Advertisement

ಜನರಲ್ ಬಿಪಿನ್ ರಾವತ್ ವೀರಮರಣ: ಮುಂದಿನ ಸಿಡಿಎಸ್‌ ಆಯ್ಕೆ ಹೇಗೆ?

11:29 AM Dec 10, 2021 | Team Udayavani |

ತಮಿಳುನಾಡು ಕೂನೂರ್‌ನಲ್ಲಿ ನಡೆದ ಕಾಪ್ಟರ್‌ ಅಪಘಾತದಲ್ಲಿ ರಕ್ಷಣ ಪಡೆಗಳ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಅಸುನೀಗಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರ ಶೀಘ್ರವೇ ಪ್ರಕ್ರಿಯೆ ಶುರು ಮಾಡಲಿದೆ. ಭೂಸೇನೆಯ ಹಾಲಿ ಮುಖ್ಯಸ್ಥ ಜ| ಮನೋಜ್‌ ಮುಕುಂದ್‌ ನರವಾಣೆ ಅವರನ್ನೇ ಮುಂದಿನ ರಕ್ಷಣ ಪಡೆಗಳ ಮುಖ್ಯಸ್ಥರನ್ನಾಗಿ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ. ಈ ಬಗೆಗಿನ ಪ್ರಕ್ರಿಯೆಗಳ  ಬಗೆಗಿನ ನೋಟ ಇಲ್ಲಿದೆ.

Advertisement

ಸಮಿತಿ ರಚಿಸಲಿದೆ ಸರಕಾರ:

ಜ| ಬಿಪಿನ್‌ ರಾವತ್‌ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬಹುದು ಎಂಬ ಬಗ್ಗೆ ಪರಿಶೀಲನೆ ನಡೆಸಲು ಭೂಸೇನೆ, ನೌಕಾಪಡೆ, ಐಎಎಫ್ನ ಹಿರಿಯ ಕಮಾಂಡರ್‌ಗಳನ್ನು ಒಳಗೊಂಡ ಸಮಿತಿ ರಚಿಸಲಿದೆ.

ಏನು ಮಾಡಲಿದೆ ಸಮಿತಿ? :

ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ ಸೇನೆಯ ಮೂರು ವಿಭಾಗಗಳ ಅಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಿ ತೆರವಾಗಿರುವ ಸ್ಥಾನಕ್ಕೆ ಸಂಭಾವ್ಯರ ಹೆಸರುಗಳ ಬಗ್ಗೆ ವರದಿ ಸಿದ್ಧಪಡಿಸಲಿದೆ. ಅದನ್ನು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರ ಅನುಮೋದನೆಗಾಗಿ ಸಲ್ಲಿಸುತ್ತದೆ. ಏಕೀಕೃತ ರಕ್ಷಣ ಸಿಬಂದಿ ಸಮಿತಿಯ ಅಧ್ಯಕ್ಷರು ಕೂಡ ನೂತನ ಮುಖ್ಯಸ್ಥರ ಆಯ್ಕೆ ಪ್ರಕ್ರಿಯಗೆ ನೆರವು ನೀಡಲಿದ್ದಾರೆ.

Advertisement

ಮುಂದಿನ ಹಂತವೇನು? :

ರಕ್ಷಣ ಸಚಿವರಿಂದ ಅನುಮೋದನೆ ಪಡೆದ ಬಳಿಕ ಸಂಭಾವ್ಯರ ಹೆಸರುಗಳು ಮತ್ತು ಅದಕ್ಕೆ ಸಂಬಂಧಿಸಿದ ವರದಿಯು ನೇಮಕಕ್ಕಾಗಿ ಇರುವ ಕೇಂದ್ರ ಸಂಪುಟ ಸಮಿತಿಗೆ ಕಳುಹಿಸ­ ಲಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿನ ಈ ಸಮಿತಿ ಆ ಹೆಸರುಗಳನ್ನು ಪರಿಶೀಲಿಸಿ ರಕ್ಷಣ ಪಡೆಗಳ ಮುಖ್ಯಸ್ಥರ ಹೆಸರು ಅಂತಿಮಪಡಿಸಲಿದೆ.

ಜ| ಎಂ.ಎಂ.ನರವಾಣೆಯೇ ಆಯ್ಕೆ? :

ಪಾಕಿಸ್ಥಾನ ಮತ್ತು ಚೀನಗಳಿಂದಲೇ ದೇಶಕ್ಕೆ ಪ್ರಧಾನವಾಗಿ ಬೆದರಿಕೆ ಇದೆ. ಲಡಾಖ್‌ನ ಪೂರ್ವ ಭಾಗದಲ್ಲಿ ಚೀನ ದಾಳಿ ನಡೆಸಿದ್ದ ಸಂದರ್ಭದಲ್ಲಿ ಉಂಟಾಗಿದ್ದ ಬಿಕ್ಕಟ್ಟಿನ ಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಇದರ ಜತೆಗೆ ಭೂಸೇನೆ, ನೌಕಾಪಡೆ, ವಾಯುಪಡೆಯ ಮುಖ್ಯಸ್ಥರ ಪೈಕಿ ಜ| ನರವಾಣೆ ಹಿರಿಯ ಅಧಿಕಾರಿಯಾಗಿದ್ದಾರೆ. ಅವರು ಮುಂದಿನ ಎಪ್ರಿಲ್‌ನಲ್ಲಿ ನಿವೃತ್ತಿಯಾಗಲಿದ್ದಾರೆ.  ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಆರ್‌.ಹರಿಕುಮಾರ್‌ ನ.30, ಐಎಎಫ್ ಮುಖ್ಯಸ್ಥರಾಗಿ ಏರ್‌ಚೀಫ್ ಮಾರ್ಷಲ್‌ ವಿ.ಆರ್‌.ಚೌಧರಿ ಸೆ.30ರಂದು ಅಧಿಕಾರ ಸ್ವೀಕರಿಸಿದ್ದರು.

ಯಾರಾಗಬಹುದು ಭೂಸೇನೆಗೆ ಮುಖ್ಯಸ್ಥ? :

ಜ| ನರವಾಣೆ ರಕ್ಷಣ ಪಡೆಗಳ ಮುಖ್ಯಸ್ಥರಾದರೆ ಭೂಸೇನೆಗೆ ಮುಖ್ಯಸ್ಥರಾಗಿ ಯಾರನ್ನು ನೇಮಕ ಮಾಡಬೇಕು ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ. ಭೂಸೇನೆಯ ಉಪ ಮುಖ್ಯಸ್ಥ ಲೆ| ಜ| ಸಿ.ಪಿ. ಮೊಹಾಂತಿ, ನಾರ್ದರ್ನ್ ಆರ್ಮಿ ಕಮಾಂಡರ್‌ ಲೆ|ಜ| ವೈ.ಕೆ. ಜೋಶಿ ಅವರನ್ನು ಪರಿಗಣಿಸುವ ಸಾಧ್ಯತೆಗಳು ಇವೆ. ಲೆ|ಜ| ಮೊಹಾಂತಿ ಅವರಿಗೆ ಚೀನಕ್ಕೆ ಹೊಂದಿಕೊಂಡಿರುವ ಎಲ್‌ಎಸಿಯಲ್ಲಿ ಪರಿಸ್ಥಿತಿ ನಿಭಾಯಿಸಿದ ಅನುಭವ ಹೆಚ್ಚಿದೆ. ಇದು ಅವರಿಗೆ ಅನುಕೂಲವಾಗ­ಬಹುದು ಎನ್ನುತ್ತಾರೆ ತಜ್ಞರು.

Advertisement

Udayavani is now on Telegram. Click here to join our channel and stay updated with the latest news.

Next