ದಾವಣಗೆರೆ: ಆಶ್ರಯ ಮನೆ ಪರಭಾರೆ ಮಾಡದೇ ಸರ್ಕಾರದ ಯೋಜನೆ ಸದುಪಯೋಗ ಪಡಿಸಿಕೊಳ್ಳಲು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಫಲಾನುಭವಿಗಳಿಗೆ ಕಿವಿಮಾತು ಹೇಳಿದರು. ಮಹಾನಗರ ಪಾಲಿಕೆ ಶನಿವಾರ ಎಸ್.ಎಂ. ಕೃಷ್ಣ ನಗರದ ಬಾಬು ಜಗಜೀವನ್‌ರಾಮ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಶ್ರಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
ಬಡವರಿಗೂ ಸೂರು ಸಿಗಬೇಕೆಂಬ ಕಾಂಗ್ರೆಸ್ ಪಕ್ಷದ ಆಶಯದಂತೆ ಆಶ್ರಯ ಮನೆ ನೀಡಲಾಗಿದೆ. ಯಾರೂ ಸಹ ಪರಭಾರೆ ಬಗ್ಗೆ ಯೋಚಿಸಬಾರದು ಎಂದರು. ಈ ಹಿಂದೆ ಎಸ್.ಎಸ್. ಮಲ್ಲಿಕಾರ್ಜುನ್ ಜಿಲ್ಲಾ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲೇ ಅತಿಹೆಚ್ಚು ಆಶ್ರಯ ಮನೆ ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದರು.
ಇಂದು ಬಹುತೇಕ ಎಲ್ಲ ಆಶ್ರಯ ಮನೆಗಳ ಫಲಾನುಭವಿಗಳಿಗೆ ಸ್ವಾಧಿನಪತ್ರ ವಿತರಿಸಲಾಗಿದೆ ಎಂದರು. ದಾವಣಗೆರೆ ವರ್ತುಲ ರಸ್ತೆಗಾಗಿ ನಿವೇಶನ ನೀಡಿದವರಿಗೆ ಆಶ್ರಯ ಮನೆಗಳನ್ನು ನಿರ್ಮಿಸುವ ಉದ್ದೇಶವಿದ್ದು, ಆಶ್ರಯ ಯೋಜನೆಯಲ್ಲಿ ಹಾಲಿ ಇರುವ 6 ಎಕರೆ ಜಮೀನಿನಲ್ಲಿ ಜಿ +1 ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗುವುದು ಎಂದರು.
ದಾವಣಗೆರೆ ನಗರ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಇದನ್ನು ಸಹಿಸದ ಕೆಲವರು ಜನರನ್ನು ದಾರಿ ತಪ್ಪಿಸುತ್ತಿದ್ದು, ಇಂತಹವರ ಬಗ್ಗೆ ಎಚ್ಚರದಿಂದ ಇರಬೇಕೆಂದು ತಿಳಿಸಿದ ಶಾಸಕರು, ಈ ಹಿಂದೆ ಡೂಡಾ ಅಧ್ಯಕ್ಷರಾಗಿದ್ದ ಬಿಜೆಪಿ ಮುಖಂಡರೋರ್ವರು ಜನತೆಗೆ ನೀಡಬೇಕಾಗಿದ್ದ ನಿವೇಶನಗಳನ್ನು ತಮ್ಮ ಸಂಬಂಧಿಧಿಕರ ಹೆಸರಿಗೆ ಮಾಡಿಕೊಂಡಿರುವುದು ಜನತೆಗೆ ತಿಳಿದಿದೆ ಎಂದರು.
ಇಡೀ ರಾಜ್ಯದಲ್ಲಿ ಬರ ಆವರಿಸಿ ಕುಡಿವ ನೀರಿಗೆ ತೊಂದರೆ ಇದ್ದರೂ ಸಹ ದಾವಣಗೆರೆ ನಗರದಲ್ಲಿ ಕುಡಿವ ನೀರಿಗೆ ಸಮಸ್ಯೆ ಎದುರಾಗಿಲ್ಲ. ಇನ್ನು 15-20 ದಿನಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳ ಮೂಲಕ ಜನತೆಗೆ ನೀರು ಒದಗಿಸಲಾಗುವುದು ಎಂದರು. ಮೇಯರ್ ರೇಖಾ ನಾಗರಾಜ್ ಮಾತನಾಡಿ, ರಸ್ತೆ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಎಲ್ಲರೂ ಮಾಡುತ್ತಾರೆ. ಆದರೆ, ಸೂರು ಒದಗಿಸಲು ಕೆಲವರಿಂದ ಮಾತ್ರ ಸಾಧ್ಯ.
ಅಂತಹ ಕೆಲಸ ಮಾಡಿದ ಕೀರ್ತಿ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ಗೆ ಸಲ್ಲುತ್ತದೆ. ಅವರಿಗೆ ನಾವೆಲ್ಲರೂ ಚಿರಋಣಿಯಾಗಿರಬೇಕು ಎಂದು ಹೇಳಿದರು. ಪಾಲಿಕೆ ಸದಸ್ಯ ಶಿವನಳ್ಳಿ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರ ಅಭಿವೃದ್ಧಿ ಕಾರ್ಯ ಸಹಿಸದ ಕೆಲ ಬಿಜೆಪಿ ಮುಖಂಡರು ಮೊಸರಲ್ಲಿ ಕಲ್ಲು ಹುಡುಕಿದಂತೆ ಸಣ್ಣ ಸಮಸ್ಯೆಗಳನ್ನೆ ದೊಡ್ಡದು ಎಂಬುದಾಗಿ ಬಿಂಬಿಸಿ, ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದರು.
ಪಾಲಿಕೆ ಸದಸ್ಯ ಬಸಪ್ಪ ಮಾತನಾಡಿ, ಬಿಜೆಪಿ ಮುಖಂಡರ ಟೀಕೆಗಳಿಗೆ ನಮ್ಮ ನಾಯಕರು ಅಭಿವೃದ್ಧಿ ಕಾರ್ಯದ ಮೂಲಕ ಉತ್ತರಿಸುತ್ತಿದ್ದಾರೆ ಎಂದರು. ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಹಾಲೇಶ್, ಮಾಜಿ ಮೇಯರ್ ಎಚ್.ಬಿ. ಗೋಣೆಪ್ಪ, ಆಯುಕ್ತ ಬಿ.ಎಚ್.ನಾರಾಯಣಪ್ಪ, ಆಶ್ರಯ ಸಮಿತಿ ಸದಸ್ಯರಾದ ಬಿ.ಎಂ. ಈಶ್ವರ್, ಕಲಂದರ್, ಸೌಭಾಗ್ಯ ಬಂಡಿ ನಾಗರಾಜ್, ಕೆ.ಪಿ. ರವಿ ಧಣಿ, ನಗರಸಭೆ ಮಾಜಿ ಸದಸ್ಯೆ ಪುಷ್ಪಾ ವೆಂಕಣ್ಣ ಮತ್ತಿತರರು ವೇದಿಕೆಯಲ್ಲಿದ್ದರು.