ಉಡುಪಿ: ದಾರಿ ಮಧ್ಯೆ ಅಸುನೀಗಿದ ಪ್ರಾಣಿಪ್ರಕ್ಷಿಗಳನ್ನು ಮಣ್ಣು ಮಾಡಿ ಮೋಕ್ಷ ನೀಡುವ ಪುಣ್ಯದ ಕೆಲಸದ ಜೊತೆಗೆ ಪರಿಸರದ ಸ್ವತ್ಛತೆಯನ್ನು ಕಾಪಾಡುವ ಕೆಲಸವೂ ಅಡಗಿದೆ. ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ಸ್ವ ಇಚ್ಛೆಯಿಂದ ತೊಡಗಿಕೊಂಡಲ್ಲಿ ಪುಣ್ಯ ಫಲಪ್ರಾಪ್ತಿಯಾಗುತ್ತದೆ ಎಂದು ಕಾರ್ಕಳ ಶಿರಡಿ ಸಾಯಿಬಾಬಾ ಮಂದಿರದ ಆಡಳಿತ ಮೊಕ್ತೇಸರ ಚಂದ್ರಹಾಸ ಸುವರ್ಣ ಹೇಳಿದರು.
ಅವರು ಗುರುವಾರ ಉಡುಪಿ ಶಂಕರಪುರ ಶ್ರೀ ದ್ವಾರಕಾಮಯಿ ಸಾಯಿ ಸಾಂತ್ವನ ಮಂದಿರದಲ್ಲಿ ಸಾಯಿ ಈಶ್ವರ್ ಸಂಕಲ್ಪದಂತೆ ವಿಶ್ವದಲ್ಲಿಯೇ ಮೊದಲ ಬಾರಿಗೆ ಎಂಬಂತೆ ಪ್ರಾಣಿ ಪಕ್ಷಿಗಳು ಅಸುನೀಗಿದಾಗ ಅವುಗಳನ್ನು ಮಣ್ಣು ಮಾಡಿ ಮೋಕ್ಷ ನೀಡುವ ವಿನೂತನ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪೆಂಡ್ನೂಲಮ್ ತಜ್ಞ ದ್ವಾರಕಾಮಯಿ ಸಾಯಿ ಸಾಂತ್ವನ ಮಂದಿರದ ಗುರೂಜಿ ಸಾಯಿ ಈಶ್ವರ್ ಅವರು ಸಾಯಿ ಭಕ್ತರಿಗೆ ಬೋಧಿಸಿ ಗ್ಲೌಸ್ ಮಾಸ್ಕ್ಗಳನ್ನು ವಿತರಿಸಿದರು.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉಡುಪಿ ಜಿ. ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಅವರು ಸಾಯಿ ಈಶ್ವರ್ ಅವರಿಗೆ ಬಾಬಾ ಅನುಗ್ರಹವಿದ್ದು, ಈ ಮಂದಿರದಲ್ಲಿ ಸಾಯಿ ಭಕ್ತರಿಗೆ ಸಂತ್ವಾನ ಅನುದಿನವೂ ಸಿಗುವಂತಾಗಲಿ ಎಂದು ಹಾರೈಸಿದರು.ನಿವೃತ್ತ ಮುಖ್ಯೋಪಾಧ್ಯಾಯಿನಿ ಕ್ಲಾರಾ ಮೆಂಡೋನ್ಸಾ, ತಾ. ಪಂ. ಸದಸ್ಯ ರಾಜೇಶ್ ಶೆಟ್ಟಿ ಪಾಂಗಾಳ, ಬೆಂಗಳೂರಿನ ಉದ್ಯಮಿ ದಯಾನಂದ ಪೂಜಾರಿ ಪರಿಸರ ಪ್ರೇಮಿ, ಸಸ್ಯತಜ್ಞ ಈಸ್ಟ್ ವೆಸ್ಟ್ ನರ್ಸರಿಯ ಎಂ.ಐ. ಮೂಸ, ಕಾರ್ಮಿಕ ಸಂಘದ ಅಧ್ಯಕ್ಷ ರವಿ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕುಂಜಾರುಗಿರಿ ಗಿರಿಜಾ ಶಾಲಾ ಮುಖ್ಯ ಶಿಕ್ಷಕ ಸುಧಾಕರ್ ಅವರು ಪೆಂಡ್ನೂಲಮ್ ಭವಿಷ್ಯ ವಾಣಿಯ ಜಗತ್ತಿನಲ್ಲಿಯೇ ನಂಬರ್ ಒನ್ ಭವಿಷ್ಯವಾಣಿಯಾಗಿದ್ದು, ಮುಂದುವರಿದ ದೇಶಗಳಲ್ಲಿ ರೋಗಿಯ ಶಸ್ತ್ರ ಚಿಕಿತ್ಸೆಗೆ ಪೆಂಡ್ನೂಲಮ್‌ನ ಸಹಾಯ ಪಡೆಯುವರು. ಗುರೂಜಿ ಅವರು ಈ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾರೆ ಎಂದರು.
ಸಾಯಿಮಂದಿರದ ಮುಖ್ಯಸ್ಥ ವಿಶ್ವನಾಥ್ ಸುವರ್ಣ, ಸುಮತಿ ಸುವರ್ಣ ಸ್ವಾಗತಿಸಿದರು. ರಾಜೇಶ್ ಆಚಾರ್ಯ ಬಿಳಿಯೂರು ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಆಚಾರ್ಯ ವಂದಿಸಿದರು.ಈ ಸಂಕಲ್ಪ ಕಾರ್ಯದಲ್ಲಿ ತೊಡಗಿಕೊಳ್ಳುವ ಎಲ್ಲರಿಗೂ ಹಾರೆ, ಕೈಗ್ಲೌಸ್, ಮಾಸ್ಕನ್ನು ಉಚಿತವಾಗಿ ವಿತರಿಸಲಾಯಿತು.