ದಾವಣಗೆರೆ: ಬಡವರಿಗೂ ಸೂರು ಸಿಗಬೇಕೆಂಬ ಕಾಂಗ್ರೆಸ್‌ನ ಆಶಯದಂತೆ ನೀಡಿರುವ ಆಶ್ರಯ ಮನೆಗಳನ್ನು ಯಾರೂ ಸಹ ಪರಭಾರೆ ಮಾಡದೇ ಸರ್ಕಾರದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಮಂಗಳವಾರ ಗೃಹ ಕಚೇರಿ ನಡೆದ ಸರಳ ಸಮಾರಂಭದಲ್ಲಿ ಮಹಾನಗರಪಾಲಿಕೆ ವ್ಯಾಪ್ತಿಯ 41ನೇ ವಾರ್ಡ್‌ನ ಬೆಂಕಿನಗರದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ಮನೆಗಳನ್ನು ಒತ್ತೆ ಇಟ್ಟು ಯಾರೂ ಕೂಡ ಸಾಲ ಮಾಡದೆ ತಮ್ಮ ದುಡಿಮೆಯ ಮೂಲಕ ಸರಳ ಜೀವನ ನಡೆಸಬೇಕು.
ದಾವಣಗೆರೆಯಲ್ಲಿ ಬಹಳಷ್ಟು ಜನ ಇನ್ನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಅವರಿಗೆ ಸ್ವಂತ ಮನೆ ನಿರ್ಮಿಸಲು ಜಮೀನು ನೋಡಲಾಗುತ್ತಿದ್ದು, ಜಮೀನು ದೊರೆತ ತಕ್ಷಣ ಆಶ್ರಯ ಮನೆಗಳ ನಿರ್ಮಿಸಲಾಗುವುದು ಎಂದರು. ಈ ಹಿಂದೆ ತಾವು ಜಿಲ್ಲಾ ಸಚಿವರಾಗಿದ್ದಾಗ 14ರಿಂದ 15 ಸಾವಿರ ಆಶ್ರಯ ಮನೆಗಳ ನಿರ್ಮಿಸಿ ಅರ್ಹ ಬಡವರಿಗೆ ಹಂಚಿಕೆ ಮಾಡಲಾಗಿತ್ತು,
ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಆ ಮನೆಗಳ ಸಾಲವನ್ನು ಮನ್ನಾ ಮಾಡಿ ಇಂದು ಎಲ್ಲಾ ಆಶ್ರಯ ಮನೆಗಳಿಗೆ ಸ್ವಾಧೀನ ಮತ್ತು ಆಶ್ರಯ ಪತ್ರವಿತರಿಸಲಾಗಿದೆ ಎಂದು ತಿಳಿಸಿದರು. ಮೇಯರ್ ರೇಖಾ ನಾಗರಾಜ್, ಪಾಲಿಕೆ ಸದಸ್ಯರಾದ ಶಿವನಳ್ಳಿ ರಮೇಶ್, ಜೆ.ಎನ್. ಶ್ರೀನಿವಾಸ್, ಎಂ. ಹಾಲೇಶ್, ಶೈಲಾ ನಾಗರಾಜ್, ಶಿರಮಗೊಂಡನಹಳ್ಳಿ ರುದ್ರೇಶ್, ಆಶ್ರಯ ಸಮಿತಿ ಸದಸ್ಯರಾದ ಜರೀನಾ, ಕೆ.ಪಿ. ರವಿ ಧಣಿ ಇತರರು ಇದ್ದರು.