ಬೆಳಗಾವಿ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಕುಟುಂಬವನ್ನು ಒಂದಾಗಿಸಲು ನಾನ್ಯಾರು? ನಾನು ಅವರ ಕುಟುಂಬದ ಮನೆ ಅಳಿಯ ಅಷ್ಟೇ, ಮಗನಲ್ಲ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ಬಂಗಾರಪ್ಪ ಕುಟುಂಬದಲ್ಲಿರುವ ಭಿನ್ನಾಭಿಪ್ರಾಯವನ್ನು ಅವರೇ ಬಗೆಹರಿಸಿಕೊಳ್ಳಬೇಕು. ಒಂದಾಗಿಸಲು ನಾನ್ಯಾರು ಎಂದು ಪ್ರಶ್ನಿಸಿದರು.
ಪತ್ನಿ ಗೀತಾ ಅವರಿಗೆ ಟಿಕೆಟ್ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿದ ಶಿವಣ್ಣ, ಲೋಕಸಭೆ ಚುನಾವಣೆ ತಯಾರಿ ನಡೆದಿದೆ. ಪ್ರಚಾರಕ್ಕೆ ಹೋಗಬೇಕೋ ಅಥವಾ ಬೇಡವೋ ಎಂಬುದು ಇನ್ನೂ ತೀರ್ಮಾನಿಸಿಲ್ಲ. ಯಾವಾಗ ಹೋಗಬೇಕೋ ಆಗ ಹೋಗುತ್ತೇನೆ. ಈ ಸಲದ ಚುನಾವಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇನೆ. ಸಂಸದರಾಗಲು ಚುನಾವಣೆಗೆ ಬಂದಿದ್ದೇವೆ ಎಂದರು.
ಕುಮಾರ್ ಬಂಗಾರಪ್ಪ ಪ್ರಚಾರಕ್ಕೆ ಬರುತ್ತಾರಾ ಎಂಬ ಪ್ರಶ್ನೆಗೆ, ಅದೆಲ್ಲವೂ ನನಗೆ ಗೊತ್ತಿಲ್ಲ ಎಂದ ಶಿವಣ್ಣ, ಸ್ಟಾರ್ ನಟ’ರಿಗೆ ಚುನಾವಣಾ ಪ್ರಚಾರಕ್ಕೆ ಬರುವಂತೆ ನಾವು ಯಾರಿಗೂ ತೊಂದರೆ ಕೊಡಲ್ಲ. ಈ ಸಲ ಬಿಸಿಲು ಹೆಚ್ಚಿದೆ. ನಾನು ಯಾರನ್ನಾದರೂ ಕರೆದರೆ ಬರುತ್ತಾರೆ. ಆದರೆ ನಾವು ಕರೆಯುವುದಿಲ್ಲ. ನಮ್ಮ ನಟರೊಂದಿಗೆ ನಮ್ಮ ವಿಶ್ವಾಸ ಹಾಗೆಯೇ ಉಳಿಸಿಕೊಳ್ಳಬೇಕು ಹೊರತು ತೊಂದರೆ ಕೊಡಲ್ಲ ಎಂದರು.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಿಗೆ ಪ್ರಚಾರಕ್ಕೆ ಬರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಣ್ಣ, ಸಮಯ ನೋಡಿಕೊಂಡು ನಿರ್ಧರಿಸುತ್ತೇನೆ. ಶೂಟಿಂಗ್‌ಗೆ ಹೋಗಬೇಕು. ಗೀತಾ ಅವರ ಪ್ಲ್ರಾನ್ ಏನು ಎಂಬುದನ್ನು ನೋಡಬೇಕು. ಗೀತಾ ನನ್ನ ಹೆಂಡತಿ ಆಗಿರುವುದರಿಂದ ಹೆಚ್ಚು ಸಹಕಾರ ನೀಡಬೇಕಿದೆ ಎಂದರು.