‘ಆ್ಯಂಟಿ ಬುಲ್ಲಿಂಗ್’ ಎನ್ನುವ ವೆಬ್ ಸೈಟ್ ವೊಂದನ್ನು ಆರಂಭಿಸುತ್ತಾರೆ. ಇಷ್ಟು ದಿನ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಬುಲ್ಲಿಂಗ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ  ಅನುಷ್ಕಾ ಈಗ ಬುಲ್ಲಿಂಗ್ ಬಗ್ಗೆ ಜಾಗ್ರತಿಯನ್ನು ತಮ್ಮ ವೆಬ್ ಸೈಟ್ ಮೂಲಕ ಮಾಡುತ್ತಿದ್ದಾರೆ. ಯಾರಿಗಾದರೂ ಬುಲ್ಲಿಂಗ್ ನಂತಹ ಸಮಸ್ಯೆ ಆದರೆ ಅದನ್ನು ವೆಬ್ ಸೈಟ್  ನಲ್ಲಿ ಅನುಭವ ಬರೆದು ದೂರು ದಾಖಲು ಮಾಡುವಂತೆ ಹಾಕಲು ಅವಕಾಶವಿತ್ತು.

Advertisement

ಇದಾದ ಬಳಿಕ ವಿವಿಧ ಶಾಲೆಯಲ್ಲಿ ಬುಲ್ಲಿಂಗ್ ಜಾಗೃತಿ ಬಗ್ಗೆ ಅನೇಕ ಸೆಷನ್ಸ್ ಗಳನ್ನು ಆಯೋಜನೆ ಮಾಡುತ್ತಾರೆ. ಬುಲ್ಲಿಂಗ್ ಗೆ ಒಳಗಾದ ಸಂತ್ರಸ್ತರಿಗೆ ಕೌನ್ಸಿಲ್ ನೀಡಲು ವೆಬ್ ಸೈಟ್ ನಲ್ಲಿ ನುರಿತ ವೈದ್ಯರೂ ಇದರಲ್ಲಿ ‌ಇದ್ದಾರೆ.

2021 ರಲ್ಲಿ ಅನುಷ್ಕಾ ತನ್ನ ವೆಬ್ ಸೈಟ್ ಇನ್ನಷ್ಟು ಅಭಿವೃದ್ಧಿ ಪಡಿಸಿ ‘ಕವಚ್’ ಎನ್ನುವ ಮೊಬೈಲ್ ಆ್ಯಪನ್ನು ಲಾಂಚ್ ಮಾಡುತ್ತಾರೆ. ಇದರಲ್ಲಿ ಬುಲ್ಲಿಂಗ್ ಆದ ಸಂತ್ರಸ್ತರು ಹೆಸರು ಹಾಕದೆ ದೂರು ದಾಖಲಿಸಲು ಅವಕಾಶವಿತ್ತು. ಶಾಲೆಯ ಆಡಳಿತ ಮಂಡಳಿಗೆ ಇಂಥ ಪ್ರಕರಣವನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಇದು ಸಹಾಯ ಆಗುತ್ತದೆ.

ಜನಪ್ರಿಯ ಟಿವಿ ಶೋ ‘ಶಾರ್ಕ್ ಟ್ಯಾಂಕ್’ ಸೀಸನ್ 1 ರಲ್ಲಿ ತನ್ನ ‘ಕವಚ್ ಆ್ಯಪ್’ ಹಿಡಿದುಕೊಂಡು ಹೋಗುತ್ತಾರೆ. ‘ಕವಚ್’ ಬಗ್ಗೆ ಹೇಳಿ ಅದರ ಉಪಯೋಗವನ್ನು ತಿಳಿಸಿ ತೀರ್ಪುಗಾರರಿಂದ 50 ಲಕ್ಷ ರೂ. ಪಡೆದುಕೊಳ್ಳುತ್ತಾರೆ. ಶಾದಿ.ಕಾಂ ಸ್ಥಾಪಕ ಅನುಪಮ್ ಮಿತ್ತಲ್, ‘ಬೋಟ್’ ಸ್ಥಾಪಕ ಅಮನ್ ಗುಪ್ತ ‘ಕವಚ್’ ಮೆಚ್ಚಿ ಫಂಡಿಂಗ್ ಮಾಡುತ್ತಾರೆ.

ಇಷ್ಟು ಮಾತ್ರವಲದೇ ಅನುಷ್ಕಾಳ ಪ್ರತಿಭೆಗೆ 2022 ರಲ್ಲಿ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ್ ಪುರಸ್ಕಾರ್’  ಪ್ರಶಸ್ತಿಯನ್ನು ಗಣರಾಜ್ಯದ ದಿನ ರಾಷ್ಟ್ರಪತಿ ದ್ರೌಪದಿ ಅವರಿಂದ ಪಡೆದುಕೊಳ್ಳುತ್ತಾರೆ‌. ಇದುವರಗೆ ಸುಮಾರು 24 ಸಾವಿರಕ್ಕೂ ಹೆಚ್ಚಿನ ಶಾಲೆಗಳಲ್ಲಿ,  ಲಕ್ಷಾಂತರ ವಿದ್ಯಾರ್ಥಿಗಳಿಗೆ ಬುಲ್ಲಿಂಗ್ ಜಾಗೃತಿ, ಮಾಹಿತಿಯನ್ನು ತಮ್ಮ ಮೂರನೇ ಕ್ಲಾಸ್ ನ ಅನುಭವವನ್ನು ಹೇಳಿ ಅನುಷ್ಕಾ ಮೂಡಿಸುತ್ತಿದ್ದಾರೆ. 1 ಗಂಟೆಗೂ ಅಧಿಕ ಸೆಷನ್ಸ್ ಗಳನ್ನು ನೀಡುತ್ತಿದ್ದಾರೆ‌. ಸದ್ಯ ಅನುಷ್ಕಾ  ‘ಕವಚ್ 2.0’ ಆ್ಯಪ್ ಅಭಿವೃದ್ಧಿಯಲ್ಲಿ ‌ನಿರತರಾಗಿದ್ದಾರೆ. ಇದು ಅಪ್ರಾಪ್ತ ಮೆಂಟಲ್ ಹೆಲ್ತ್ ಕುರಿತು ಕೆಲಸ ಮಾಡುವ ಆ್ಯಪ್ ಆಗಿದೆ.

– ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next