ಕೆಂಗೇರಿ: ನಾಡಪ್ರಭು ಕೆಂಪೇಗೌಡರ ಕಲ್ಪನೆಯನ್ನು ಸಾಕಾರಗೊಳಿಸುವ ಉದ್ದೇಶದಿಂದ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಕೆರೆಗಳನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣಗಳನ್ನಾಗಿ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಶಾಸಕ ಮುನಿರತ್ನ ತಿಳಿಸಿದರು.
ಮಲ್ಲತ್ತಹಳ್ಳಿ ಕೆರೆಗೆ ಸೇರುತ್ತಿದ್ದ ಒಳಚರಂಡಿ ನೀರನ್ನು ಸಂಸ್ಕರಿಸುವ 16ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಅವರು, “ಮಲ್ಲತ್ತಹಳ್ಳಿ ಕೆರೆಯನ್ನು ಅಭಿವೃದ್ಧಿ ಪಡಿಸಿ, ಕೆರೆ ಅಂಗಳದಲ್ಲಿ ಕೆಂಪೇಗೌಡರು, ಡಾ.ಶಿವಕುಮಾರಸ್ವಾಮೀಜಿ, ಡಾ.ಬಾಲಗಂಗಾಧರನಾಥ ಸ್ವಾಮೀಜಿ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗುವುದು.
ಈ ಮೂಲಕ ಕೆರೆಯನ್ನು ಪ್ರವಾಸಿ ಕೇಂದ್ರವನ್ನಾಗಿಸಲಾಗುವುದು. ಕೆರೆಯಲ್ಲಿ ದೋಣಿ ವಿಹಾರಕ್ಕೂ ಅವಕಾಶ ಕಲ್ಪಿಸಲಾಗುವುದು. ಇದನ್ನು ಥೀಮ್ ಪಾರ್ಕ್ ಮಾಡಲಾಗುವುದು,’ ಎಂದು ತಿಳಿಸಿದರು. ಕೊಳವೆ ಬಾವಿ ಮೂಲಕ ಮಲ್ಲತ್ತಹಳ್ಳಿ ಬಡಾವಣೆಗೆ ಕುಡಿಯುವ ನೀರು ಒದಗಿಸುವ ಕಾರ್ಯಕ್ರಮಕ್ಕೂ ಶಾಸಕರು ಚಾಲನೆ ನೀಡಿದರು.
ಅಲ್ಲದೆ, ಐಟಿಐ ಮತ್ತು ಎಂಪಿಎಂ ಬಡಾವಣೆಯ ರಸ್ತೆಗಳಿಗೆ ಡಾಂಬರೀಕರಣ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯ ಕಾಮಗಾರಿಗೂ ಚಾಲನೆ ನೀಡಿದರು. ಸ್ಥಳೀಯ ಬಿಬಿಎಂಪಿ ಸದಸ್ಯೆ ಜಿ.ಡಿ.ತೇಜಸ್ವಿನಿ ಸೀತಾರಾಮಯ್ಯ ಕಾರ್ಯಕ್ರಮದಲ್ಲಿ ಮಾತನಾಡಿ ಶಾಸಕರು ಕೈಗೊಂಡಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ನೆಹರು ಯುವ ಕೇಂದ್ರದ ಸದಸ್ಯ ಎಂ.ಮಂಜುನಾಥ್, ಬಿಬಿಎಂಪಿ ಸದಸ್ಯ ಜಿ.ಮೋಹನ್‌ಕುಮಾರ್, ನಗರಸಭೆ ಮಾಜಿ ಅಧ್ಯಕ್ಷೆ ಶಾರದಮ್ಮ, ಮುನಿವೆಂಕಟಪ್ಪ, ಜಾnನಭಾರತಿ ನಿವಾಸಿಗಳ ಕ್ಷೇಮಾಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಪಾರ್ಥಸಾರಥಿ, ಯುವ ಮುಖಂಡ ಯೋಗೇಶ್ ಇದ್ದರು.