ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಮತ್ತೂಮ್ಮೆ ಪ್ರಭಾವಿಗಳ ಒತ್ತಡಕ್ಕೆ ಮಣಿದಿರುವ ಬಿಬಿಎಂಪಿ ಅಧಿಕಾರಿಗಳು, ಜೆ.ಸಿ. ನಗರದ ಮಠದಹಳ್ಳಿಯಲ್ಲಿ ವೈಟ್‌ಹೌಸ್ ಅಪಾರ್ಟ್ ವತಿಯಿಂದ ಒತ್ತುವರಿಯಾಗಿದ್ದ ರಾಜಕಾಲುವೆ ಜಾಗ ತೆರವುಗೊಳಿಸದೆ ಸತತ ಎರಡನೇ ದಿನವೂ ಬರಿಗೈಲಿ ವಾಪಸ್ಸಾಗಿದ್ದಾರೆ.
ಪೂರ್ವ ವಲಯದ ಜೆ.ಸಿ. ನಗರ ವಾರ್ಡ್ ಮಠದಹಳ್ಳಿಯಲ್ಲಿನ ವೈಟ್‌ಹೌಸ್ ಅಪಾರ್ಟ್‌ಮೆಂಟ್ 20 ಕೋಟಿ ಮೌಲ್ಯದ 9.5 ಗುಂಟೆ ರಾಜಕಾಲುವೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿದೆ. ಈ ಕುರಿತು ಸರ್ವೆ ನಡೆಸಿದ್ದ ಅಧಿಕಾರಿಗಳು ಬುಧವಾರ ಒತ್ತುವರಿ ತೆರವಿಗೆ ಮುಂದಾಗಿದ್ದ ಅಪಾರ್ಟ್‌ಮೆಂಟ್ ನಿವಾಸಿಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಗುರುವಾರ ಪೊಲೀಸ್ ಭದ್ರತೆಯಲ್ಲಿ ಬಂದು ತೆರವುಗೊಳಿಸುವುದಾಗಿ ಹೇಳಿ ವಾಪಸ್ಸಾಗಿದ್ದರು.
ಅದರಂತೆ ಗುರುವಾರ ಸೂಕ್ತ ಭದ್ರತೆಯೊಂದಿಗೆ ಜೆಸಿಬಿ ಯಂತ್ರ ಬಳಿ ಒತ್ತುವರಿ ತೆರವಿಗೆ ಮುಂದಾದ ಅಧಿಕಾರಿಗಳಿಗೆ ನಿವಾಸಿಗಳು ಮತ್ತೆ ಅಡ್ಡಿಪಡಿಸಿದ್ದಾರೆ. ಈ ವೇಳೆ ಸ್ಥಳೀಯ ನಿವಾಸಿಗಳೊಂದಿಗೆ ಹೆಬ್ಟಾಳ ಕ್ಷೇತ್ರದ ಶಾಸಕರಾದ ವೈ.ಎ. ನಾರಾಯಣಸ್ವಾಮಿ ಅವರೂ ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆ. ಅಪಾರ್ಟ್‌ಮೆಂಟ್‌ನಿಂದ ಯಾವುದೇ ಒತ್ತುವರಿಯಾಗಿಲ್ಲ, ಬೇಕಿದ್ದರೆ ಮರು ಸರ್ವೇ ನಡೆಸಿ ಎಂಬ ಒತ್ತಡಕ್ಕೆ ಮಣಿದ ಅಧಿಕಾರಿಗಳು ಶುಕ್ರವಾರ ಮರು ಸರ್ವೆ ನಡೆಸುವುದಾಗಿ ತಿಳಿಸಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ.
ವಾಗ್ವಾದ: ವೈಟ್‌ಹೌಸ್ ಅಪಾರ್ಟ್‌ಮೆಂಟ್ ಒತ್ತುವರಿದಾರರ ಪರ ಪ್ರತಿಭಟನೆಗೆ ಇಳಿದ ಶಾಸಕ ನಾರಾಯಣಸ್ವಾಮಿ, ಈಗಾಗಲೆ ಒಮ್ಮೆ ಸರ್ವೇ ಮಾಡಿ ಗುರುತು ಮಾಡಿದ್ದರೂ, ಮತ್ತೂಮ್ಮೆ ಸರ್ವೇ ನಡೆಸಿ. ಅದರಿಂದಲೂ ಒತ್ತುವರಿಯಾಗಿದೆ ಎಂಬುದು ಧೃಡಪಟ್ಟರೆ ಮಾತ್ರ ಕಾರ್ಯಾಚರಣೆ ನಡೆಸಿ ಎಂದು ಅಧಿಕಾರಿಗಳ ಜತೆ ಮಾತಿನ ಚಕಮಕಿಗೆ ಇಳಿದರು. ಅಪಾರ್ಟ್‌ಮೆಂಟ್ ನಿವಾಸಿಗಳು ಜೆಸಿಬಿಗಳ ಮುಂದೆ ಅಡ್ಡ ನಿಂತು ಯಾವುದೇ ಕಾರಣಕ್ಕೂ ಕಾರ್ಯಾಚರಣೆ ಮಾಡಲು ಬಿಡುವುದಿಲ್ಲ ಎಂದು ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಸ್ಥಳದಲ್ಲಿ ಬಿಎಂಟಿಎಫ್ ಪೊಲೀಸರಿದ್ದರೂ ಮೂಕಪ್ರೇಕ್ಷರಂತಾಗಿದ್ದರು.
ಮರು ಸರ್ವೇಗೆ ಆಗ್ರಹ: ವೈಟ್‌ಹೌಸ್ ಅಪಾರ್ಟ್‌ಮೆಂಟ್‌ನವರಿಗೆ ಮರು ಸರ್ವೇ ನಡೆಸಲು ಅವಕಾಶ ನೀಡಿದ್ದರಿಂದ ಕುಪಿತಗೊಂಡ ಪಟೇಲ್ ಕ್ಲಬ್ ಹಾಗೂ ಎಂಬೆಸ್ಸಿ ಗ್ರೂಪ್‌ನವರು ಅವರು ತಮ್ಮ ಒತ್ತುವರಿ ಗುರುತನ್ನೂ ಮರು ಸರ್ವೆ ಮಾಡುವಂತೆ ಆಗ್ರಹಿಸಿದರು. ವೈಟ್‌ಹೌಸ್ ಅಪಾರ್ಟ್‌ಮೆಂಟ್ ಮಾತ್ರ ಮರುಸರ್ವೆಗೆ ಅವಕಾಶ ಏಕೆ? ನಮಗೂ ಅವಕಾಶ ನೀಡಿ ಎಂದು ಒತ್ತಾಯಿಸಿದರು. ಈ ವೇಳೆ ಅಧಿಕಾರಿಗಳು ಮನವಿಯನ್ನು ತಿರಸ್ಕರಿಸಿ ಪಟೇಲ್ ಕ್ಲಬ್‌ನಿಂದ ಒತ್ತುವರಿಯಾಗಿದ್ದ 6.5 ಗುಂಟೆ, ಎಂಬೆಸ್ಸಿ ಗ್ರೂಪ್ ಕಟ್ಟಡದಿಂದ ಆಗಿದ್ದ 5 ಗುಂಟೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಸಿದರು.
ವೈಟ್‌ಹೌಸ್ ಅಪಾರ್ಟ್‌ಮೆಂಟ್ ನಿವಾಸಿಗಳು ಮತ್ತು ಸ್ಥಳೀಯ ಶಾಸಕರ ಒತ್ತಾಯದಿಂದಾಗಿ ಶುಕ್ರವಾರ ಮರು ಸರ್ವೇ ನಡೆಸಲು ನಿರ್ಧರಿಸಲಾಗಿದೆ. ಮರು ಸರ್ವೇಯಲ್ಲೂ ಒತ್ತುವರಿ ಯಾಗಿರುವುದು ಕಂಡುಬಂದರೆ ತೆರವು ಕಾರ್ಯಾಚರಣೆ ನಡೆಸುತ್ತೇವೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
-ಬಸವರಾಜಪ್ಪ, ಕಾರ್ಯಪಾಲಕ ಎಂಜಿನಿಯರ್, ಬಿಬಿಎಂಪಿ ಪೂರ್ವ ವಲಯ