ಬೆಂಗಳೂರು: ನಗರದ ಆಯ್ದ ರಸ್ತೆಗಳನ್ನು ವೈಟ್‌ಟಾಪಿಂಗ್ ರಸ್ತೆಗಳನ್ನಾಗಿ ಪರಿವರ್ತಿಸುವ ಬಿಬಿಎಂಪಿ ಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರೆತ ಬೆನ್ನಲ್ಲೆ ಬುಧವಾರದಿಂದಲೇ ಕಾಮಗಾರಿಗೆ ಚಾಲನೆ ಸಿಕ್ಕಿದೆ.
ನಗರದ ಒಟ್ಟು 29 ರಸ್ತೆಗಳನ್ನು ಎರಡು ಪ್ಯಾಕೇಜ್‌ಗಳಲ್ಲಿ ವೈಟ್‌ಟಾಪಿಂಗ್ ಮಾಡಲು ನಿರ್ಧರಿಸಿದ್ದು, ಒಟ್ಟು 93.47 ಕಿ.ಮೀ ಉದ್ದದ ರಸ್ತೆಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ. ಪ್ರಮುಖವಾಗಿ ಹೊರವರ್ತುಲ ರಸ್ತೆಗಳನ್ನು ವೈಟ್‌ಟಾಪಿಂಗ್ ಆಗಿ ಪರಿವರ್ತಿಸಲು ಯೋಜನೆ ರೂಪಿಸಿದ್ದು, ಕಳೆದ ಶುಕ್ರವಾರದಿಂದಲೇ ಕಾಮಗಾರಿ ಆರಂಭವಾಗಿದೆ.
ಮೊದಲ ಪ್ಯಾಕೇಜ್‌ನಲ್ಲಿ ಬರುವ ಆರು ರಸ್ತೆಗಳು ಹಾಗೂ ಆರು ವೃತ್ತಗಳ ಅಭಿವೃದ್ಧಿ ಕಾಮಗಾರಿ ಗುತ್ತಿಗೆಯನ್ನು ಎನ್‌ಸಿಸಿ ಕಂಪೆನಿಗೆ ನೀಡಲಾಗಿದೆ. ಪ್ಯಾಕೇಜ್ 2ರಲ್ಲಿ 24 ರಸ್ತೆಗಳನ್ನು ಅಭಿವೃದ್ಧಿಪಡಿಸಿಲು ಉದ್ದೇಶಿಸಿದ್ದು ಮಧುಕಾನ್ ಪ್ರೈವೇಟ್ ಕಂಪೆನಿಗೆ ಗುತ್ತಿಗೆ ವಹಿಸಲಾಗಿದ್ದು, ಕಾಮಗಾರಿ ಪೂರ್ಣ ಗೊಳಿಸಲು 11 ತಿಂಗಳು ಕಾಲಾವಕಾಶ ನೀಡಲಾಗಿದೆ.
ಮೈಸೂರು ರಸ್ತೆಯಿಂದ ಕೆ.ಆರ್.ಪುರದವರೆಗಿನ ಹೊರ ವರ್ತುಲ ರಸ್ತೆಯನ್ನು ಯೋಜನೆಗೆ ಪರಿಗಣಿಸಿಲಾಗಿದ್ದು, ಶುಕ್ರವಾರದಿಂದಲೇ ಹೆಣ್ಣೂರು ರಸ್ತೆ ಜಂಕ್ಷನ್‌ನಿಂದ ಬೈಯಪ್ಪನಹಳ್ಳಿವರೆಗೆ ಹೋಗುವ ಮುಖ್ಯ ಕ್ಯಾರಿಯೇಜ್ ಮಾರ್ಗ ವೈಟ್‌ಟಾಪಿಂಗ್ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಯನ್ನು ಮುಂದಿನ ಡಿಸೆಂಬರ್ 6ರವರೆಗೆ ಕಾಮಗಾರಿ ನಡೆಸಲು ಸಂಚಾರ ಪೊಲೀಸರು ಅನುಮತಿ ನೀಡಿದ್ದಾರೆ.
ಇತ್ತೀಚೆಗೆ ಬಿಬಿಎಂಪಿ ಆಯುಕ್ತರು ವೈಟ್‌ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸಲು ಅನುಮತಿ ನೀಡುವಂತೆ ಸಂಚಾರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು. ಅದರಂತೆ ಸಂಚಾರ ಪೊಲೀಸ್ ಆಯುಕ್ತರಿಗೆ ಅನುಮತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಸಾರ್ವಜನಿಕರು ಸರ್ವಿಸ್ ರಸ್ತೆಗಳಲ್ಲಿಸ ಸಂಚಾರಿಸುವ ಮೂಲಕ ಸಹಕಾರ ನೀಡಬೇಕು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಕೋರಿದ್ದಾರೆ.