Advertisement

ಹಿಮಾಲಯದ ಅಮೃತವನ್ನು ಕುಡಿದವರ್ಯಾರು?

06:00 AM Apr 26, 2018 | |

ಪೋಷುವೆಂಬ ಗುರುವಿನ ಆಶ್ರಮದಲ್ಲಿ ಸಾವಿರಾರು ಶಿಷ್ಯರಿದ್ದರು. ಗುರುವು ತನ್ನೆಲ್ಲಾ ಶಿಷ್ಯರ ಮನಸ್ಸನ್ನು ಅರಿತಿದ್ದ. ದೀರ್ಘ‌ ಅಧ್ಯಯನದ ನಂತರ ಪೋಷು ಶಿಷ್ಯರಿಗೆ ಒಂದು ಪರೀಕ್ಷೆಯನ್ನು ಏರ್ಪಡಿಸಿದ. ಈ ಪರೀಕ್ಷೆಯಲ್ಲಿ ಸಫ‌ಲರಾದವರಿಗೆ ಹಿಮಾಲಯದಲ್ಲಿ  ಸನ್ಮಾನವಿದೆ ಎಂದ. ಸರಿ ಎಂದು ಶಿಷ್ಯಂದಿರು ಗುರುವಿನೊಂದಿಗೆ ಹಿಮಾಲಯಕ್ಕೆ ಪಯಣಿಸಿದರು. 

Advertisement

ಹಾದಿ ದುರ್ಗಮವಾಗಿತ್ತು. ಕಾಡು ಪ್ರಾಣಿಗಳು ಎದುರಾಗುತ್ತಿದ್ದವು. ಆದರೆ ತಮ್ಮನ್ನು ರಕ್ಷಿಸಿಕೊಳ್ಳಲು ಅವುಗಳನ್ನು ಕೊಲ್ಲುವ ಹಾಗಿಲ್ಲ ಎಂದು ಪೋಷು ಹೇಳಿಬಿಟ್ಟಿದ್ದರು. ಶಿಷ್ಯನೊಬ್ಬ ಬೆಟ್ಟ ಏಕೆ ಹತ್ತಬೇಕೆಂದು ಕೇಳಿದಾಗ ಪೋಷು “ಬೆಟ್ಟದ ತುದಿಯಲ್ಲೊಂದು ಕೊಳವಿದೆ. ಅಲ್ಲಿನ ಕೊಳವೊಂದರಲ್ಲಿ ಅಮೃತವಿದೆ. ಅದನ್ನು ಕುಡಿದೇ ಋಷಿಮುನಿಗಳು ಅಮರತ್ವವನ್ನು ಪಡೆಯುತ್ತಿದ್ದರು’ ಎಂದರು. ಅದನ್ನು ಕೇಳಿ ನಿತ್ರಾಣಗೊಂಡಿದ್ದ ಶಿಷ್ಯಂದಿರಿಗೆ ಮೈಯಲ್ಲಿ ಶಕ್ತಿ ಬಂದಂತಾಯಿತು. ವಿಶ್ರಾಂತಿಯನ್ನು ಕೊನೆಗೊಳಿಸಿ ಮತ್ತೆ ಪರ್ವತವನ್ನು ಏರತೊಡಗಿದರು.

ದಾರಿ ಮಧ್ಯ ಕಾಡು ಎದುರಾದಾಗ ಗುರು “ಇಲ್ಲಿ ಹದಿನೆಂಟು ಹೆಡೆಯ ಸರ್ಪಗಳಿವೆ. ಅದರ ಉಸಿರು ಬಡಿದರೆ ಸಾವು ಖಚಿತ’ ಎಂದ. ಹದಿನೆಂಟು ಹೆಡೆಯ ಹಾವಿನ ವಿಷಯ ಕೇಳುತ್ತಿದ್ದಂತೆ ಅರ್ಧ ಶಿಷ್ಯಂದಿರು ಹೆದರಿ ನಡುಗಿ ಪರ್ವತ ಇಳಿದು ತಮಗೆ ಅಮೃತವೂ ಬೇಡ. ಹಿಮಾಲಯದ ಸನ್ಮಾನವೂ ಬೇಡ, ಜೀವ ಉಳಿದರೆ ಸಾಕೆಂದು ಓಡತೊಡಗಿದರು. 

ಪೋಷು ನಕ್ಕು ಮುನ್ನಡೆದ. ದೈತ್ಯಾಕಾರದ ಮರಗಳು ಎದುರಾದವು. ಪೋಷು “ಅವುಗಳಿಂದ ದೂರವಿರಿ. ಅವು ಮನುಷ್ಯರ ರಕ್ತ ಕುಡಿಯುತ್ತವೆ’ ಎಂದ. ಉಳಿದ ಅರ್ಧ ಶಿಷ್ಯಂದಿರಲ್ಲಿ ಮತ್ತೂಂದಷ್ಟು ಮಂದಿ ಮುಂದುವರಿಯಲು ನಿರಾಕರಿಸಿ ಹಿಂದಕ್ಕೆ ಹೊರಟುಹೋದರು.

ಇನ್ನೇನು ಬೆಟ್ಟ ಏರಿ ಕೊಳದ ನೀರಿನ ಹತ್ತಿರ ಹೋಗಬೇಕು ಎನ್ನುವಾಗ ಪೋಷು “ಹುಷಾರು ಕೆಳಗೆ ಜ್ವಾಲಾಮುಖೀಗಳಿಂದ ಸಿಡಿದ ಸುಡುವ ಕಲ್ಲುಗಳಿವೆ. ಅವುಗಳ ಮೇಲೆ  ಕಾಲಿಟ್ಟರೆ ಸುಟ್ಟು ಬೂದಿಯಾಗುತ್ತೇವೆ. ಅದಕ್ಕೆ ತುತ್ತಾದರೆ ನಾನು ಜವಾಬ್ದಾರನಲ್ಲ. ಇದು ಬೆಂಕಿಯಂಥ ಪರೀಕ್ಷೆ’ ಎಂದ. ಮತ್ತೂಂದಷ್ಟು ಶಿಷ್ಯಂದಿರು ಊರಿಗೆ ಕಾಲ್ಕಿತ್ತರು. ಪೋಷು ಪರ್ವತದ ತುತ್ತ ತುದಿಯನ್ನೇರಿ ಹಿಂದಕ್ಕೆ ನೋಡಿದಾಗ ಅವನ ಕಣ್ಮುಂದೆ ಒಬ್ಬನೇ ಶಿಷ್ಯನಿದ್ದ. “ಯಾಕಪ್ಪ ನೀನು ಮಾತ್ರ ಉಳಿದುಕೊಂಡೆ? ಯಾಕೆ ಹಿಂದಿರುಗಲಿಲ್ಲ’ ಎಂದು ಕೇಳಿದಾಗ ಆ ಶಿಷ್ಯ ಹೇಳಿದ “ಏನೇ ಸವಾಲುಗಳು ಬಂದರೂ ಕಾಪಾಡಲು ಗುರು ನೀನಿರುವಾಗ ನನಗೇಕೆ ಅಂಜಿಕೆ?’ ಎಂದನು. ಗುರುವಿಗೆ ಹೆಮ್ಮೆಯೆನಿಸಿತು.

Advertisement

ಅಲ್ಲಿದ್ದ ಕೊಳದ ನೀರು ಮಲಿನವಾಗಿತ್ತು. ಕಲ್ಲು ಮಣ್ಣು  ಉದುರಿದ ಎಲೆಗಳಿಂದ ತುಂಬಿ ಹೋಗಿತ್ತು. ಶಿಷ್ಯನಿಗೆ ಅದರಲ್ಲಿದ್ದ ಅಮೃತದಂಥ ನೀರನ್ನು ಕುಡಿಯುವ ಸಂತಸಕ್ಕಿಂತ ಕೊಳದ ದುಃಸ್ಥಿತಿಗೆ ಮರುಕವಾಯಿತು. ಅವನು ಇಳಿದು ಎಲ್ಲವನ್ನು ಸcತ್ಛಗೊಳಿಸತೊಡಗಿದ.

     ಆಗ ಗುರುಗಳು ಒಮ್ಮೆಲೇ “ನೀನು ಪರೀಕ್ಷೆ ಗೆದ್ದುಬಿಟ್ಟೆ ಕಂದಾ… ಇಲ್ಲಿಯವರೆಗೂ ಯಾವ ನರಪಿಳ್ಳೆಯೂ ಇಲ್ಲಿಗೆ ಬಂದಿಲ್ಲ. ನನ್ನ ಗುರುಗಳು ನನಗೆ ಈ ಸರೋವರವನ್ನು ಸಾಧ್ಯವಾದರೆ ಇಳಿದು ಶುಚಿಗೊಳಿಸಿ ಬಾ ಎಂದಿದ್ದರು. ಕೊಳದ ಸ್ವಚ್ಚತೆಗೆಂದೇ  ಪರೀಕ್ಷೆ ನೆಪದಲ್ಲಿ ನಿಮ್ಮನ್ನು ಕರೆತಂದೆ. ಕೊನೆಗೆ ನೀನೊಬ್ಬನೇ ಉಳಿದೆ’ ಎನ್ನುತ್ತಿದ್ದಂತೆ ಕೊಳದಲ್ಲಿ ನೀರು ಭರ ಭರನೇ ತುಂಬಿತು. ಮೋಡಗಳಿಂದ ಮಲ್ಲಿಗೆ ಸುವಾಸನೆ ಬೀರುವ ಮಳೆ ಹನಿಗಳು ಪಟ ಪಟನೆ ಉದರತೊಡಗಿದವು. ಗುರುವಿನ ಪರೀಕ್ಷೆಯಲ್ಲಿ ಸಫ‌ಲನಾದ ಶಿಷ್ಯನೇ ಮಾನಸ. ಅವನ ಭಕ್ತಿಬಾವಕ್ಕೆ ಮೆಚ್ಚಿ ಗುರುಗಳು ಆ ಕೊಳಕ್ಕೆ ಇಟ್ಟ ಹೆಸರೇ “ಮಾನಸ ಸರೋವರ’. 

ಲಲಿತಾ ಕೆ. ಹೊಸಪ್ಯಾಟಿ

Advertisement

Udayavani is now on Telegram. Click here to join our channel and stay updated with the latest news.

Next