Advertisement

ಅತಿವೃಷ್ಟಿಗೆ ತುತ್ತಾಯ್ತು ಬಿಳಿ ಬಂಗಾರ

03:26 PM Nov 04, 2017 | |

ರಾಯಚೂರು: ಕಳೆದ ವರ್ಷ ಉತ್ತಮ ದರ ಸಿಕ್ಕು ಮಂದಹಾಸ ಬೀರಿದ್ದ ರೈತರು ಈ ಬಾರಿ ನಿರೀಕ್ಷೆಗೂ ಮೀರಿ ಹತ್ತಿ ಬಿತ್ತನೆ ಮಾಡಿದ್ದರು. ಆದರೆ, ಅತಿವೃಷ್ಟಿಯಿಂದ ಒಂದೆಡೆ ಇಳುವರಿ ಕುಗ್ಗಿದರೆ, ಮತ್ತೂಂದೆಡೆ ಬೆಲೆ ಕುಸಿದು ರೈತರು ಅಡಕತ್ತರಿಗೆ ಸಿಲುಕುವಂತಾಗಿದೆ.

Advertisement

ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಹತ್ತಿ ಬಿತ್ತನೆ ಮಾಡಲಾಗಿತ್ತು. ಕಳೆದ ಬಾರಿ ಕ್ವಿಂಟಲ್‌ಗೆ 5ರಿಂದ 6 ಸಾವಿರ ರೂ. ವರೆಗೆ ಬೆಲೆ ಸಿಕ್ಕಿದ್ದರಿಂದ ಈ ಬಾರಿಯೂ ಲಾಭದ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ, ಕಳೆದ ಮೂರು ವರ್ಷದಿಂದ ಬರದಿಂದ ನಲುಗಿದ್ದ ಜಿಲ್ಲೆ ಈ ಬಾರಿ ಅತಿವೃಷ್ಟಿಗೆ ತುತ್ತಾಗಿ ಕೈಗೆ ಬರಬೇಕಿದ್ದ ಬೆಳೆಗಳೆಲ್ಲ ಮಣ್ಣುಪಾಲಾಗಿದೆ. ಅದರಲ್ಲೂ ಹತ್ತಿ ಬೆಳೆಯಂತೂ ಸಂಪೂರ್ಣ ಹಾಳಾಗಿದೆ.

ಕಳೆದ ವರ್ಷ 48 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿತ್ತು, ಆದರೆ, ಈ ಬಾರಿ 98 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಈಗ ಜಿಲ್ಲಾಡಳಿತ ನಡೆಸಿದ ಸಮೀಕ್ಷೆ ಪ್ರಕಾರ 60,434 ಹೆಕ್ಟೇರ್‌ ಬೆಳೆಹಾನಿಯಾಗಿದ್ದು, ಅದರಲ್ಲಿ 34 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಹಾಳಾಗಿದೆ. ಒಟ್ಟಾರೆ 41.4 ಕೋಟಿ ರೂ. ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಕರೆಗೆ 8ರಿಂದ 10 ಕ್ವಿಂಟಲ್‌ ಹತ್ತಿ ಇಳುವರಿ ಬರುತ್ತಿತ್ತು. ಆದರೆ, ಈ ಬಾರಿ ಮೂರರಿಂದ ನಾಲ್ಕು ಕ್ವಿಂಟಲ್‌ ಬಂದರೆ ಹೆಚ್ಚು ಎನ್ನುವಂತಾಗಿದೆ. ಅತಿವೃಷ್ಟಿಯಿಂದ ಹೊಲಗಳಲ್ಲಿ ನೀರು ನಿಂತು ಬೆಳೆಯೆಲ್ಲ ಕೊಳೆತರೆ, ಮತ್ತೂಂದೆಡೆ ಹತ್ತಿಯೊಳಗೆ ಮೊಳಕೆ ಬಂದು ಬೆಳೆಯೆಲ್ಲ ಹಾಳಾಗಿದೆ. ಅಳಿದುಳಿದ ಹತ್ತಿಯನ್ನು ಬಿಡಿಸಿ ಮಾರುಕಟ್ಟೆಗೆ ತರುವಷ್ಟರಲ್ಲಿ
ರೈತರು ಹೈರಾಣಾಗಿದ್ದು, ಇಲ್ಲಿನ ದರ ಕಂಡು ಮಮ್ಮಲ ಮರುಗುವಂಗಾಗಿದೆ.

ಕಪ್ಪಾದ ಬಿಳಿ ಬಂಗಾರ: ಹತ್ತಿ ಕಾಯಿಗಳು ಒಡೆದಾಗ ಅದರ ಅಂದ ನೋಡುವುದೇ ಸೊಗಸು. ಹಸಿರ ಹೊಲದಲ್ಲಿ ಮೊಸರು ಚೆಲ್ಲಿದಾಂಗ ಎಂಬ ಬಣ್ಣನೆ ಕೇಳಿ ಬರುತ್ತದೆ. ಆದರೆ, ಈಬಾರಿ ಸತತವಾಗಿ ಸುರಿದ ಮಳೆಗೆ ಬೆಳೆಯೆಲ್ಲ ನೆಲಕ್ಕೆ ಬಾಗಿ ಬೆಳೆಗೆ ಕೆಸರು ಸಿಡಿದು ಕಪ್ಪಾಗಿದೆ. ಇದರಿಂದ ದರ ನಿಗದಿ ಮಾಡುವುದಿರಲಿ ಖರೀದಿಗೂ ವರ್ತಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಎಷ್ಟಾದರೂ ಕೊಡಿ ಎಂದು ರೈತರು ಅಂಗಲಾಚುವ ಸನ್ನಿವೇಶ ಎದುರಾಗಿದೆ.

Advertisement

ಕೂಲಿಗೂ ಸಾಲದ ಹಣ: ಒಂದು ಎಕರೆಗೆ ಏನಿಲ್ಲ ಎಂದರೂ 20ರಿಂದ 30 ಸಾವಿರ ರೂ. ಖರ್ಚು ಮಾಡಿದ್ದಾರೆ. ಈ ಬಾರಿ ಬಿತ್ತನೆ ಪ್ರಮಾಣ ಹೆಚ್ಚಾಗಿದ್ದು, ಏಕಕಾಲಕ್ಕೆ ಇಳುವರಿ ಬಂದ ಕಾರಣ ಹತ್ತಿ ಬಿಡಿಸಲು ಕೂಲಿಗಳು ಸಿಗದಾಗಿದೆ. ಹೀಗಾಗಿ ದುಬಾರಿ ಹಣ ನೀಡಿ ಬೇರೆಡೆಯಿಂದ ಕರೆ ತರುವಂಥ ಸ್ಥಿತಿ ಇತ್ತು. ಈಗ ಇಷ್ಟು ಕಡಿಮೆ ದರಕ್ಕೆ ಹತ್ತಿ ಮಾರಾಟವಾಗುತ್ತಿರುವುದು ರೈತರಿಗೆ ಲಾಭ ತರುವುದಿರಲಿ ಮಾಡಿದ ಖರ್ಚು ಹಿಂದಿರುಗಿದರೆ ಸಾಕು ಎನ್ನುವಂತಾಗಿದೆ. ಅಧಿಕಾರಿಗಳು ಈಗ ಬೆಳೆ ಹಾನಿ ಸಮೀಕ್ಷೆ ನಡೆಸುತ್ತಿದ್ದು, ಶೀಘ್ರದಲ್ಲೇ ಪರಿಹಾರ ವಿತರಿಸಿದರೆ ಅನುಕೂಲವಾಗುತ್ತದೆ. ಇಲ್ಲವಾದರೆ, ಸಾಲದ ಕೂಪಕ್ಕೆ ಸಿಲುಕಿ ನಲುಗುವುದು ತಪ್ಪುವುದಿಲ್ಲ ಎಂದು ನೊಂದು ನುಡಿಯುತ್ತಾರೆ ರೈತರು.

ಬಿತ್ತನೆ ಪ್ರಮಾಣ ದುಪ್ಪಟ್ಟು: ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಹತ್ತಿ ಬಿತ್ತನೆ ಪ್ರಮಾಣ ದುಪ್ಪಟ್ಟು ಹೆಚ್ಚಾಗಿದೆ. ಅತಿವೃಷ್ಟಿಯಿಂದ ಸಾಕಷ್ಟು ಹತ್ತಿ ಬೆಳೆ ಹಾನಿಯಾಗಿದ್ದು, ಸಮೀಕ್ಷೆ ನಡೆಸಿ ವರದಿ ನೀಡಲಾಗಿದೆ. ಕಳೆದ ಬಾರಿ ಬರದಿಂದ ಬೆಳೆ ಹಾನಿಗೀಡಾಗಿತ್ತು. ಆಗ ರೈತರಿಗೆ ಪರಿಹಾರ ನೀಡಲಾಗಿದೆ. ಡಾ| ಡಿ. ಕಿರಣಕುಮಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕರು

4 ಸಾವಿರ ರೂ. ದರ: ನಮ್ಮ ಕಂಪನಿಗೆ ನಿತ್ಯ 500ರಿಂದ 700 ಕ್ವಿಂಟಲ್‌ ಹತ್ತಿ ಆವಕವಾಗುತ್ತಿದೆ. ಈ ಬಾರಿ ಅತಿವೃಷ್ಟಿಯಿಂದ ಹತ್ತಿ ಕಪ್ಪಾಗಿದೆ. ಆದ್ದರಿಂದ ದರ ಕುಸಿತವಾಗಿದ್ದು, 2800 ರೂ. ದಿಂದ 4 ಸಾವಿರ ರೂ. ದವರೆಗೆ ದರ ನಿಗದಿ ಮಾಡಲಾಗಿದೆ. ಪ್ರವೀಣ, ಖಾಸಗಿ ಹತ್ತಿ ಮಿಲ್‌ ವ್ಯವಸ್ಥಾಪಕ

30,400 ಕ್ವಿಂಟಲ್‌ ಆವಕ : ನಗರದ ರಾಜೇಂದ್ರ ಗಂಜ್‌ಗೆ ಕಳೆದ ಒಂದು ತಿಂಗಳಿಂದ ರೈತರು ಹತ್ತಿ ತರುತ್ತಿದ್ದಾರೆ.
ಈವರೆಗೆ 30,400 ಕ್ವಿಂಟಲ್‌ ಹತ್ತಿ ಬಂದಿದೆ. ನ.2ರಂದು 4882 ಕ್ವಿಂಟಲ್‌ ಬಂದಿದ್ದರೆ, ಶುಕ್ರವಾರ 1782 ಕ್ವಿಂಟಲ್‌
ಹತ್ತಿ ಆವಕವಾಗಿದೆ. 3200ರಿಂದ 4300 ರೂ. ವರೆಗೆ ದರ ನಿಗದಿ ಮಾಡಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ದರ ಸಾಕಷ್ಟು ಕಡಿಮೆಯಾಗಿದೆ. 
ರಘುಪತಿ ಭಟ್‌, ಎಪಿಎಂಸಿ ಕಾರ್ಯದರ್ಶಿ

ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ : ಕಳೆದ ಬಾರಿ ಉತ್ತಮ ಬೆಲೆ ಸಿಕ್ಕ ಕಾರಣ ಈ ಬಾರಿ ಸಾಕಷ್ಟು ರೈತರು ಹತ್ತಿ ಬಿತ್ತನೆ ಮಾಡಿದ್ದಾರೆ. ಆದರೆ, ವರ್ತಕರು ಮಳೆಗೆ ಇಳುವರಿ ಸರಿಯಿಲ್ಲ ಎಂದು ಬೇಕಾಬಿಟ್ಟಿ ದರಕ್ಕೆ ಖರೀದಿಸುತ್ತಿದ್ದಾರೆ. ಸರ್ಕಾರ ಕೂಡಲೇ ಖರೀದಿ ಕೇಂದ್ರ ಆರಂಭಿಸಿ ರೈತರ ನೆರವಿಗೆ ಧಾವಿಸಲಿ. 
ಲಕ್ಷ್ಮಣಗೌಡ ಕಡಂಗದಿನ್ನಿ, ರೈತ ಸಂಘದ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next