Advertisement
ಒಂದೆಡೆ ನಗರದಲ್ಲಿ ಕೋವಿಡ್ 19 ವೈರಸ್ ಸೋಂಕು ಪ್ರಕರಣಗಳು ತೀವ್ರವಾಗಿ ಹರಡುತ್ತಿದ್ದು, ಸೋಂಕಿತರು ಚಿಕಿತ್ಸೆಗಾಗಿ ಪರದಾಟ ನಡೆಸುತ್ತಿದ್ದಾರೆ. ಆದರೆ, ಇವರಿಗಿಂತಲೂ ಕೋವಿಡ್ 19ಯೇತರ ರೋಗಿಗಳ ಸ್ಥಿತಿ ಈಚೆಗೆ ಶೋಚನೀಯವಾಗುತ್ತಿದೆ. ಬಹುತೇಕ ಸರ್ಕಾರಿ ಆಸ್ಪತ್ರೆಗಳು ಕೋವಿಡ್ 19 ಸೋಂಕಿತರಿಗೇ ಆದ್ಯತೆ ನೀಡಿವೆ. ಹೀಗಾಗಿ, ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ 19ಯೇತರ ರೋಗಿಗಳು ಚಿಕಿತ್ಸೆ ಪಡೆಯಲು/ ದಾಖಲಾಗಲು ಮುಂದಾದರೆ, ಕಡ್ಡಾಯವಾಗಿ ಕೋವಿಡ್ 19 ಸೋಂಕು ಪರೀಕ್ಷಾ ವರದಿ ಸಲ್ಲಿಸುವಂತೆ ಅಲಿಖೀತ ನಿಯಮ ವಿಧಿಸಲಾಗಿದೆ.
Related Articles
Advertisement
ಇದರಿಂದ ವಯೋಸಹಜ ಕಾಯಿಲೆಗಳಿದ್ದ ಬಳಲುತ್ತಿರುವವರು ಮತ್ತು ಫಾಲೋಅಪ್ ಚಿಕಿತ್ಸೆ ಪಡೆಯುವವರು ಭಯದಿಂದ ಸರ್ಕಾರಿ ಆಸ್ಪತ್ರೆಗೂ ತೆರಳದೆ, ಸೋಂಕು ಪರೀಕ್ಷೆಗೆ ಹಣ ವ್ಯಯಿಸದೆ ಮನೆ ಕಡೆ ಮುಖಮಾಡುತ್ತಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ಸಿಗದೆ ರೋಗಿಗಳು ಬದುಕುಳಿಸುವ ಗೋಲ್ಡನ್ ಟೈಮ್ ವ್ಯರ್ಥವಾಗುತ್ತಿದೆ.
ಟೆಲಿ ಮೆಡಿಸಿನ್ ಮೊರೆ: ನಿಮ್ಹಾನ್ಸ್ ಮತ್ತು ಜಯದೇವ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಮತ್ತು ರೋಗಿಗಳಲ್ಲೂ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೆಲಿ ಮೆಡಿಸಿನ್ ಮೊರೆಹೋಗಿವೆ. ನಿತ್ಯ ಸೀಮಿತ ಪ್ರಮಾಣದಲ್ಲಿ ಅಂದರೆ ನಿಮ್ಹಾನ್ಸ್ 200, ಜಯದೇವ ಆಸ್ಪತ್ರೆ 400 ರೋಗಿಗಳಿಗೆ ಮಾತ್ರ ಹೊರರೋಗಿಗಳ ವಿಭಾಗದಲ್ಲಿ (ಓಪಿಡಿ) ಚಿಕಿತ್ಸೆ ನೀಡಲು ನಿರ್ಧರಿಸಿವೆ. ಇನ್ನು ಕಿದ್ವಾಯಿಯಲ್ಲಿ ಓಪಿಡಿ ಸೇವೆ ಮೂರು ದಿನಗಳು (ಜು. 7-9) ಬಂದ್ ಮಾಡಲಾಗಿದೆ. ತುರ್ತು ಚಿಕಿತ್ಸೆಗೆ ಬಂದಿರುವ ರೋಗಿಗಳಿಗೂ ಆಸ್ಪತ್ರೆಯಲ್ಲಿಯೇ ಸೋಂಕು ಪರೀಕ್ಷೆ ಕೈಗೊಂಡು ಒಂದು ದಿನದ ಬಳಿಕ ವರದಿ ಪಡೆದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ರ್ಯಾಪಿಡ್ ಪರೀಕ್ಷಾ ಪದ್ಧತಿ ಅಗತ್ಯ: ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಬರುವ ರೋಗಿಗಳಿಗೆ ಕಡ್ಡಾಯ ಸೋಂಕು ಪರೀಕ್ಷೆಗೆ ಸೂಚಿಸಲುವ ಬದಲು ಸ್ವತಃ ಆಸ್ಪತ್ರೆಗಳೇ ಕೋವಿಡ್ 19 ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂಬ ಕೂಗು ತಜ್ಞರಿಂದ ಕೇಳಿಬರುತ್ತಿದೆ. ನಗರದಲ್ಲಿ ಇಷ್ಟೆಲ್ಲ ಸಮಸ್ಯೆ ಆಗುತ್ತಿದೆ. ರೋಗಿಗಳನ್ನು ಅಲೆದಾಡಿಸುವ ಬದಲು ಆಸ್ಪತ್ರೆಗಳು ರ್ಯಾಪಿಡ್ (ಕ್ಷಿಪ್ರ) ಸೋಂಕು ಪರೀಕ್ಷಾ ವ್ಯವಸ್ಥೆ ಅವಳವಡಿಸಿಕೊಳ್ಳಬಹುದು.
ಇದರಿಂದ ಸಮಯದ ಉಳಿತಾಯ ಜತೆಗೆ ಬಡ ರೋಗಿಗಳಿಗೆ ಆರ್ಥಿಕ ಹೊರೆ ತಗ್ಗಲಿದೆ. ಇಷ್ಟೇ ಅಲ್ಲ ರೋಗಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆತು ಬದುಕಿ ಉಳಿಯುವ ಸಾಧ್ಯತೆ ಹೆಚ್ಚಿರು ತ್ತದೆ ಎಂಬ ವಾದ ಕೇಳಿಬರುತ್ತಿದೆ. ಈ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, “ಜಾಗತಿಕ ಮಹಾಮಾರಿಯಂತಹ ಸಂದರ್ಭದಲ್ಲಿ ಎಲ್ಲಾ ರೋಗಿಗಳಿಗೂ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಸಾಧ್ಯವಾಗುವುದಿಲ್ಲ.
ಕೋವಿಡ್ 19ಯೇತರ ತುರ್ತು ಚಿಕಿತ್ಸೆ ಅಗತ್ಯವಿರುವವರು ಖಾಸಗಿ ಆಸ್ಪತ್ರೆಗಳತ್ತ ತೆರಳುತ್ತಿದ್ದಾರೆ. ಇಂತಹ ರೋಗಿಗಳ ಚಿಕಿತ್ಸೆಗೆ ನಿರಾಕರಿಸುವ ಬದಲು ಸ್ಥಳದಲ್ಲೇ ಸೋಂಕು ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ರ್ಯಾಪಿಡ್ ಆ್ಯಂಟಿಜೆನ್ ಕೋವಿಡ್ 19 ಸೋಂಕು ಪರೀಕ್ಷೆಗೆ 400 ರೂ. ವೆಚ್ಚವಾಗುತ್ತದೆ. ಜತೆಗೆ 10ರಿಂದ 15 ನಿಮಿಷದಲ್ಲಿ ಫಲಿತಾಂಶ ಬರುತ್ತದೆ. ನಿಖರತೆ ಪ್ರಮಾಣ ಕೂಡ ತೃಪ್ತಿಕರವಾಗಿದೆ ಎಂದು ಹೇಳಿದರು.
ಯಾರಿಗೆ ಹೆಚ್ಚು ಸಮಸ್ಯೆ?: ಹೃದ್ರೋಗ, ಕ್ಯಾನ್ಸರ್ ರೋಗಿಗಳು, ಮೂತ್ರಪಿಂಡ , ಯಕೃತ್, ಕೀಲುಮೂಳೆ, ರಕ್ತದೊತ್ತಡ, ಮಧುಮೇಹ, ಕ್ಷಯ, ಉಸಿರಾಟ, ಉದರ ಸಮಸ್ಯೆ ಹೊಂದಿದವರು, ಡಯಾಲಿಸಿಸ್, ಕಿಮೊ ಥೆರಪಿಗೆ ಒಳಗಾಗುವವರು, ಪಾರ್ಶ್ವವಾಯು, ಅಪಘಾತಕ್ಕಿಡಾದವರು, ತೀವ್ರ ಗ್ಯಾಸ್ಟ್ರಿಕ್‌ನಿಂದ ಬಳಲುತ್ತಿರುವವರು.
* ವಿಜಯಕುಮಾರ್ ಚಂದರಗಿ