ಬೆಳಗಾವಿ: ಮೋದಿ ಅವರು ನನ್ನ ರಿಮೋಟ್ ಕಟ್ರೋಲ್ ಬೇರೆಯವರ ಬಳಿ ಇದೆ ಎಂದಿದ್ದಾರೆ. ಹಾಗಾದರೆ ನಿಮ್ಮ ನಡ್ಡಾ ಅವರ ರಿಮೋಟ್ ಕಂಟ್ರೋಲ್ ಯಾರ ಬಳಿ ಇದೆ? ಅದಾನಿ ಅವರ ಬಗ್ಗೆ ರಾಹುಲ್ ಗಾಂಧಿ ಅವರು ಪ್ರಶ್ನೆ ಕೇಳಿದರೆ ಅದನ್ನು ಕಡತದಿಂದ ತೆಗೆದು ಹಾಕುತ್ತಾರೆ.ದೇಶದಲ್ಲಿ ಪ್ರಜಾಪ್ರಭುತ್ವವಿಲ್ಲ, ಜಾತಿವಾದ, ತಾರತಮ್ಯವಿದೆ ಎಂದು ಹೇಳಿದರೆ ಅದು ತಪ್ಪಾ? ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಸೋಮವಾರ ನಡೆದ ಯುವ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿ, ”ನಾನು ಎಐಸಿಸಿ ಅಧ್ಯಕ್ಷನಾದ ನಂತರ ಮೊದಲ ಬಾರಿಗೆ ಬೆಳಗಾವಿಯ ಪವಿತ್ರ ಭೂಮಿಯ ಮೇಲೆ ಕಾಲಿಟ್ಟಿದ್ದೇನೆ.ಮಹಾತ್ಮಾ ಗಾಂಧೀಜಿ ಅವರು ಇದೇ ನೆಲದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು.ತಾವೆಲ್ಲರೂ ಸೇರಿ ಈಗ ನನ್ನನ್ನು ಅದೇ ಸ್ಥಾನದಲ್ಲಿ ಕೂರಿಸಿದ್ದೀರಿ, ಅದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದರು.
”ಒಂದು ಕಾಲದಲ್ಲಿ ಬೆಳಗಾವಿ ಕಾಂಗ್ರೆಸ್‌ಗೆ ಶಕ್ತಿ ತುಂಬಿದ್ದ ಜಿಲ್ಲೆ. ಇಲ್ಲಿ ನಾವು 15 – 16 ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದೇವು. ಇಂದು ಇಲ್ಲಿ ಸೇರಿರುವ ಜನರು, ಮುಖಂಡರ ಒಗ್ಗಟ್ಟು ನೋಡಿದರೆ ಮುಂಬರುವ ಚುನಾವಣೆಯಲ್ಲಿ 18ಕ್ಕೆ 18 ಸ್ಥಾನಗಳಲ್ಲೂ ಗೆಲ್ಲಿಸುತ್ತೀರಿ ಎಂದು ನಂಬುತ್ತೇನೆ.ಈ ಬಾರಿ ವಾತಾವರಣವೂ ಅದಕ್ಕೆ ಪೂರಕವಾಗಿದೆ” ಎಂದರು.
”ಕರ್ನಾಟಕದಲ್ಲಿ ಯಾವ ಕಾಲದಲ್ಲೂ ಇಷ್ಟೊಂದು ಭ್ರಷ್ಟಾಚಾರ, ದುರಾಡಳಿತ ಇರಲಿಲ್ಲ.ಆದರೆ ಈಗ ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ನಡೆಯುತ್ತಿದೆ, ಹೀಗೆಂದು ಹೇಳಿದ್ದು ಸ್ವತಃ ಈ ಸಮಸ್ಯೆ ಎದುರಿಸುತ್ತಿರುವ ಗುತ್ತಿಗೆದಾರರು! ಅವರು ನೇರವಾಗಿ ಪ್ರಧಾನಮಂತ್ರಿಗಳಿಗೆ, ಅಮಿತ್ ಶಾ ಅವರಿಗೇ ಪತ್ರ ಬರೆದು 40% ಕಮಿಷನ್ ಬಗ್ಗೆ ದೂರಿದ್ದಾರೆ” ಎಂದರು.
”ರಾಹುಲ್ ಗಾಂಧಿ ಅವರು 46 ದಿನದ ಹಿಂದೆ ಹೇಳಿದ ಮಾತಿನ ಬಗ್ಗೆ ನಿನ್ನೆ ಪೋಲೀಸರು ಸಾಕ್ಷಿ ಕೇಳಿಕೊಂಡು ಅವರ ಮನೆ ಮುಂದೆ ಹೋಗಿದ್ದಾರೆ. ಆದರೆ ಕರ್ನಾಟಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ನೀಡಿದರೂ ತನಿಖೆ ನಡೆಸುತ್ತಿಲ್ಲ! 100 ರೂ. ಕಾಮಗಾರಿ ಇದ್ದರೆ 200 ರೂ. ಅಂದಾಜು ನಿಗದಿ ಮಾಡಿ ಕಮಿಷನ್ ಪಡೆಯುತ್ತಿದ್ದಾರೆ” ಎಂದು ಕಿಡಿ ಕಾರಿದರು.
”ಕಾಂಗ್ರೆಸ್ ಪಕ್ಷ ಗೃಹಲಕ್ಷ್ಮೀ , ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆ ಘೋಷಿಸಿದೆ.2 ಕೋಟಿ ಉದ್ಯೋಗದ ಮಾತು ಬಿಡಿ, ದೇಶದಲ್ಲಿ 50 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದರೂ ಅದನ್ನೂ ತುಂಬುತ್ತಿಲ್ಲ.ರಾಜ್ಯದಲ್ಲಿ 2.50 ಲಕ್ಷ ಉದ್ಯೋಗ ಖಾಲಿ ಇದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಹುದ್ದೆ ತುಂಬುತ್ತೇವೆ” ಎಂದು ಭರವಸೆ ನೀಡಿದರು.