Advertisement
ಪಸ್ ಮಂದಾ ಪದದ ಅರ್ಥವೇನು? ಪಸ್ ಮಂದಾ ಎಂಬುದು ಪರ್ಶಿಯನ್ ಪದವಾಗಿದೆ. ಇದರ ಅರ್ಥ “ಹಿಂದುಳಿದವರು”. ಮುಸ್ಲಿಂ ಸಮುದಾಯದಲ್ಲಿ ಅತ್ಯಂತ ಹಿಂದುಳಿದ ವರ್ಗಕ್ಕೆ, ತುಳಿತಕ್ಕೆ ಒಳಗಾದವರನ್ನು ಪಸ್ ಮಂದಾ ಮುಸ್ಲಿಮರು ಎಂದು ಕರೆಯುತ್ತಾರೆ. ಈ ಹಿಂದೆ ಇವರನ್ನು ದಲಿತ ಮುಸ್ಲಿಮರು ಎಂದು ಕರೆಯುತ್ತಿದ್ದರು. 1998ರಲ್ಲಿ ಮೊದಲ ಬಾರಿಗೆ ಈ ಗುಂಪನ್ನು “ಪಸ್ ಮಂದಾ ಮುಸ್ಲಿಮರು’ ಎಂದು ಕರೆಯಲಾಯಿತು. ಅಲ್ಲಿಂದ ಇದು ಮುಂದುವರಿಯಿತು.
ಭಾರತದಲ್ಲಿ ಇರುವ ಮುಸ್ಲಿಮರ ಪೈಕಿ ಶೇ.80ರಿಂದ 85ರಷ್ಟು ಪಸ್ ಮಂದಾ ಮುಸ್ಲಿಮರಿದ್ದಾರೆ ಎಂದು ಅಖೀಲ ಭಾರತ ಪಾಸಮಂದ ಮುಸ್ಲಿಮ್ ಮಹಾಜ್ ಸಂಸ್ಥಾಪಕ ಅಧ್ಯಕ್ಷ ಅಲಿ ಅನ್ವರ್ ಅನ್ಸಾರಿ ತಿಳಿಸಿದ್ದಾರೆ. 2006ರಲ್ಲಿ ಸಲ್ಲಿಕೆಯಾಗಿದ್ದ ರಾಜೇಂದ್ರ ಸಾಚಾರ್ ಸಮಿತಿಯ ಪ್ರಕಾರ, ಭಾರತದಲ್ಲಿರುವ ಮುಸ್ಲಿಂ ಜನಸಂಖ್ಯೆಯಲ್ಲಿ ಶೇ.40.7ರಷ್ಟು ಮುಸ್ಲಿಮರು ಒಬಿಸಿಗೆ ಸೇರಿದವರಾಗಿದ್ದಾರೆ ಎಂದು ಹೇಳಿದೆ. ಎಲ್ಲಿ ಅತ್ಯಧಿಕ ಸಂಖ್ಯೆ?
ಪಸ್ ಮಂದಾ ಮುಸ್ಲಿಮರು ಭಾರತಾದ್ಯಂತ ಪಸರಿಸಿದ್ದಾರೆ. ಆದರೆ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
Related Articles
ಭಾರತದಲ್ಲಿ ಮುಸ್ಲಿಂ ಸಮುದಾಯವು ಮೂರು ವಿಭಾಗಗಳಾಗಿ ವಿಭಾಗಿಸಲ್ಪಟ್ಟಿದೆ. ಅಶ್ರಫ್, ಅಜ್ಲಫ್ ಮತ್ತು ಅರ್ಜಲ್. ಇದರಲ್ಲಿ ಅಶ್ರಫ್ರನ್ನು ಮೇಲ್ವರ್ಗ ಎಂದು ಗುರುತಿಸಲಾಗಿದ್ದು, ಇವರು ಅರೇಬಿಯಾ, ಪರ್ಶಿಯಾ, ಟರ್ಕಿ ಮತ್ತು ಅಫ್ಘಾನಿಸ್ತಾನದಿಂದ ಬಂದವರಾಗಿದ್ದಾರೆ. ಅಲ್ಲದೇ ಮುಸ್ಲಿಮರಾಗಿ ಮತಾಂತರವಾದ ಮೇಲ್ವರ್ಗದ ಹಿಂದೂಗಳು ಇದಕ್ಕೆ ಸೇರುತ್ತಾರೆ. ಅಜ್ಲಫ್ ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದಾರೆ. ನೇಯ್ಗೆಯವರು, ಟೈಲರ್‌ಗಳು, ತರಕಾರಿ ಮಾರಾಟಗಾರರು, ಇತರರು ಇದರಲ್ಲಿ ಬರುತ್ತಾರೆ.
Advertisement
ದಲಿತ ಮುಸ್ಲಿಮರು: ಅರ್ಜಲ್ ಕೆಳ ವರ್ಗಕ್ಕೆ ಸೇರಿದವರಾಗಿದ್ದು, ಇವರನ್ನು ದಲಿತ ಮುಸ್ಲಿಮರು ಎಂದು ಕರೆಯಲಾಗುತ್ತದೆ. ಮಾಂಸ ಮಾರಾಟ ಮಾಡುವವರು, ಕ್ಷೌರಿಕರು, ದೋಬಿಗಳು, ಇತರೆ ಕೂಲಿ ಕಾರ್ಮಿಕರು ಈ ವರ್ಗಕ್ಕೆ ಸೇರುತ್ತಾರೆ. ಅವರ ಬೇಡಿಕೆಗಳೇನು?
ಸರ್ಕಾರಿ ಉದ್ಯೋಗ, ಶಾಸಕಾಂಗ, ಸರ್ಕಾರಿ ಸ್ವಾಮ್ಯದ ಅಲ್ಪಸಂಖ್ಯಾತ ಸಂಸ್ಥೆಗಳು ಮತ್ತು ಮುಸ್ಲಿಂ ಸಂಸ್ಥೆಗಳಲ್ಲಿ ಇವರ ಸಂಖ್ಯೆ ಕಡಿಮೆ. ಹಾಗಾಗಿ ಧರ್ಮ ಆಧಾರಿತ ಮೀಸಲಿನ ಬದಲು ಪಾಸಮಂಡ ಮುಸ್ಲಿಮರಿಗೆ ಪ್ರತ್ಯೇಕ ಮೀಸಲು ನಿಗದಿಪಡಿಸಬೇಕೆಂಬುದು ಬೇಡಿಕೆ. ಬಿಜೆಪಿ ಏಕೆ ಇವರನ್ನು ಓಲೈಸುತ್ತಿದೆ?
ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಇವರ ಸಂಖ್ಯೆ ಹೆಚ್ಚು. ಹಿಂದಿನ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಗಳಿಸಿದೆ. ಹಲವು ಪಾಸಮಂದ ಮುಸ್ಲಿಮರು ಕೂಡ ಬಿಜೆಪಿ ಬೆಂಬಲಿಸಿದ್ದಾರೆ ಎನ್ನಲಾಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ಅನಿವಾರ್ಯತೆಯಲ್ಲಿ ಬಿಜೆಪಿ ಇದೆ. ಹೀಗಾಗಿ ಉತ್ತರ ಪ್ರದೇಶ, ಬಿಹಾರ ಸೇರಿದಂತೆ ದೇಶಾದ್ಯಂತ ಇರುವ ಸಮುದಾಯದವರನ್ನು ಓಲೈಸಲು ಬಿಜೆಪಿ ಮುಂದಾಗಿದೆ.