ಗುಂಡ್ಲುಪೇಟೆ: ಕಳೆದ 25 ದಿನಗಳಿಂದಲೂ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಬಂಡೀಪುರ ಅಭಯಾರಣ್ಯದ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಹಂಗಳ ಹಿರಿಕೆರೆ ಗುರುವಾರ ಭರ್ತಿಯಾಗಿ ಕೋಡಿ ಬಿದ್ದಿದೆ. ಕಳೆದ 4-5 ವರ್ಷದಿಂದಲೂ ಮಳೆ ಕೊರತೆಯಿಂದ ಬರಿದಾಗಿದ್ದ ಕೆರೆ ಇದೀಗ ಉತ್ತಮ ಮಳೆಯಾಗುತ್ತಿರುವ ಕಾರಣ ಹಂತ ಹಂತವಾಗಿ ತುಂಬಿ ಕೋಡಿ ಹರಿಯುತ್ತಿದೆ. ಇದರಿಂದ ಸುತ್ತಮುತ್ತಲು ಬತ್ತಿ ಹೋಗಿದ್ದ ಕೊಳವೆಬಾವಿಗಳಲ್ಲೂ ನೀರು ಬರಲಾರಂಭಿಸಿದ್ದು, ಅಂತರ್ಜಲ ವೃದ್ಧಿಯಾಗಿದೆ.
ಹಂಗಳ ದೊಡ್ಡಕೆರೆಗೆ ಕೋಡಿ ನೀರು: ಹಿರಿಕೆರೆ ತುಂಬಿ ಕೋಡಿ ಬಿದ್ದಿರುವ ಹಿನ್ನೆಲೆ ಆ ನೀರು ಕಾಲುವೆಗಳ ಮೂಲಕ ಭತ್ತಿ ಹೋಗಿದ್ದ ಹಂಗಳ ದೊಡ್ಡ ಕೆರೆಗೆ ಬಂದು ಸೇರುತ್ತಿದೆ. ಹಿರಿಕೆರೆ ಹಂಗಳ ದೊಡ್ಡ ಕೆರೆಗೆ ಪ್ರಮುಖ ಜಲ ಮೂಲವಾಗಿದ್ದು, ಇದೀಗ ಹಿರಿಕೆರೆ ಕೋಡಿ ಬಿದ್ದಿರುವುದು ಹಂಗಳ ವ್ಯಾಪ್ತಿ ಯ ರೈತರಿಗೆ ನೆಮ್ಮದಿ ತರಿಸಿದೆ. ಜೊತೆಗೆ ಗ್ರಾಮದಲ್ಲಿ ತಾಂಡವ ವಾಡು ತ್ತಿರುವ ನೀರಿನ ಸಮಸ್ಯೆ ಕಡಿಮೆಯಾಗುವುದೇ ಕಾದು ನೋಡಬೇಕಿದೆ.
ಹಿರಿಕೆರೆ ಏರಿ ಬಿರುಕು: ಸತತ ಮಳೆಯಿಂದ ತುಂಬಿ ಕೋಡಿ ಬಿದಿದ್ದ ಹಿರಿಕೆರೆ ಏರಿಯಲ್ಲಿ ಇದೀಗ ಬಿರುಕು ಕಾಣಿಸಿಕೊಂಡಿದೆ. 50ಕ್ಕೂ ಅಧಿಕ ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ಮಳೆಯಿಂದ ತುಂಬಿರುವ ಖುಷಿ ಒಂದು ಕಡೆಯಾದರೆ ಮತ್ತೂಂದೆಡೆ ಕೆರೆ ಏರಿ ಬಿರುಕು ಬಿಟ್ಟಿರುವುದು ಜನರನ್ನು ಚಿಂತೆಗೆ ದೂಡಿದೆ. ಸಂಬಂಧಪಟ್ಟ ಗ್ರಾಪಂ ಹಾಗೂ ಜಿಪಂ ಇಂಜಿನಿಯರ್ ಇತ್ತ ಗಮನ ಹರಿಸಿ ಶೀಘ್ರವಾಗಿ ಕೆರೆ ಏರಿ ಬಿರುಕು ದುರಸ್ತಿ ಪಡಿಸುವ ಕೆಲಸ ಮಾಡಬೇಕು ಎಂದು ರೈತ ಮುಖಂಡ ಹಂಗಳ ಮಾಧು ಆಗ್ರಹಿಸಿದ್ದಾರೆ.
ಇದನ್ನೂ ಓದಿ:- ಕಟ್ಟಡ ನಿರ್ಮಾಣ ಮಾಡಿದರೂ ಹಣ ನೀಡದ ಗ್ರಾಪಂ
ಅರಣ್ಯದ ಕೆರೆ-ಕಟ್ಟೆ ಬಹುತೇಕ ಭರ್ತಿ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಎಲ್ಲಾ ವಲಯಗಳಲ್ಲೂ ಸತತವಾಗಿ ಮಳೆಯಾಗುತ್ತಿರುವ ಕಾರಣ ಕಾಡಿನೊಳಗಿರುವ ಬಹುತೇಕ ಕೆರೆ, ಕಟ್ಟೆ, ಹಳ್ಳ-ಕೊಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಇದರಿಂದ ಕಾಡು ಪ್ರಾಣಿಗಳಿಗೆ ಉಪಯುಕ್ತವಾಗಿದ್ದು, ಬೇಸಿಗೆಯಲ್ಲಿ ಸಂಭವಿಸುವ ನೀರಿನ ದಾಹಕ್ಕೆ ಬ್ರೇಕ್ ಬಿದ್ದಿದೆ.
ಇನ್ನೂ ನಿರಂತರ ಮಳೆಯಾಗುತ್ತಿರುವ ಕಾರಣ ಅರಣ್ಯ ಇಲಾಖೆಯಿಂದ ನಾಟಿ ಮಾಡಿದ್ದ ಗಿಡಗಳು ಚಿಗುರೊಡೆದಿದ್ದು, ಅಭಯಾರಣ್ಯವು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಈ ಮಧ್ಯೆ ಮಳೆಯಿಂದ ಅರಣ್ಯದೊಳಗಿರುವ ರಸ್ತೆಗಳು ಕೆಸರುಮಯವಾಗಿರುವ ಹಿನ್ನೆಲೆ ಸಫಾರಿ ತೆರಳುವ ವಾಹನಗಳು ಹರಸಾಹಸದಿಂದ ಮುಂದೆ ಚಲಿಸುವಂತಾಗಿದೆ.