Advertisement
ಇದನ್ನು ಬೂದು ಬಣ್ಣದ ಹುಳ ಹುಡುಕ ಎಂದೂ ಕರೆಯುತ್ತಾರೆ. ಇದು 17 ಸೆಂ.ಮೀ ಗಾತ್ರ ಚಿಕ್ಕ ಹಕ್ಕಿ. ಹೊಗೆ ಕಪ್ಪು ಅಥವಾ ಬೂದು ಬಣ್ಣ ಈ ಹಕ್ಕಿಯಲ್ಲಿ ಕಾಣುವುದರಿಂದ ಇದಕ್ಕೆ ಬೂದು ಬಣ್ಣದ ಬಿಳಿಕುತ್ತಿಗೆ ಹುಳ ಹಿಡುಕ ಎಂಬ ಹೆಸರು ಸಹ ಬಂದಿದೆ. ಅರ್ಧ ವರ್ತುಲಾಕಾರವಾಗಿ ಬಿಚ್ಚಿದಾಗ ಬೂದು ಬಣ್ಣದ ಗರಿ ಕಾಣುತ್ತದೆ. ತುದಿಯಲ್ಲಿ ಬಿಳಿ ಬಣ್ಣದ ಮಚ್ಚೆ ಇದೆ. ಬೀಸಣಿಗೆಯಂತೆ ತನ್ನ ಬಾಲ ಎತ್ತಿ ಬಿಚ್ಚಿ, ಆಚೆ , ಈಚೆ ಅಲ್ಲಾಡಿಸುತ್ತಾ, ಇಲ್ಲವೇ, ಬಾಲ ಮುಚ್ಚಿ ಭೂಮಿಗೆ ಸಮಾನಾಂತರವಾಗಿ ಕುಳಿತುಕೊಳ್ಳುವುದರಿಂದ ಇದರ ಹೆಸರಿನ ಜೊತೆ ಬೀಸಣಿಗೆ ಬಾಲದ ಹಕ್ಕಿ ಎಂಬ ಹೆಸರು ಬಂದಿದೆ.
Related Articles
Advertisement
ಕೆಲವು ಜಾತಿಯ ಹಕ್ಕಿಗಳಲ್ಲಿ ಇದರ ಬಾಲ -ಇದರ ಶರೀರಕ್ಕಿಂತ ಉದ್ದವಾಗಿದೆ. ಅಲ್ಲದೇ ಇದರ ರೆಕ್ಕೆಯ ಉದ್ದಕ್ಕಿಂತ ಹೆಚ್ಚಿದೆ. ಇದರ ರೆಕ್ಕೆ ಫ್ಯಾನಿನಂತಿದೆ. ಇದು ತುಂಬಾ ಕರಾರುವಕ್ಕಾಗಿ ಹಾರಿ -ಅನೇಕ ರೆಕ್ಕೆ ಹುಳಗಳನ್ನು ಹಾರಿಕೆಯ ಮಧ್ಯದಲ್ಲೆ ಹಿಡಿದು ತಿನ್ನುತ್ತದೆ. ಟಿಂಟಿಣಿ, ಟಿಂಟಿಣಿ, ಟಿಂಟಿಣಿ ಎಂದು ಗಜ್ಜೆ ಸಪ್ಪಳದಂತೆ ಕೂಗುತ್ತದೆ. ಹೀಗೆ ಕೂಗುವಾಗ ತನ್ನ ಬಾಲವನ್ನು ಬೀಸಣಿಕೆಯಂತೆ ಎತ್ತಿ -ಆಚೆ ಈಚೆ ಕುಣಿಸಿ -ನಂತರ ಮಡಚಿಕೊಳ್ಳುವುದು. ನೀಲಗಿರಿ ಪರ್ವತ -ಹಿಮಾಲಯದ 2700 ಮೀಟರ್ ಎತ್ತರದ ಪ್ರದೇಶದಲ್ಲೂ ಇದು ಕಾಣುವುದು. ಕೆಲವೊಮ್ಮೆ ಚುಕ್-ಚುಕ್ ಎಂದು ಹಾರುವ ಹುಳ ಇಲ್ಲವೇ ಕೀಟಗಳನ್ನು ಹಿಡಿದಾಗ ವಿಜಯೋತ್ಸಾಹವನ್ನು ತೋರಿಸಿಕೊಳ್ಳಲು ಸಿಳ್ಳೆ ಸಹ ಹೊಡೆಯುತ್ತದೆ. ಸುಮಾರು 3 ಮೀಟರ್ ಎತ್ತರದ ಕಣಿವೆಯಲ್ಲಿ ಇದರ ಗೂಡನ್ನು ನಿರ್ಮಿಸುತ್ತದೆ. ಅದರಲ್ಲಿ ತಿಳಿ ಗುಲಾಬಿ ಬಣ್ಣದ ಮೊಟ್ಟೆಯ -ದಪ್ಪ ಭಾಗದಲ್ಲಿ ಕಂದುಗಪ್ಪು ಬಣ್ಣದ ಗೆರೆಗಳಿರುವ 2-3 ಮೊಟ್ಟೆ ಇಡುವುದು. ಇದರ ಮರಿಗಳ ಪೋಷಣೆ, ಗುಟುಕು ನೀಡುವುದು ,ಮರಿಗಳ ರಕ್ಷಣೆ ಗಂಡು-ಹೆಣ್ಣು ಸೇರಿ ಮಾಡುತ್ತವೆ.
ಪಿ.ವಿ.ಭಟ್ ಮೂರೂರು