ಹಳ್ಳಿಗಳಲ್ಲಿ ಇದನ್ನು ಮೀನು ತಿನ್ನುವ ಹಕ್ಕಿ ಎಂದು ಕರೆಯುತ್ತಾರೆ. ನಮ್ಮ ಮನೆಯ ಹತ್ತಿರದ ಚಂದರ್ಕಲ ಮರದ ಮೇಲೆ ಕುಳಿತು ಅಲ್ಲೇ ಪಕ್ಕದಲ್ಲಿ ಇರುವ ಹುಲ್ಲು ಮೈದಾನ ಅಥವಾ ಕರಡದ ಬೇಣದಲ್ಲಿ ಹುಲ್ಲುಹುಳ, ಮಿಡತೆಗಳಿಗೆ ಹೊಂಚುಹಾಕುತ್ತಾ ಅದನ್ನು ಹಿಡಿದಾಗ ಕ್ಕೆ ಕ್ಕೆಕ್ಕೆ ಕ್ಕೇ, ಕ್ಕೆ ಕ್ಕೆ ಕ್ಕೆಕ್ಕೇ,ಕ್ಕೆಕ್ಕೆ ಕ್ಕೆಕ್ಕೇ ಎಂದು ಮರದಮೇಲೆ ಕುಳಿತು ವಿಜಯೋತ್ಸಾಹ ಆಚರಿಸುವುದನ್ನು ಅನೇಕ ಬಾರಿ ಕಂಡಿದ್ದೇನೆ. ಎತ್ತರದ ಮರದ ಮೇಲಿಂದ ತನ್ನ ಬೇಟೆಯ ಹುಲ್ಲು ಮಿಡತೆಯನ್ನು ಹೊಂಚುಹಾಕಿ ಕೂತಿದ್ದು ಮೇಲಿಂದ ಒಮ್ಮಲೆ ಧುಮುಕಿ ಅದನ್ನು ಹಿಡಿಯುವ ಪರಿಣತಿ ಇದಕ್ಕಿದೆ. ಇದು ಕರಾರುವಾಕ್ಕಾಗಿ ಗುರಿ ಇಡುವುದು. ಹೀಗೆ ಹುಳಗಳನ್ನು, ಕಪ್ಪು ಇರುವೆ, ಗೊದ್ದ(ದೊಡ್ಡ ಕಪ್ಪು$ ಇರುವೆ) ಇದು ಬೆಲ್ಲದ ಹತ್ತಿರ ಬರುವುದರಿಂದ ಹಳ್ಳಿ ಭಾಷೆಯಲ್ಲಿ ಗೊದ್ದ ಇರುವೆ ಎಂದು ಕರೆಯುತ್ತಾರೆ.
ಇನ್ನೊಂದು ಕಪ್ಪಿರುವೆ ಸ್ವಲ್ಪಚಿಕ್ಕದು. ಅದು ಕಚ್ಚಿದಾಗ ತುಂಬಾ ಉರಿಯಾಗುವುದರಿಂದ ಅದನ್ನು ಕಟ್ಟೆರ ಎಂದೂ ಕರೆಯುತ್ತಾರೆ. ಇವು ಈ ಮಿಂಚುಳ್ಳಿಗೆ ತುಂಬಾ ಪ್ರಿಯ. ಅದನ್ನು ಹಿಡಿದು ಕುಳಿತ ಜಾಗಕ್ಕೆ ಬಂದು ಅದನ್ನು ಕುಳಿತ ಮರದ ಟೊಂಗೆಗೆ ಬಡಿದು ಸಾಯಿಸಿ ತಿನ್ನುವುದು. ಕೊಟ್ಟೆಜೊಳಕ, ಊಸರವಳ್ಳಿ ಅಥವಾ ಓತಿಕ್ಯಾತವನ್ನು ಹಿಡಿದು ಹೀಗೆ ಮರದಟೊಂಗೆಗೆ ಬಡಿದು ಸಾಯಿಸಿ ತಿನ್ನುವುದು. ಬೇಟೆಯಾಡಿದ ಸಂದರ್ಭ ದಲ್ಲೆಲ್ಲಾ ಇದರ ವಿಜಯೋತ್ಸಾದ ಕಿರುಚಲು ಕೂಗು ಇದ್ದೇ ಇರುವುದು. ಇದರಿಂದ ಇದು ಇರುವುದನ್ನು ತಿಳಿಯುವುದು ಸುಲಭ. ಇದು 28 ಸೆಂ.ಮೀ ದೊಡ್ಡದಾಗಿದೆ. ದೇಹದ ಗಾತ್ರಕ್ಕೆ ಹೋಲಿಸಿದರೆ ಬಲವಾದ ದೊಡ್ಡ ಚುಂಚು ಇರುತ್ತದೆ. ರಕ್ತ ವರ್ಣದ ಚುಂಚು ಬೇಟೆ ಕಂಡಾಗ ತಲೆ ಕುಣಿಸುತ್ತಾ ಆಚೆ ಈಚೆ ಮುಂದೆ ಹಿಂದೆ ಕುತ್ತಿಗೆ ಆಡಿಸುತ್ತಾ ಗುರಿ ಇಡುವ ಪರಿ ವಿಶೇಷ.
ಇದರ ಕಣ್ಣಿನ ದೃಷ್ಟಿ ತುಂಬಾ ಸೂಕ್ಷ್ಮ. ಎದೆಯಲ್ಲಿರುವ ಬಿಳಿ ಎದೆಹಾರದಂತೆ ಕಾಣುವ ಬಿಳಿ ಬಣ್ಣ ದಿಂದಾಗಿ ಇದಕ್ಕೆ ಬಿಳಿ ಎದೆ ಮಿಂಚುಳ್ಳಿ ಎಂಬ ಅನ್ವರ್ಥಕ ಹೆಸರು ಬಂದಿದೆ. ಬೆಳಗ್ಗೆ ಸಾಯಂಕಾಲದ ಹೊತ್ತಿನಲ್ಲಿ ಮತ್ತು ಕೆಲವೊಮ್ಮೆ ಬಿಸಿಲಿನ ಹೊತ್ತಿನಲ್ಲಿ ಮರದ ನೆರಳಿರುವ ಜಾಗದಲ್ಲಿ ಟೆಲಿಫೋನ್ ತಂತಿ, ವಿದ್ಯುತ್ ತಂತಿಗಳ ಮೇಲೆ ಕುಳಿತಿರುತ್ತದೆ.
ದೊಡ್ಡ ಕೊಕ್ಕು, ಚಿಕ್ಕ ಚಿಕ್ಕ ಕಾಲೆºರಳು ಇದ್ದು ಗುಲಾಬಿ ಬಣ್ಣ. ಅದರಲ್ಲಿ ಕಂದು ಬಣ್ಣದ ಉಗುರುಗಳಿರುತ್ತವೆ. ಮೂರು ಬೆರಳು ಮುಂದೆ, ಸ್ವಲ್ಪ ಹೆಚ್ಚು ದಪ್ಪದಾದ ಚಿಕ್ಕ ಬೆರಳು ಹಿಂದೆ ಇರುತ್ತದೆ. ದೇಹದ ಗಾತ್ರಕ್ಕೆ ಹೋಲಿಸಿದರೆ ಕಾಲು ತುಂಬಾ ಚಿಕ್ಕದು. ದಪ್ಪ ಕುತ್ತಿಗೆ . ಚಾಕಲೇಟ್ ಬಣ್ಣದ ಕಂದು ತಲೆ, ಬೆನ್ನಿನ ಹಿಂದೆ ಕುತ್ತಿಗೆ ಕೆಳಗಡ್ಡೆ ಇಂಗ್ಲೀಷಿನ “ವಿ’ ಅಕ್ಷರ ಹೋಲುವ ವರ್ಣ ವಿನ್ಯಾಸ ಇದೆ. “ವಿ’ ಒಳಭಾಗದಲ್ಲಿ ನೀಲಿ ಬಣ್ಣ, ರೆಕ್ಕೆ ಬುಡದಲ್ಲಿ ಬೆನ್ನ ಭಾಗದಲ್ಲಿ ನೀಲಿವರ್ಣ, ರೆಕ್ಕೆ ಅಂಚಿನಲ್ಲಿ ಕಂದು ಬಣ್ಣದಿಂದ ಕೂಡಿರುತ್ತದೆ. ರೆಕ್ಕೆಯ ಅಂಚಿನಲ್ಲಿ ಕಂದು ಬಣ್ಣದ ಚಾಕಲೇಟ್ ದಪ್ಪ ಗೆರೆ ಇದೆ. ಹಾರುವಾಗ ರೆಕ್ಕೆಯಲ್ಲಿರುವ ಬಿಳಿಬಣ್ಣದ ಮಚ್ಚೆ ಕಾಣುತ್ತದೆ. ನೀಲಿ, ಕಪ್ಪು$ ಚಾಕಲೇಟ್ ಬಣ್ಣ, ಬಿಳಿ ಎದೆ , ರೆಕ್ಕೆಯ ಬಿಳಿ ಮಚ್ಚೆ, ನೀಲಿ ಮತ್ತು ಕಂದು ಬಣ್ಣ ಮಿಶ್ರಣದ ಸುಂದರವಾದ ಪುಕ್ಕ ಇದನ್ನು ಗಮನಿಸಿದರೆ ಇದು ಬಣ್ಣ ಬಣ್ಣದ ಸುಂದರ ಹಕ್ಕಿ ಎಂದರೆ ತಪ್ಪಾಗಲಾರದು.
ಇದು ಭಾರತದುದ್ದಕ್ಕೂ ಕಾಣುತ್ತದೆ. ದೊಡ್ಡ ಚುಂಚಿನ ಹೆಮ್ಮಿಂಚ್ಚುಳ್ಳಿ, ಬಿಳಿಎದೆ ಮಿಂಚುಳ್ಳಿ, ಕಿರು ಮಿಂಚುಳ್ಳಿ, ಹಸಿರು ಚಿಕ್ಕ ಮಿಂಚುಳ್ಳಿ , ಕಿವಿಹತ್ತಿರ ಬಿಳಿ ಮಚ್ಚೆ ಇರುವ ಮಿಂಚುಳ್ಳಿ , ಜಿಬ್ರಾದ ಹಾಗೆ ಬಿಳಿ, ಕಪ್ಪು ಮೈಬಣ್ಣ ಇರುವ ಮಿಂಚುಳ್ಳಿ ನನ್ನ ಅಧ್ಯಯನದಲ್ಲಿ ಸಿಕ್ಕಿವೆ. ಕೆರೆ, ನದಿ, ಹಳ್ಳ, ಚಿಕ್ಕ ತೊರೆ, ಗಜನೀ ಪ್ರದೇಶ, ಜೌಗು ಭಾಗ, ಬೆಟ್ಟ ತೋಟಗಳ ಪಟ್ಟಿ, ಇಲ್ಲೆಲ್ಲ ಈ ಹಕ್ಕಿ ಕಾಣುವುದು ಸಾಮಾನ್ಯ. ಕುಮಟಾ ಹೊನ್ನಾವರ, ಅಂಕೋಲಾ, ಯಲ್ಲಾಪುರ, ಬನವಾಸಿ, ಗುಡವಿ, ಮೂರೂರು ಸಪ್ಪಿನ ಹೊಸಳ್ಳಿ ಈ ಭಾಗದಲ್ಲಿ ಅಧ್ಯಯನ ನಡೆಸಿದ್ದೇನೆ. ಇದು ನೀರಿನ ಹತ್ತಿರ ಇರುವುದಾದರೂ ಬೆಟ್ಟ ಪ್ರದೇಶದಲ್ಲೂ ಕಾಣುವುದು. ಭಾರತದ ಮೈದಾನ ಪ್ರದೇಶದಲ್ಲಿ, ಬಾಂಗ್ಲಾದೇಶ, ಪಾಕಿಸ್ತಾನ, ಸಿಲೋನ್, ಬರ್ಮಾಗಳಲ್ಲಿ ಇದೆ.
ಮಿಡತೆ , ಓತಿಕ್ಯಾತ, ಮೀನು, ಏಡಿ ಇದಕ್ಕೆ ಪ್ರಿಯ ಆಹಾರ. ಮಾರ್ಚ್‌ನಿಂದ ಜುಲೈ ಅವಧಿಯಲ್ಲಿ ಮರಿಮಾಡುವ ಸಮಯ. ನೀರುಝರಿಯ ಪಕ್ಕದವರೆಗೆ (ಗೋಡೆ), ಭೂಮಿಗೆ ಸಮಾನಾಂತರವಾಗಿ ಒಟ್ಟೆಕೊರೆದು ಗೂಡು ನಿರ್ಮಿಸುತ್ತದೆ. ಇದರ ಗೂಡಿನ ಗುಳಿ ಇಂಗ್ಲೀಷಿನ ಟಿ ಆಕಾರದಲ್ಲಿರುತ್ತದೆ. ಬಾಯಿ ವರ್ತುಲಾಕಾರ. ಗೂಡಿನ ತುದಿ ಹೆಚ್ಚು ಅಗಲ ಇರುತ್ತದೆ. ಇದು ಸಾಮಾನ್ಯವಾಗಿ 8 ಇಂಚು ಉದ್ದ ಇದ್ದು ತುದಿಯಲ್ಲಿ 6 ಇಂಚು ಇರುತ್ತದೆ. ಅಲ್ಲಿ ಮರಿ ಬೇರೆ ವೈರಿಗಳಿಗೆ ಕಾಣದಂತೆ ಇರಲು ಅನುಕೂಲ.
ತೆರೆದ ಬಾವಿಯ ದರೆಯಮಣ್ಣಿನಲ್ಲೂ ಒಟ್ಟೆ ಕೊರೆದು ಗೂಡು ಮಾಡುತ್ತವೆ ಇವು. ಆ ಸಂದರ್ಭದಲ್ಲಿ ಹಾರಲು ಪ್ರಾರಂಭಿಸುವ ಮರಿ ನೀರಿಗೆ ಬಿದ್ದು ಸಾಯುವುದೂ ಇದೆ. ಈ ಸಂದರ್ಭದಲ್ಲಿ ಗೂಡಿನ ಕೆಳಗೆ ಬಲೆ ಇಟ್ಟು ಮರಿಗಳನ್ನು ಕಾಪಾಡಿದ್ದೇನೆ. ಇವುಗಳ ಮರಿ ರಕ್ಷಣೆಗೆ, ಮರಿಗಳಿಗೆ ಕೊಡುವ ಆಹಾರದ ವೈವಿಧ್ಯತೆ, ಪ್ರಮಾಣ ಕುರಿತು ಅಧ್ಯಯನ ನಡೆಯಬೇಕಿದೆ. ಗಂಡು ಹೆಣ್ಣು ಒಂದೇರೀತಿ ಇರುತ್ತದೆ. ಬಿಳಿ ಬಣ್ಣದ 4ರಿಂದ 7 ಮೊಟ್ಟೆ ಇಡುತ್ತದೆ. ಗಂಡು ಹೆಣ್ಣು ಮೊಟ್ಟೆಗಳಿಗೆ ಎರಡೂಕಾವು ಕೊಟ್ಟು ಮರಿಮಾಡುತ್ತದೆ. ಮರಿಗಳ ಪಾಲನೆ ಮತ್ತು ಗುಟುಕು ಕೊಡುವುದು, ಮುಂತಾದ ಕಾರ್ಯವನ್ನು ಗಂಡು ಹೆಣ್ಣೂ ಎರಡೂ ಸೇರಿ ಮಾಡುತ್ತವೆ.