ಹೊಸದಿಲ್ಲಿ : ತ್ರಿವಳಿ ತಲಾಕ್ ಮಸೂದೆಯನ್ನು ವಿರೋಧಿಸುತ್ತಿರುವ ಅಖೀಲ ಭಾರತ ಮುಸ್ಲಿಂ ಖಾಸಗಿ ಕಾನೂನು ಮಂಡಳಿಗೆ ಮುಸ್ಲಿಮರನ್ನು ಪ್ರತಿನಿಧಿಸುವ ಹಕ್ಕನ್ನು ಕೊಟ್ಟವರು ಯಾರು ? ಎಂದು ಕೇಂದ್ರ ಸಹಾಯಕ ವಿದೇಶ ವ್ಯವಹಾರಗಳ ಸಚಿವ ಎಂ ಜೆ ಅಕ್‌ಬರ್ ಅವರಿಂದು ಲೋಕಸಭೆಯಲ್ಲಿ ಪ್ರಶ್ನಿಸಿದರು.
ಮುಸ್ಲಿಂ ಖಾಸಗಿ ಕಾನೂನು ಮಂಡಳಿಯ ಸ್ಥಾನಮಾನ ಏನು ? ಮುಸ್ಲಿಂ ಸಮುದಾಯದವರನ್ನು ಪ್ರತಿನಿಧಿಸುವುದಕ್ಕೆ ಅದನ್ನು ಆಯ್ಕೆಮಾಡಿದವರು ಯಾರು ? ಎಂದು ಎಂ ಜೆ ಅಕ್‌ಬರ್ ಅವರಿಂದು ಲೋಕಸಭೆಯಲ್ಲಿ ತ್ರಿವಳಿ ತಲಾಕ್ ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಹೇಳಿದರು.
ಮಸೂದೆಯನ್ನು ಬೆಂಬಲಿಸಿ ಮಾತನಾಡಿದ ಅಕ್‌ಬರ್, ಪ್ರಸ್ತಾವಿತ ಮಸೂದೆಯು ತಲಾಕ್ ವಿರೋಧಿ ಅಲ್ಲ; ಕುರಾನ್ ಹೇಳುವುದೇನೆಂದರೆ ಮಹಿಳೆಯರಿಗೆ ಕೊಡಬೇಕಾದ ಹಕ್ಕನ್ನು ಕೊಡಬೇಕು ಮತ್ತು ಅದಕ್ಕಿಂತಲೂ ಹೆಚ್ಚನ್ನು ಕೊಡಬೇಕು ಎಂಬುದಾಗಿದೆ ಎಂದು ಹೇಳಿದರು.
ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಅನ್ನು ಉಲ್ಲೇಖೀಸಿ ಮಾತನಾಡಿದ ಅಕ್‌ಬರ್, “ದೇವರ ಹೆಸರಲ್ಲಿ ಮಹಿಳೆಯರ ಮೇಲೆ ಎಂದೂ ದೌರ್ಜನ್ಯ ನಡೆಯ ಕೂಡದು ಎಂದು ಕುರಾನ್ ಹೇಳುತ್ತದೆ; ಆದರೆ ಕಳೆದ 1,400 ವರ್ಷಗಳಿಂದಲೂ ನಡೆಯುತ್ತಿರುವ ಈ ಕ್ರೌರ್ಯವನ್ನು ಕೆಲವು ಜಾಹಿಲ್ (ಅಜ್ಞಾನಿ) ಪುರುಷರು ಈಗಲೂ ಮಾಡುತ್ತಿದ್ದಾರೆ’ ಎಂದು ಹೇಳಿದರು.
ತ್ರಿವಳಿ ತಲಾಕನ್ನು ಅಪರಾಧೀಕರಿಸುವ 2017ರ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆಯನ್ನು ಕೇಂದ್ರ ಸರಕಾರ ಹಿಂದೆಗೆದುಕೊಳ್ಳಬೇಕು ಎಂದು ಎಐಎಂಪಿಎಲ್‌ಬಿ ಒತ್ತಾಯಿಸುತ್ತಿದೆ. ಈ ಸಂಘಟನೆಯ ಪ್ರಕಾರ ಈ ಪ್ರಸ್ತಾವಿತ ಮಸೂದೆಯು ಮುಸ್ಲಿಮರ ಮಹಿಳಾ ಕಲ್ಯಾಣದ ವಿರೋಧಿಯಾಗಿದೆ ಮತ್ತು ಮುಸ್ಲಿಂ ಮಹಿಳೆಯರು ಮತ್ತು ಕುಟುಂಬದ ಹಿತಾಸಕ್ತಿಗೆ ವಿರುದ್ಧವಾಗಿದೆ.