ನಿನ್ನ ದೆಸೆಯಿಂದಾಗಿ ಎಕ್ಸಾಂ ಕೂಡ ಹಾಳಾಗಿ ಹೋಗಿದೆ. ಆದರೆ, ನನಗದರ ಬಗ್ಗೆ ಬೇಜಾರೇ ಇಲ್ಲ. ಇನ್ನೇನು ನೀನು ಪಕ್ಕದಿಂದ ಎದ್ದೇ ಹೋಗಿ ಬಿಡುತ್ತೀಯಲ್ಲ, ಆ ಸಂಕಟವೇ ನನ್ನನ್ನು ಹೆಚ್ಚು ಕಾಡುತ್ತಿದೆ…
ಮುದ್ದು ಮನಸ್ಸಿನವಳೇ,
ಅದ್ಯಾವ ಘಳಿಗೆಯಲ್ಲಿ ನೀನು ಕತ್ತಲೆ ತುಂಬಿದ ನನ್ನ ಹೃದಯದೊಳಗೆ ದೀಪದಂತೆ ಹೊಕ್ಕೆಯೋ ನಾ ಕಾಣೆ. ಅಂದಿನಿಂದ ಬರೀ ನಿನ್ನ ಗುಂಗಲ್ಲಿಯೇ ದಿನ ದೂಡುತ್ತಿದ್ದೇನೆ. ಮೊದಲ ಸೆಮಿಸ್ಟರ್‌ನ ಮೊದಲ ಪರೀಕ್ಷೆಯ ದಿನ ನಾನು ಪರೀಕ್ಷೆಯ ಭಯದಿಂದ ಎಲ್ಲರಿಗಿಂತ ಮೊದಲೇ ಎಕ್ಸಾಂ ಹಾಲ್‌ಗೆ ಬಂದುಬಿಟ್ಟಿದ್ದೆ. ನಂತರ ಒಬ್ಬೊಬ್ಬರಾಗಿ ಬಂದು ತಮ್ಮ ತಮ್ಮ ಸಂಖ್ಯೆಯ ಡೆಸ್ಕ್ಗಳನ್ನು ಹುಡುಕಿ ಕುಳಿತರು. ನನ್ನ ಪಕ್ಕದ ಸೀಟು ಮಾತ್ರ ಇನ್ನೂ ಖಾಲಿ ಹೊಡೆಯುತ್ತಿತ್ತು. ಪ್ರತಿ ಸಲ ಬೇರೆ ಬೇರೆ ವಿಭಾಗದ ಹುಡುಗರೇ ನನ್ನ ಪಕ್ಕದಲ್ಲಿ ಬರುತ್ತಿದ್ದುದರಿಂದ, ಪಕ್ಕದಲ್ಲಿ ಯಾರು ಬರುತ್ತಾರೆಂಬ ಕುತೂಹಲವೇನೂ ಇರಲಿಲ್ಲ. ಆಗ ಎಕ್ಸಾಂ ಹಾಲ್‌ನೊಳಗೆ ಬಂದವಳು ನೀನು!
ಹಾಲ್ ಟಿಕೆಟ್‌ನ ನಂಬರ್ ಇರುವ ಡೆಸ್ಕ್ ಯಾವುದೆಂದು ಆ ಕಡೆ, ಈ ಕಡೆ ಕಣ್ಣು ಹೊರಳಿಸುತ್ತಾ ಗಡಿಬಿಡಿಯಲ್ಲಿ ಹುಡುಕಲಾರಂಭಿಸಿದ್ದೆ ನೀನು. ನಿನ್ನ ಕಣ್ಣಿನ ಕೊಳದಲ್ಲಿ ಕಣ್ಣುಗುಡ್ಡೆಗಳು ಮೀನಿನಂತೆ ಆಕಡೆಯಿಂದ ಈ ಕಡೆ ಓಡಾಡುತ್ತಿದ್ದುದನ್ನು ನೋಡಿ ಒಂದು ಕ್ಷಣ ಮೂಕನಾಗಿ ಹೋದೆ. “ದೇವರೇ, ಈ ಚೆಲುವೆಯೇ ನನ್ನ ಪಕ್ಕ ಬರಲಿ’ ಎಂದು ಮೊರೆ ಇಟ್ಟೆ. ದೇವರಿಗೆ ನನ್ನ ಮೇಲೆ ಕರುಣೆ ಬಂದು, “ತಥಾಸ್ತು’ ಅಂದನೇನೋ, ನೀನು ನನ್ನ ಪಕ್ಕದ ಸೀಟಿನ ಕಡೆಗೇ ನಡೆದು ಬಂದೆ. “ಅಬ್ಟಾ, ಇದೇ ಜಾಗ’ ಅಂತ ನಿಟ್ಟುಸಿರುಬಿಡುತ್ತಾ, ನನ್ನ ಪಕ್ಕದಲ್ಲಿ ವಧುವಿನಂತೆ ಬಂದು ಕುಳಿತ ಘಳಿಗೆಯನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ. ಮೂರು ಗಂಟೆಯ ಪರೀಕ್ಷೆಯ ದಿನ ಪೂರ್ತಿ ಇರಬಾರದಿತ್ತೇ ಅಂತನ್ನಿಸಿದ್ದು ಅದೇ ಮೊದಲು.
ಆವತ್ತು ನಾನು ಏನು ಬರೆದೆನೋ, ಬಿಟ್ಟೆನೋ ಗೊತ್ತಿಲ್ಲ. ಆಗಾಗ ನಿನ್ನ ಕೆನ್ನೆಗೆ ಮುತ್ತಿಡುತ್ತಿದ್ದ ಮುಂಗುರುಳನ್ನು ನೀನು ಸರಿಸಿ ಸರಿಸಿ ಪರೀಕ್ಷೆ ಬರೆಯುತ್ತಿದ್ದುದನ್ನು ಮಾತ್ರ ಓರೆಗಣ್ಣಿನಿಂದ ನೋಡುತ್ತಿದ್ದೆ. ನಿನ್ನ ಗುಂಗಲ್ಲಿ ಎಕ್ಸಾಂ ಹಾಳಾಗಿ ಹೋಯ್ತು. ನನಗದರ ಬಗ್ಗೆ ಬೇಸರವಾಗಲಿಲ್ಲ. ಪಕ್ಕದಲ್ಲಿ ತಿಳಿ ಮಂದಹಾಸ ಬೀರುತ್ತಾ ಕುಳಿತಿದ್ದ ನೀನು, ಇನ್ನು ಕೆಲವೇ ಕ್ಷಣಗಳಲ್ಲಿ ಎದ್ದು ಹೋಗಿ ಬಿಡುತ್ತೀಯಲ್ಲಾ ಎಂದೇ ನನಗೆ ಜಾಸ್ತಿ ಬೇಸರವಾಗಿದ್ದು.
ಇದು ಪ್ರೀತಿಯೋ, ಆಕರ್ಷಣೆಯೋ ಗೊತ್ತಿಲ್ಲ. ಆದರೆ, ನನಗೆ ಹೀಗೆಲ್ಲಾ ಆಗಿದ್ದು ಇದೇ ಮೊದಲು. ನಿನ್ನನ್ನು ಕೊನೆಯವರೆಗೂ ಜೀವಕ್ಕೆ ಜೀವವಾಗಿ ಕಾಪಾಡಿಕೊಂಡು, ಜೊತೆಯಲ್ಲೇ ಉಳಿಸಿಕೊಳ್ಳುವ ಆಸೆ ನನ್ನದು. ಹೃದಯ ಸಿಂಹಾಸನದಲ್ಲಿಯೂ ನಿನಗಾಗಿ ಜಾಗವನ್ನು ಕಾಯ್ದಿರಿಸಿದ್ದೇನೆ. ಅಲ್ಲಿಯೂ ನೀನೇ ಬಂದು ಕುಳಿತುಕೊಳ್ಳಬೇಕು. ಬರಿ¤àಯಾ ತಾನೇ?
– ಬಸವರಾಜ ಕಲ್ಲಪ್ಪ ಕೊಪ್ಪದ