ಪಣಜಿ : ವಿಶ್ವವನ್ನು ಶಾಂತಿಯುತ ತಾಣವಾಗಿಸಲು ನಾವು-ಎಲ್ಲ ಸಮುದಾಯದವರು ಪರಸ್ಪರ ಪ್ರಶಂಸಿಸುವುದನ್ನು ರೂಢಿಸಿಕೊಳ್ಳಬೇಕಿದೆ. ಇದು ನಮ್ಮ ಹೊಣೆಗಾರಿಕೆಯೂ ಸಹ ಎಂದವರು ಬಾಲಿವುಡ್‌ನ ಬಿಗ್ ಬಿ ಅಮಿತಾಬ್ ಬಚ್ಚನ್.
ಕಲಾ ಅಕಾಡೆಮಿಯಲ್ಲಿ ಅವರ ಚಿತ್ರಗಳ ವಿಭಾಗ [ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಅಭಿನಂದನಾರ್ಥ ರೂಪಿಸಿರುವ ವಿಭಾಗ]ದ ಉದ್ಘಾಟನೆ ಹೊತ್ತಿನಲ್ಲಿ ಪ್ರೇಕ್ಷಕರೆದುರು ತಮ್ಮ ಅಭಿಪ್ರಾಯ ತೋಡಿಕೊಂಡವರು ಅಮಿತಾಬ್ ಬಚ್ಚನ್.
ಪ್ರಶಂಸೆ ಒಂದು ಒಳ್ಳೆಯ ಕಾರ್ಯ. ನಾವು ಸಮುದಾಯಗಳು ಈ ಒಳ್ಳೆಯ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಪರಸ್ಪರ ಒಳ್ಳೆಯದನ್ನು ಪ್ರಶಂಸಿಸುವ ಮೂಲಕ ಶಾಂತಿ ತಾಣವನ್ನು ನಿರ್ಮಿಸಬೇಕು. ಈ ವರ್ಣ, ಜಾತಿ ಹಾಗೂ ಧರ್ಮಗಳ ಲೆಕ್ಕಾಚಾರದಲ್ಲಿ ದೂರ ಉಳಿಯುವುದನ್ನು ಮತ್ತು ದೂರವಿಡುವುದನ್ನು ಮರೆಯಬೇಕು ಎಂದು ಹೇಳಿದರು.
ಇದೊಂದು ಸುವರ್ಣಾವಕಾಶ. ಅಭಿಮಾನಿಗಳ ಎದುರು ನನ್ನ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವುದಕ್ಕೆ ಧನ್ಯವಾದಗಳು ಎಂದು ಆಯೋಜಕರಿಗೆ ವಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಗೋವಾದಲ್ಲಿ ತಮ್ಮ ಚಿತ್ರಗಳ ಚಿತ್ರೀಕರಣ ಸಂದರ್ಭವನ್ನು ನೆನಪಿಸಿಕೊಂಡರು.
ಈ ವಿಭಾಗದಲ್ಲಿ ಅಮಿತಾಬ್ ಬಚ್ಚನ್‌ರ 6 ಅತ್ಯುತ್ತಮ ಚಿತ್ರಗಳು ಪ್ರದರ್ಶಿತವಾಗುತ್ತಿದ್ದು, ಪಾ ಉದ್ಘಾಟನಾ ಚಿತ್ರವಾಗಿ ಪ್ರದರ್ಶಿತಗೊಂಡಿತು. ಇದಲ್ಲದೇ ಶೋಲೆ, ದಿವಾರ್, ಬ್ಲ್ಯಾಕ್, ಪೀಕೂ ಹಾಗೂ ಬದ್ಲಾ ಸಿನಿಮಾಗಳು ಪ್ರದರ್ಶಿತವಾಗುತ್ತಿವೆ.