ವಿಟ್ಲ : ವಿಟ್ಲ ತಾ| ರಚನೆ ಬಗ್ಗೆ ರೈತ ಸಂಘದ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿದ್ದು, ಸೂಕ್ತ ಸ್ಪಂದನೆ ಭರವಸೆ ನೀಡಿದ್ದರು. ಈ ಬಗ್ಗೆ ಅಧಿಕಾರಿ ವರ್ಗ ಯಾವುದೇ ಪತ್ರ ವ್ಯವಹಾರ ನಡೆಸಲಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ವಿಟ್ಲ ತಾ| ಘೋಷಣೆ ಮಾಡಬೇಕೆಂಬ ಆಗ್ರಹದೊಂದಿಗೆ ಮತ್ತೆ ಹೋರಾಟಗಾರರ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ದ.ಕ. ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಹೇಳಿದರು. ಅವರು ಶುಕ್ರವಾರ ವಿಟ್ಲ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ವಿಟ್ಲ ತಾ| ರಚನೆಗೆ ಆಗ್ರಹಿಸಿ ನಡೆಯುವ ಕಾರ್ಡ್ ಚಳವಳಿಗೆ ಚಾಲನೆ ನೀಡಿ ಮಾತನಾಡಿದರು.
ಉಗ್ರ ಹೋರಾಟ
ಮುಖ್ಯಮಂತ್ರಿ ಅವರಿಗೆ ಅಂಚೆ ಕಾರ್ಡ್‌ನಲ್ಲಿ ಪತ್ರ ಬರೆದು, ವಿಟ್ಲ ತಾ| ಘೋಷಣೆ ಮಾಡಬೇಕೆಂದು ಆಗ್ರಹಿಸಿ ಚಳವಳಿ ಆರಂಭಿಸಲಾಗಿದೆ. ಕಾಗದ ಪತ್ರದ ಮೂಲಕ 4 ದಶಕಗಳಿಂದ ತಾ| ರಚನೆ ಬಗ್ಗೆ ವಿವಿಧ ಸಮಿತಿಗಳ ಮುಂದೆ ದಾಖಲೆ ಹಾಜರುಪಡಿಸಲಾಗಿದೆ. ವಿಟ್ಲವನ್ನು ಸಾಂಕೇತಿಕವಾಗಿ ಬಂದ್ ಮಾಡುವ ಮೂಲಕ ಶಾಂತಿಯುತ ಪ್ರತಿಭಟನೆ ನಡೆಸಲಾಗಿದೆ. ಇನ್ನು ಮುಂದೆಯೂ ನಿರ್ಲಕ್ಷಿಸಿದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.
ಮೋಹನದಾಸ ಉಕ್ಕುಡ ಅವರು ಕಾರ್ಡ್ ಅಂಚೆ ಪೆಟ್ಟಿಗೆಗೆ ಹಾಕುವ ಮೂಲಕ ಕಾರ್ಡ್ ಚಳವಳಿಗೆ ಚಾಲನೆ ನೀಡಿದರು. ಹಿರಿಯ ಹೋರಾಟಗಾರ ಮುರುವ ನಡುಮನೆ ಮಹಾಬಲ ಭಟ್, ವಿಟ್ಲ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಯಾನೆ ಬಟ್ಟು ಸ್ವಾಮಿ, ವಿಟ್ಲ ಗ್ರಾ.ಪಂ. ಮಾಜಿ ಸದಸ್ಯ ಕೂಡೂರು ವಸಂತ ಶೆಟ್ಟಿ, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ನಿರ್ದೇಶಕ ಉದಯಕುಮಾರ್ ಆಲಂಗಾರು, ಮಹಮ್ಮದ್, ಲಿಂಗಪ್ಪ ಗೌಡ, ಮಹಾಬಲ ಶೆಟ್ಟಿ ಮೂಡಂಬೈಲು ಮತ್ತಿತರರು ಉಪಸ್ಥಿತರಿದ್ದರು.
ವಿಟ್ಲ ನಿರ್ಲಕ್ಷ್ಯ ಸರಿಯಲ್ಲ
ಸಾಮಾಜಿಕ ಹೋರಾಟಗಾರ ಡಾ| ಇರ್ಮಾಡಿ ಶರಶ್ಚಂದ್ರ ಶೆಟ್ಟಿ ಮಾತನಾಡಿ, ಹೋರಾಟಗಳಿಗೆ ಜನರ ಸ್ಪಂದನೆ ಸಿಕ್ಕಾಗ ರಾಜಕೀಯ ಇಚ್ಛಾಶಕ್ತಿಯೂ ಜಾಗೃತವಾಗುತ್ತದೆ. ಭೌಗೋಳಿಕವಾಗಿ ಎಲ್ಲ ಅರ್ಹತೆ ಇದ್ದರೂ ವಿಟ್ಲವನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ. ವಿವಿಧ ಸಂಘಟನೆಗಳ ಜತೆ ಸೇರಿಕೊಂಡು ಹೋರಾಟದ ಸ್ವರೂಪ ಬದಲಿಸಿದಲ್ಲಿ ಮಾತ್ರ ವಿಟ್ಲದ ಜನತೆಗೆ ನ್ಯಾಯ ಸಿಗಲು ಸಾಧ್ಯ ಎಂದು ತಿಳಿಸಿದರು.