Advertisement
ನಿರ್ಮೋಹಿ ಅಖಾರಾ: ಈ ಕೇಸಿನ ಅತಿ ಹಳೆಯ ಫಿರ್ಯಾದುದಾರರೇ ಇವರು. ಅಯೋಧ್ಯೆಯ ಸ್ಥಳೀಯ ನಿವಾಸಿಗಳೂ ಆಗಿರುವ ನಿರ್ಮೋಹಿ ಅಖಾರಾದ ಪ್ರಮುಖರು, ರಾಮಜನ್ಮಸ್ಥಾನದ ನಿರ್ವಹಣೆಯ ಹಕ್ಕಿನ ಬಗ್ಗೆ ವಾದ ಮಂಡಿಸುತ್ತಿದ್ದಾರೆ. ವಿಶೇಷವೆಂದರೆ, ನಾವು ಈ ಸ್ಥಳದ ಮಾಲೀಕರಲ್ಲ, ಕೇವಲ ನಿರ್ವ ಹಣೆ ಮಾಡುವ ಭಕ್ತರು ಎಂದಷ್ಟೇ ಇವರ ವಾದ. ರಾಮಲಲ್ಲಾ ಮತ್ತು ಸುನ್ನಿ ವಕ್ಫ್ ಬೋರ್ಡ್ ಈ ಕೇಸಿನಲ್ಲಿ ನಂತರದಲ್ಲಿ ಬರುವ ಅರ್ಜಿದಾರರು. ನಾವಾದರೆ, ಹಿಂದಿ ನಿಂದಲೂ ರಾಮಜನ್ಮಸ್ಥಾನದ ಮೇಲೆ ಅಧಿಕಾರ ಹೊಂದಿದ್ದೇವೆ ಎಂದು ಹೇಳುತ್ತಿದ್ದಾರೆ.
Related Articles
Advertisement
ರಾಮಲಲ್ಲಾ ಅಥವಾ ರಾಮಲಲ್ಲಾ ವಿರಾಜ್‌ಮಾನ್(ಬಾಲ ರಾಮ): ವಿಚಿತ್ರವೆನಿಸಿದರೂ ಸತ್ಯ, ಇಲ್ಲಿ ಶ್ರೀರಾಮನೇ ಅರ್ಜಿದಾರ. 1989ರಲ್ಲಿ ರಾಮಲಲ್ಲಾ ವಿರಾಜ್ ಮಾನ್, ಸ್ನೇಹಿತರೊಬ್ಬರು(ಅಲಹಾಬಾದ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ) ರಾಮನ ಪರವಾಗಿ ಅರ್ಜಿ ಸಲ್ಲಿಸುತ್ತಾರೆ. ವಿಶ್ವ ಹಿಂದೂ ಪರಿಷತ್ ಕಡೆಯಿಂದ ಸಲ್ಲಿಕೆಯಾಗುವ ಈ ಅರ್ಜಿಯಲ್ಲಿ, ತಾವು ಹಿಂದೂ ಸಮುದಾಯವನ್ನೇ ಪ್ರತಿನಿಧಿಸುವುದಾಗಿ ಪ್ರತಿಪಾದನೆಯಾಗುತ್ತದೆ. ಆದರೆ, ಇಲ್ಲಿ ದೇಗುಲವಿತ್ತು ಅಥವಾ ಮಂದಿರ ನಿರ್ಮಾಣ ಮಾಡಲಾಗಿತ್ತು ಎಂಬ ವಾದಕ್ಕಿಂತ ಶ್ರೀರಾಮನ ಜನ್ಮಸ್ಥಾನದ ಬಗ್ಗೆಯೇ ಹೆಚ್ಚಿನ ವಾದ ಮಾಡುವುದು ವಿಶೇಷ.
ಸುಪ್ರೀಂಕೋರ್ಟ್ ನಲ್ಲಿ ನಡೆದ ವಿಚಾರಣೆ ವೇಳೆ, ರಾಮಲಲ್ಲಾ ಪರ ವಕೀಲರಾದ ಕೆ. ಪರಾಶರನ್ ಮತ್ತು ಸಿ.ಎಸ್. ವೈದ್ಯನಾಥನ್ ನಿರ್ಮೋಹಿ ಅಖಾರಾ ಮತ್ತು ಸುನ್ನಿ ವಕ್ಫ್ ಬೋರ್ಡ್‌ನ ಅಷ್ಟೂ ವಾದವನ್ನು ತಿರಸ್ಕರಿಸುತ್ತಾರೆ. ಜತೆಗೆ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನೂ ತಿರಸ್ಕರಿಸುತ್ತಾರೆ. ಮಸೀದಿ ಇದ್ದ ಜಾಗದಲ್ಲೇ ರಾಮಚಂದ್ರ ಹುಟ್ಟಿದ್ದು, ಹೀಗಾಗಿ, ಈ ಜಾಗವೇ ಪವಿತ್ರವಾದದ್ದು. ಇದನ್ನು ನಮಗೇ ನೀಡಬೇಕು ಎಂದು ನೇರವಾಗಿಯೇ ಹಕ್ಕು ಸಾಧಿಸುತ್ತಾರೆ. ಅಲ್ಲದೆ, ಮುಸ್ಲಿಮರಿಗೆ ಮೆಕ್ಕಾ ಹೇಗೆ ಪವಿತ್ರವೋ ಹಾಗೆಯೇ ಹಿಂದೂಗಳಿಗೆ ಅಯೋಧ್ಯೆ ಪವಿತ್ರವಾದದ್ದು. ಹೀಗಾಗಿ ಈ ಸ್ಥಳವನ್ನು ಅಲಹಾಬಾದ್ ಹೈಕೋರ್ಟ್ ತೀರ್ಪಿನಂತೆ ಮೂರು ಭಾಗ ಮಾಡಬಾರದು. ಯಾವುದೇ ಕಾರಣಕ್ಕೂ ಪವಿತ್ರ ಸ್ಥಳವನ್ನು ಭಾಗ ಮಾಡಬಾರದು.
ನಮಗೇ ಈ ಭೂಮಿ ಕೊಡಿ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ, ಪುರಾತತ್ವ ಇಲಾಖೆ ಈ ಸ್ಥಳದಲ್ಲಿ ಉತ್ಖನನ ಮಾಡಿದಾಗ, ಅಲ್ಲಿ ವಿಷ್ಣು ದೇಗುಲವಿದ್ದಿದ್ದು, ಅದನ್ನು ಧ್ವಂಸಗೊಳಿಸಿ ಮಸೀದಿ ಕಟ್ಟಲಾಗಿದೆ ಎಂಬ ಅಂಶವನ್ನು ಗಮನಕ್ಕೆ ತರುತ್ತಾರೆ. ಈ ಪ್ರಕರಣದ ಇನ್ನೊಂದು ವಿಶೇಷತೆಯೆಂದರೆ, ರಾಮಲಲ್ಲಾ ವಾದಕ್ಕೆ ಪೂರಕವಾಗಿ ಶಿಯಾ ವಕ್ಫ್ ಬೋರ್ಡ್ ವಾದ ಮಂಡಿಸಿ, ವಿವಾದಿತ ಸ್ಥಳವನ್ನು ಸಂಪೂರ್ಣ ವಾಗಿ ಹಿಂದೂಗಳಿಗೇ ನೀಡಬಹುದು ಎಂದು ಹೇಳುತ್ತದೆ. ಇಲ್ಲಿ ಮಸೀದಿಯನ್ನು ಬಾಬರ್ ನಿರ್ಮಿಸಲಿಲ್ಲ ಎಂಬುದೂ ಇವರ ಪ್ರಮುಖ ವಾದ. ವಿವಾದಿತ ಜಾಗದಲ್ಲಿ ಮಸೀದಿ ನಿರ್ಮಿಸು ವುದು ಅಥವಾ ಪ್ರಾರ್ಥನೆ ಸಲ್ಲಿಸು ವುದು ಸರಿಯಲ್ಲ ಎಂಬುದು ಇವರ ವಾದ.
ಸುನ್ನಿ ವಕ್ಫ್ ಬೋರ್ಡ್: ಹಿಂದೂ ಪರ ಅರ್ಜಿದಾರರು, ನಂಬಿಕೆ ಮತ್ತು ಪುರಾತತ್ವ ಇಲಾಖೆಯ ವರದಿ ಅಡಿಯಲ್ಲಿ ವಾದ ಮಂಡಿಸಿದರೆ, ಮುಸ್ಲಿಮರ ಪರ ಸುನ್ನಿ ವಕ್ಫ್ ಬೋರ್ಡ್ ಕಾನೂನಿನ ಅಡಿಯಲ್ಲಿ ವಾದ ಮಂಡಿಸಿತು. ವಿಶೇಷವೆಂದರೆ, ಇಡೀ ದೇಶದ ಮುಸ್ಲಿಮರನ್ನು ಪ್ರತಿನಿಧಿಸುವುದಾಗಿ ಸುನ್ನಿ ವಕ್ಫ್ ಬೋರ್ಡ್, ಈ ಹಿಂದೆ ವಿಚಾರಣೆ ನಡೆದಿದ್ದ ಅಲಹಾಬಾದ್ ಹೈಕೋರ್ಟ್‌ನಲ್ಲಿ ವಾದ ಮಂಡಿಸಿತ್ತು. ಇದನ್ನು ಹೈಕೋರ್ಟ್ ಒಪ್ಪಿಕೊಂಡಿತ್ತು. ಸುನ್ನಿ ವಕ್ಫ್ ಬೋರ್ಡ್‌ನದ್ದು ಒಂದೇ ವಾದ. ಇತಿಹಾಸವೇ ಹೇಳುವಂತೆ, ವಿವಾದಿತ ಸ್ಥಳದಲ್ಲಿ ಮಸೀದಿಯೇ ಇದ್ದಿದ್ದು. ಅಲ್ಲಿ ಬೇರಾವುದೇ ಮಂದಿರವಾಗಲಿ, ದೇಗುಲವಾಗಲಿ ಇರಲಿಲ್ಲ.
ಅಲ್ಲದೆ ಪುರಾತತ್ವ ಇಲಾಖೆಯ ವರದಿ ಕೂಡ ಸರಿಯಿಲ್ಲ. ಹೀಗಾಗಿ, ವಿವಾದಿತ 2.77 ಎಕರೆ ಜಾಗವನ್ನು ಸಂಪೂರ್ಣವಾಗಿ ನಮಗೇ ಕೊಟ್ಟು, ಈಗಾಗಲೇ ಬೀಳಿಸಿರುವ ಬಾಬ್ರಿ ಮಸೀದಿಯನ್ನು ಸರ್ಕಾರವೇ ಪುನಃ ಸ್ಥಾಪಿಸಿಕೊಡಬೇಕು ಎಂಬುದು ಸುನ್ನಿ ವಕ್ಫ್ ಬೋರ್ಡ್ ಪರ ವಕೀಲರ ವಾದ. ಅಲ್ಲದೆ, ನೀವು ಬಾಬರ್ ಕ್ರಮವನ್ನು ಪ್ರಶ್ನಿಸುತ್ತೀರಾ ಎಂದಾದರೆ, ಸಾಮ್ರಾಟ್ ಅಶೋಕ್ ಮಾಡಿದ್ದ ಕೆಲಸಗಳನ್ನೂ ಪ್ರಶ್ನಿಸಬೇಕಾಗುತ್ತದೆ ಎಂಬುದು ಸುನ್ನಿ ವಕ್ಫ್ ಬೋರ್ಡ್ ಪರ ವಕೀಲರಾದ ರಾಜೀವ್ ಧವನ್ ವಾದ. ಅಲ್ಲದೆ, 433 ವರ್ಷಗಳ ಹಿಂದೆ ಬಾಬರ್ ಇದನ್ನು ನಿರ್ಮಿಸಿದ್ದು, ಈ ಸ್ಥಳದಲ್ಲೇ ಪ್ರಾರ್ಥನೆ ಮಾಡಲು ಮುಸ್ಲಿಮರಿಗೆ ಅವಕಾಶ ಕೊಡಬೇಕು ಎಂದು ಸುನ್ನಿ ವಕ್ಫ್ ಬೋರ್ಡ್ ಹೇಳುತ್ತದೆ.