ಬೆಂಗಳೂರು: ನಾಲ್ಕು ದಶಕಗಳ ಕಾಲ ಬೆವರು ಹರಿಸಿ ಪಕ್ಷ ಕಟ್ಟಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದವರು ಯಾರು. ಪಕ್ಷ ಅಧಿಕಾರದಲ್ಲಿದ್ದಾಗಲೇ ಅವರನ್ನು ಜೈಲಿಗೆ ಕಳುಹಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಯಾರ ಷಡ್ಯಂತ್ರ. ನೀವೂ ಅದರಲ್ಲಿ ಶಾಮೀಲಾಗಿಲ್ಲವೇ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸಿದ್ದರಾಮೋತ್ಸವದಿಂದ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಅವರು, ಬಿಎಸ್ ವೈಗೆ ಮುಖ್ಯಮಂತ್ರಿ ಸ್ಥಾನದ ಆಸೆ ತೋರಿಸಿ ಅವರಿಂದಲೇ ಆಪರೇಷನ್ ಕಮಲ ಮಾಡಿಸಿದ್ದು ಯಾರು?, ಕೊನೆಗೆ ಅವರನ್ನೇ ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದು ಯಾರು. ಕೈಗೆ ಬಂದದ್ದು ಬಾಯಿಗೆ ಬಾರದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗ ಬೆಂಕಿ ಬಿದ್ದದ್ದು ಯಾರ ಹೊಟ್ಟೆಗೆ ಎಂದು ಪ್ರಶ್ನಿಸಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿತ್ಯ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಆರೋಪಗಳ ಸುರಿಮಳೆಗೈಯ್ದರೂ ಅವಹೇಳನಕಾರಿಯಾಗಿ ಮಾತನಾಡಿದರೂ ಕ್ರಮ ಕೈಗೊಳ್ಳದಂತೆ ತಡೆಯುತ್ತಿದ್ದ ಕೈಗಳು ಯಾರದ್ದು ಪ್ರಹ್ಲಾದ್ ಜೋಶಿಯವರೇ ಎಂದಿದ್ದಾರೆ.
ಲಿಂಗಾಯಿತರನ್ನು ಲಿಂಗಾಯಿತ ಮಠದ ಸ್ವಾಮಿಗಳನ್ನು ಓಲೈಸುತ್ತಾ ಪಕ್ಷ ಕಟ್ಟಿ ಈಗ ಪಕ್ಷದಲ್ಲಿರುವ ಒಬ್ಬೊಬ್ಬ ಲಿಂಗಾಯಿತರನ್ನು ಮೂಲೆಗುಂಪು ಮಾಡುತ್ತಿರುವುದು ಯಾರ ಕಾರಸ್ತಾನ, ಮುಖ್ಯಮಂತ್ರಿ ಸ್ಥಾನದ ಕನಸಿನಲ್ಲಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಶಾಸಕರ ಅರವಿಂದ ಬೆಲ್ಲದ ಅವರ ಆಸೆಗೆ ತಣ್ಣೀರೆರಚಿದ್ದು ಯಾರು ಎಂದು ಕೇಳಿದ್ದಾರೆ.
ವಿಜಯೇಂದ್ರಗೆ ಸಚಿವ ಸ್ಥಾನ ತಪ್ಪಿದ್ದು ಹೇಗೆ?
ಬಿಎಸ್ ವೈ ಪುತ್ರ ವಿಜಯೇಂದ್ರಗೆ ಸಚಿವ ಸ್ಥಾನ ಸಿಗದಂತೆ ಮಾಡಲು ಪಂಚೆ ಎತ್ತಿಕಟ್ಟಿ ನಿಂತು ಸಂತೋಷ ಪಡುತ್ತಿರುವವರು ಯಾರು, ಆ ಸಂತೋಷದಲ್ಲಿ ಭಾಗಿಯಾಗಿ ರುವವರು ಯಾರು, ಹಗರಣದಲ್ಲಿ ಅವರ ಹೆಸರನ್ನು ಸೋರಿಬಿಡುತ್ತಿರುವ ಸಂಚು ಯಾರದ್ದು ಎಂದು ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.