Advertisement

ರಾತ್ರೋರಾತ್ರಿ ಅಂಬೇಡ್ಕರ್‌ ಪುತ್ಥಳಿ ನಿರ್ಮಿಸಿದವರಾರು?

12:10 PM Dec 16, 2018 | |

ಬೆಂಗಳೂರು: ನಗರದ ಕೆ.ಆರ್‌.ಮಾರುಕಟ್ಟೆಯಲ್ಲಿ ರಾತ್ರೋ ರಾತ್ರಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪುತ್ಥಳಿಯನ್ನು ಅನಧಿಕೃತವಾಗಿ ನಿರ್ಮಿಸಿರುವ ಸಂಬಂಧ ಪೊಲೀಸರು ಎಫ್ಐಆರ್‌ ದಾಖಲಿಸಿದ್ದು, ಪುತ್ಥಳಿ ತೆರವುಗೊಳಿಸುವ ವಿಚಾರವಾಗಿ ಬಿಬಿಎಂಪಿ ಹಾಗೂ ಪೊಲೀಸರ ನಡುವೆ ಗೊಂದಲ ಏರ್ಪಟ್ಟಿದೆ.

Advertisement

ಕೆ.ಆರ್‌.ಮಾರುಕಟ್ಟೆ ಬಳಿಯಿರುವ ಇಂದಿರಾ ಕ್ಯಾಂಟೀನ್‌ ಸಮೀಪ ಡಿ.5ರಂದು ಮಧ್ಯರಾತ್ರಿ ಕೆಲವರು ಅಂಬೇಡ್ಕರ್‌ ಅವರ ಪುತ್ಥಳಿ ನಿರ್ಮಿಸಿದ್ದು, ಬೆಳಗ್ಗೆ ಪುತ್ಥಳಿ ಕಂಡ ಅಧಿಕಾರಿಗಳು ಮೇಲಧಿಕಾರಿಗಳಿಗೆ ಮಾಹಿತಿ ನೀಡುವ ಜತೆಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪುತ್ಥಳಿಯನ್ನು ಯಾರು ನಿರ್ಮಿಸಿದ್ದಾರೆ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದ್ದು, ಸುಮಾರು ಆರು ಅಡಿ ಎತ್ತರದ ವೇದಿಕೆಯ ಮೇಲೆ ಮೂರು ಅಡಿ ಎತ್ತರದ ಪುತ್ಥಳಿಯನ್ನು ಅನಾವರಣ ಮಾಡಲಾಗಿದೆ. ಸಮಾಜದಲ್ಲಿ ಶಾಂತಿ ಕದಡುವ ಉದ್ದೇಶದಿಂದಲೇ ಅನಧಿಕೃತವಾಗಿ ಪುತ್ಥಳಿ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರದ ಆದೇಶದ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಪುತ್ಥಳಿ ಅಥವಾ ಪ್ರತಿಮೆಗಳನ್ನು ನಿರ್ಮಿಸುವಂತಿಲ್ಲ. ಆ ಹಿನ್ನೆಲೆಯಲ್ಲಿ ಪುತ್ಥಳಿಯನ್ನು ತೆರವುಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ, ಪುತ್ಥಳಿ ತೆರವುಗೊಳಿಸುವ ವಿಚಾರದಲ್ಲಿ ಪಾಲಿಕೆ ಹಾಗೂ ಪೊಲೀಸ್‌ ಅಧಿಕಾರಿಗಳ ನಡುವೆ ಗೊಂದಲ ಏರ್ಪಟ್ಟಿದೆ.

ಈಗಾಗಲೇ ದೂರು ನೀಡಿರುವುದರಿಂದ ಪೊಲೀಸರು ಪುತ್ಥಳಿ ತೆರವುಗೊಳಿಸಬೇಕೆಂದು ಅಧಿಕಾರಿಗಳು ಹೇಳಿದರೆ, ಪುತ್ಥಳಿ ತೆರವುಗೊಳಿಸಲು ಪಾಲಿಕೆ ಮುಂದಾದರೆ ಅಗತ್ಯ ಭದ್ರತೆ ನೀಡುವುದಾಗಿ ಪೊಲೀಸರು ಹೇಳುತ್ತಿದ್ದಾರೆ.

Advertisement

ಅಡಕತ್ತರಿಯಲ್ಲಿ ಅಧಿಕಾರಿಗಳು: ಸಂಬಂಧಿಸಿದ ಆಡಳಿತದಿಂದ ಅನುಮತಿ ಪಡೆಯದೆಯೇ ಸಾರ್ವಜನಿಕ ಸ್ಥಳಗಳಲ್ಲಿ ಪುತ್ಥಳಿ ನಿರ್ಮಿಸಿರುವುದು ಕಾನೂನು ಬಾಹಿರ. ಆ ಹಿನ್ನೆಲೆಯಲ್ಲಿ ಪುತ್ಥಳಿ ತೆರವುಗೊಳಿಸಲೇ ಬೇಕಾದ ಅನಿವಾರ್ಯತೆ ಇದೆ. ಆದರೆ, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಪುತ್ಥಳಿಯಾಗಿರುವ ಕಾರಣ ತೆರವುಗೊಳಿಸಿದರೆ ಶಾಂತಿ ಕದಡುತ್ತದೆ ಎಂಬ ಆತಂಕದಿಂದ ಪುತ್ಥಳಿ ತೆರವುಗೊಳಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. 

ಪಾಲಿಕೆಯಿಂದಲೇ ಪುತ್ಥಳಿ ತೆರವುಗೊಳಿಸಲಾಗುವುದು ಎಂದು ಸ್ಪಷ್ಟನೆ ನೀಡುವ ಅಧಿಕಾರಿಗಳು, ಯಾವಾಗ ತೆರವುಗೊಳಿಸುತ್ತೀರಾ ಎಂಬ ಪ್ರಶ್ನೆಗೆ ಮಾತ್ರ ಉತ್ತರಿಸುತ್ತಿಲ್ಲ. ಇನ್ನೂ ಈ ಬಗ್ಗೆ ತನಿಖೆಯಾಗುತ್ತಿದ್ದು, ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದ್ದಾರೆ.

ನಗರದ ಯಾವುದೇ ಭಾಗದಲ್ಲಿ ಪುತ್ಥಳಿ ನಿರ್ಮಿಸಬೇಕಾದರೆ ಮೊದಲು ಕೌನ್ಸಿಲ್‌ನಲ್ಲಿ ಅನುಮತಿ ಪಡೆಯಬೇಕು. ಆದರೆ, ಅನುಮತಿ ಇಲ್ಲದೆ ಪುತ್ಥಳಿ ನಿರ್ಮಿಸಿರುವುದು ಕಾನೂನು ಬಾಹಿರ. ಆಯುಕ್ತರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. 
-ಗಂಗಾಂಬಿಕೆ, ಮೇಯರ್‌

ಹಿರಿಯ ಪೊಲೀಸ್‌ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ಕಾನೂನು ಬಾಹಿರವಾಗಿ ನಿರ್ಮಿಸಿರುವ ಪುತ್ಥಳಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. 
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next